ವಿಳಂಬವಾಗುತ್ತಿದೆ ‘ಜನ ನಾಯಗನ್’ ರಿಲೀಸ್; ಚುನಾವಣೆ ಘೋಷಣೆ ಆದರೆ ಸದ್ಯಕ್ಕಿಲ್ಲ ಬಿಡುಗಡೆ

ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಚಿತ್ರದ ಬಿಡುಗಡೆಗೆ ಸೆನ್ಸಾರ್ ಮಂಡಳಿಯಿಂದ ಅಡ್ಡಿಯಾಗಿದೆ. 'ಯು/ಎ 16+' ಪ್ರಮಾಣಪತ್ರಕ್ಕಾಗಿ ಕೆವಿಎನ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಮುಂಬರುವ ತಮಿಳುನಾಡು ಚುನಾವಣೆಗಳು ಚಿತ್ರದ ಬಿಡುಗಡೆಯನ್ನು ಮತ್ತಷ್ಟು ಮುಂದೂಡುವ ಸಾಧ್ಯತೆ ಇದೆ. ಪ್ರಕರಣದ ಬಗ್ಗೆ ಇಲ್ಲಿದೆ ಮಾಹಿತಿ.

ವಿಳಂಬವಾಗುತ್ತಿದೆ ‘ಜನ ನಾಯಗನ್’ ರಿಲೀಸ್; ಚುನಾವಣೆ ಘೋಷಣೆ ಆದರೆ ಸದ್ಯಕ್ಕಿಲ್ಲ ಬಿಡುಗಡೆ
Jana Nayagan

Updated on: Jan 21, 2026 | 8:45 AM

ದಳಪತಿ ವಿಜಯ್ ನಟನೆಯ, ಕೆವಿಎನ್ ನಿರ್ಮಾಣದ ‘ಜನ ನಾಯಗನ್’ (Jana Nayagan) ಚಿತ್ರದ ರಿಲೀಸ್ ದಿನಾಂಕ ಇನ್ನೂ ಅಧಿಕೃತವಾಗಿಲ್ಲ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಸಮಸ್ಯೆ ಆಗಿದೆ. ಸಿನಿಮಾಗೆ ‘ಯು/ಎ 16+’ ಸರ್ಟಿಫಿಕೇಟ್ ನೀಡಲು ನಿರ್ಧರಿಸಿದ್ದ ಸೆನ್ಸಾರ್ ಮಂಡಳಿ, ನಂತರ ಈ ಬಗ್ಗೆ ಅಪಸ್ವರ ತೆಗೆದಿತ್ತು. ಹೀಗಾಗಿ, ಸೆನ್ಸಾರ್ ಪತ್ರವನ್ನು ನೀಡದೇ ಸತಾಯಿಸುತ್ತಿದೆ. ಈ ವಿಷಯದಲ್ಲಿ ಕೆವಿಎನ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿದೆ. ಕೋರ್ಟ್​​ನಲ್ಲಿಯೂ ಸಿನಿಮಾಗೆ ಹಿನ್ನಡೆ ಆಗುತ್ತಿದ್ದು, ರಿಲೀಸ್ ದಿನಾಂಕ ಇನ್ನೂ ಸ್ಪಷ್ಟವಾಗುತ್ತಿಲ್ಲ.

ಮದ್ರಾಸ್ ಹೈಕೋರ್ಟ್​​ನ ಸಿನಿಮಾಗೆ ‘ಯುಎ’ 16+ ಸರ್ಟಿಫಿಕೇಟ್ ನೀಡಲು ಆದೇಶಿಸಿತ್ತು. ನಂತರ ಸಂಜೆ ವೇಳೆಗೆ ತೀರ್ಪನ್ನು ಬದಲಿಸಿದ್ದ ಕೋರ್ಟ್, ತನ್ನದೇ ಆದೇಶಕ್ಕೆ ತಡೆ ನೀಡಿತ್ತು. ಈಗ ಮದ್ರಾಸ್ ಹೈಕೋರ್ಟ್​​ನ ಡಿವಿಷನ್ ಬೆಂಚ್ ಮಂಗಳವಾರ (ಜನವರಿ 20) ಈ ಪ್ರಕರಣದ ವಿಚಾರಣೆ ನಡೆಸಿದೆ. ಆದರೆ ಯಾವುದೇ ತೀರ್ಪು ಹೊರ ಬಿದ್ದಿಲ್ಲ.

ಸೆನ್ಸಾರ್ ಮಂಡಳಿ ಪರವಾಗಿ ಹಾಜರಾದ ವಕೀಲರು ಸಿನಿಮಾ ತಂಡದ್ದೇ ತಪ್ಪಿದೆ ಎಂಬರ್ಥದಲ್ಲಿ ವಾದಿಸಿದರು. ಜನವರಿ 6ರಂದು ಸಿನಿಮಾನ ಪುನರ್​ವಿಮರ್ಶೆ ಸಮಿತಿಗೆ ಕಳಿಸುವುದಾಗಿ ತಂಡಕ್ಕೆ ತಿಳಿಸಲಾಯಿತು. ಆದರೆ, ತಂಡದವರು ಇದನ್ನು ಪ್ರಶ್ನೆ ಮಾಡಿರಲಿಲ್ಲ ಎಂದು ವಕೀಲರು ವಾದಿಸಿದರು. ‘ಓರ್ವ ನೀಡಿದ ದೂರಿನಿಂದ ಪ್ರಕರಣವನ್ನು ಇಷ್ಟರ ಮಟ್ಟಿಗೆ ಎಳೆದುಕೊಂಡು ಹೋಗಲಾಗುತ್ತಿದೆ. ದೂರುದಾರ ಪ್ರಶ್ನೆ ಮಾಡಿದ ದೃಶ್ಯವನ್ನು ಈಗಾಗಲೇ ತೆಗೆದುಹಾಕಿದ್ದೇವೆ’ ಎಂದು ಕೋರ್ಟ್​​ಗೆ ತಂಡ ಮಾಹಿತಿ ನೀಡಿದೆ.

ಇದನ್ನೂ ಓದಿ: ಸುಪ್ರೀಂಕೋರ್ಟ್​​ನಲ್ಲಿ ‘ಜನ ನಾಯಗನ್’ಗೆ ಹಿನ್ನಡೆ, ಚೆಂಡು ಮತ್ತೆ ಹೈಕೋರ್ಟ್ ಅಂಗಳಕ್ಕೆ

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜನವರಿ 5ರಂದು ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಸಿನಿಮಾಗೆ ಪ್ರಮಾಣಪತ್ರ ಸಿಕ್ಕಿದ್ದರೆ ಜನವರಿ 26ರಂದು ಚಿತ್ರ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅದೂ ಸಾಧ್ಯವಿಲ್ಲ ಎನ್ನಲಾಗುತ್ತಿದೆ. ದಳಪತಿ ವಿಜಯ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದಕ್ಕಾಗಿ, ಪಕ್ಷ ಸ್ಥಾಪನೆ ಮಾಡಿದ್ದಾರೆ. ಒಂದೊಮ್ಮೆ ತಮಿಳುನಾಡು ಚುನಾವಣಾ ದಿನಾಂಕ ಘೋಷಣೆ ಆದರೆ, ತಂಡಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಆಗ ರಿಲೀಸ್ ಮತ್ತಷ್ಟು ಮುಂದಕ್ಕೆ ಹೋಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:44 am, Wed, 21 January 26