
ದಳಪತಿ ವಿಜಯ್ (Thalapathy Vijay), ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ಜೊತೆ ಜೊತೆಯಾಗಿ ಸಾಗುತ್ತಿದ್ದಾರೆ. ಆದರೆ ತಾವು ಸಿನಿಮಾ ಪಯಣವನ್ನು ಮುಗಿಸುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಈಗ ಚಿತ್ರೀಕರಣಗೊಳ್ಳುತ್ತಿರುವ ‘ಜನ ನಾಯಗನ್’ ಅವರ ಕೊನೆಯ ಸಿನಿಮಾ ಆಗಲಿದೆಯಂತೆ. ‘ಜನ ನಾಯಗನ್’ ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ. ಸಿನಿಮಾದ ಅದ್ಧೂರಿ ಪ್ರಚಾರಕ್ಕೆ ವಿಜಯ್ ಚಾಲನೆ ನೀಡಲಿದ್ದು, ಸಿನಿಮಾದ ಆಡಿಯೋ ಲಾಂಚ್ ಇವೆಂಟ್ ಅನ್ನು ವಿದೇಶದಲ್ಲಿ ಆಯೋಜಿಸಲಾಗುತ್ತಿದೆ. ಆದರೆ ಕೆಲವು ನಿಯಮಗಳನ್ನು ಅಲ್ಲಿನ ಸ್ಥಳೀಯ ಪೊಲೀಸರು ಹೇರಿದ್ದಾರೆ.
ನೆರೆಯ ರಾಷ್ಟ್ರವಾದ ಮಲೇಷ್ಯಾನಲ್ಲಿ ವಿಜಯ್ ಅವರ ‘ಜನ ನಾಯಗನ್’ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. ಮಲೇಷ್ಯಾನಲ್ಲಿ ಸಾಕಷ್ಟು ತಮಿಳು ಜನರಿದ್ದು, ಮಲೇಷ್ಯಾ, ತಮಿಳರಿಗೆ ಎರಡನೇ ತಮಿಳುನಾಡು ಎಂಬಂತೆ ಆಗಿದೆ. ಇದೇ ಕಾರಣಕ್ಕೆ ವಿಜಯ್ ಅವರು ಇಲ್ಲಿ ಆಡಿಯೋ ಲಾಂಚ್ ಆಯೋಜಿಸಿದ್ದಾರೆ. ಈ ಹಿಂದೆ ಸಹ ಕೆಲವಾರು ತಮಿಳು ಸಿನಿಮಾಗಳ ಕಾರ್ಯಕ್ರಮಗಳು ಮಲೇಷ್ಯಾನಲ್ಲಿ ನಡೆದಿವೆ. ಆದರೆ ಈ ಬಾರಿ ವಿಜಯ್ಗೆ ಕೆಲವು ಕಠಿಣ ನಿಯಮಗಳನ್ನು ಸ್ಥಳೀಯ ಪೊಲೀಸರು ಹೇರಿದ್ದಾರೆ.
ಮಲೇಷ್ಯಾದ ರಾಜಧಾನಿ ಕೌಲಾಲಂಪುರದಲ್ಲಿ ‘ಜನ ನಾಯಗನ್’ ಸಿನಿಮಾದ ಆಡಿಯೋ ಲಾಂಚ್ ನಡೆಯಲಿದ್ದು, ಸ್ಥಳೀಯ ಪೊಲೀಸ್ ಆಯುಕ್ತ ಮಾಧ್ಯಮಗಳೊಟ್ಟಿಗೆ ಮಾತನಾಡಿ, ‘ಮನೊರಂಜನಾ ಕಾರ್ಯಕ್ರಮಕ್ಕಾಗಿ ಅನುಮತಿಯನ್ನು ನೀಡಲಾಗಿದ್ದು, ಇದು ರಾಜಕೀಯ ಗೋಷ್ಠಿ ಆಗಿರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ವಿಜಯ್ ಅವರು ಆಡಿಯೋ ಲಾಂಚ್ನಲ್ಲಿ ಯಾವುದೇ ರಾಜಕೀಯ ಸಂಬಂಧಿಸಿದ ವಿಷಯಗಳನ್ನು ಮಾತನಾಡುವಂತಿಲ್ಲ. ಅಲ್ಲದೆ, ಕಾರ್ಯಕ್ರಮಕ್ಕೆ ಹಾಜರಾಗುವ ಜನರ ಸಂಖ್ಯೆಗೂ ಮಿತಿ ಇರಬೇಕು ಎಂದು ಸಹ ಹೇಳಲಾಗಿದೆಯಂತೆ.
ಇದನ್ನೂ ಓದಿ:ಕರೂರು ಘಟನೆಯಿಂದ ‘ಜನ ನಾಯಗನ್’ ರಿಲೀಸ್ ಮುಂದಕ್ಕೆ? ಇಲ್ಲಿದೆ ಹೊಸ ಅಪ್ಡೇಟ್
‘ಜನ ನಾಯಗನ್’ ಸಿನಿಮಾ ವಿಜಯ್ ಕೊನೆಯ ಸಿನಿಮಾ ಎನ್ನಲಾಗುತ್ತಿದ್ದು, ಅದಾದ ಬಳಿಕ ಸಂಪೂರ್ಣವಾಗಿ ಅವರು ರಾಜಕೀಯದಲ್ಲಿ ತೊಡಗಿಕೊಳ್ಳಲಿದ್ದಾರಂತೆ. ವಿಜಯ್ ಅವರ ರಾಜಕೀಯಕ್ಕೆ ನೆರವಾಗಲೆಂದೇ ಈ ಸಿನಿಮಾ ನಿರ್ಮಿಸಲಾಗುತ್ತಿದ್ದು, ವಿಜಯ್ ಅವರ ರಾಜಕೀಯ ಅಜೆಂಡಾಗಳನ್ನು ಸಿನಿಮಾ ಮೂಲಕ ತೋರಿಸಲಾಗುತ್ತಿದೆ ಎಂಬುದು ಗುಟ್ಟೇನೂ ಅಲ್ಲ. ಸಿನಿಮಾದ ಪ್ರಚಾರದಲ್ಲೂ ವಿಜಯ್ ತಮ್ಮ ರಾಜಕೀಯ ಅಜೆಂಡ ಪ್ರಚಾರ ಮಾಡಲಿದ್ದಾರೆ ಎಂದೇ ಯೋಜಿಸಲಾಗಿತ್ತು, ಆದರೆ ಮಲೇಷ್ಯಾ ಪೊಲೀಸರು ಅದಕ್ಕೆ ತಡೆ ಒಡ್ಡಿದ್ದಾರೆ.
‘ಜನ ನಾಯಗನ್’ ಸಿನಿಮಾವನ್ನು ಕೆವಿಎನ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಇವರು ಕನ್ನಡದ ಕೆಲವಾರು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡುತ್ತಿರುವುದು ಎಚ್ ವಿನೋದ್. ಸಿನಿಮಾದ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಮಲಯಾಳಂ ನಟಿ ಮಮಿತಾ ಬಿಜು, ಪ್ರಿಯಾಮಣಿ, ಪ್ರಕಾಶ್ ರೈ, ಗೌತಮ್ ವಾಸುದೇವ್ ಮೆನನ್ ಅವರುಗಳು ಸಹ ಸಿನಿಮಾನಲ್ಲಿದ್ದಾರೆ. ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ