
ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದಾಗ ಅದಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗುತ್ತವೆ. ಈ ರೀತಿ ಆಗಬಾರದು ಎಂಬ ಕಾರಣದಿಂದ ನಿರ್ಮಾಪಕರು ಈ ಬಗ್ಗೆ ಹೆಚ್ಚು ಜಾಗೃತಿವಹಿಸುತ್ತಾರೆ. ಸೆನ್ಸಾರ್ ಪ್ರಕ್ರಿಯೆಯನ್ನು ಬೇಗ ಪೂರ್ಣಗೊಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ‘ಜನ ನಾಯಗನ್’ ಸಿನಿಮಾ (Jana Nayagan Movie) ಕೂಡ ಇದೇ ಕೆಲಸ ಮಾಡಿತ್ತು. ಆದರೆ, ಸೆನ್ಸಾರ್ ಮಂಡಳಿಯವರು ಸಿನಿಮಾ ನೋಡಿ ತಿಂಗಳಾದರೂ ಸೆನ್ಸಾರ್ ಪತ್ರ ಸಿಕ್ಕಿಲ್ಲ. ಸಿನಿಮಾ ರಿಲೀಸ್ಗೆ ಮೂರು ದಿನ ಮಾತ್ರ ಬಾಕಿ ಉಳಿದಿದೆ. ಇದು ತಂಡದ ಚಿಂತೆಗೆ ಕಾರಣ ಆಗಿದೆ. ಈ ಪ್ರಕರಣ ರಾಜಕೀಯ ಬಣ್ಣವನ್ನು ಕೂಡ ಪಡೆದುಕೊಂಡಿದೆ.
‘ಜನ ನಾಯಗನ್’ ಚಿತ್ರ ಜನವರಿ 9ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಮಲಯಾಳಂ ನಟಿ ಮಮಿತಾ ಬೈಜು ಮೊದಲಾದವರು ನಟಿಸಿದ್ದಾರೆ. ಎಚ್. ವಿನೋದ್ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇದು ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರಿಮೇಕ್. ಈ ಚಿತ್ರದಲ್ಲಿ ರಾಜಕೀಯ ಅಂಶ ಕೂಡ ಸೇರಿಸಲಾಗಿದೆ. ಸಿನಿಮಾದ ಕೆಲವು ದೃಶ್ಯಕ್ಕೆ ಸೆನ್ಸಾರ್ ಮಂಡಳಿ ಅಪಸ್ವರ ತೆಗೆದಿದೆ ಎನ್ನಲಾಗಿದೆ.
2025ರ ಡಿಸೆಂಬರ್ 19ರಂದೇ ‘ಜನ ನಾಯಗನ್’ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಣೆ ಮಾಡಿದೆ. ಈ ವೇಳೆ ಕೆಲವು ದೃಶ್ಯಗಳಿಗೆ ಕತ್ತರಿ ಹಾಗೂ ಕೆಲವು ಶಬ್ದಕ್ಕೆ ಮ್ಯೂಟ್ ಮಾಡಲು ಸೂಚನೆ ನೀಡಿತ್ತು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ತಂಡ, ಸಿನಿಮಾನ ಮತ್ತೆ ಮಂಡಳಿಗೆ ತೋರಿಸಿದೆ. ಆದಾಗ್ಯೂ ಸೆನ್ಸಾರ್ ಮಂಡಳಿ ಸೆನ್ಸಾರ್ ಪತ್ರ ನೀಡಿಲ್ಲ.ಇದು ಚರ್ಚೆಗೆ ಕಾರಣ ಆಗಿದೆ.
ಈ ವಿಷಯ ರಾಜಕೀಯ ತಿರುವು ಕೂಡ ಪಡೆದುಕೊಂಡಿದೆ. ಟಿವಿಕೆ ಪ್ರಧಾನ ಕಾರ್ಯದರ್ಶಿಯೊಬ್ಬರು ಸೆನ್ಸಾರ್ ಮಂಡಳಿಯನ್ನು ಟೀಕಿಸಿದ್ದಾರೆ. ಇದು ಉದ್ದೇಶಪೂರ್ವಕ ಎಂದು ಆರೋಪಿಸಿದ್ದಾರೆ. ಇಂದು (ಜನವರಿ 6) ಕೂಡ ಸೆನ್ಸಾರ್ ಪತ್ರ ಸಿಗದಿದ್ದರೆ ಕೋರ್ಟ್ಗೆ ಹೋಗುವ ಬಗ್ಗೆ ತಂಡ ಆಲೋಚಿಸಿದೆ.
ಇದನ್ನೂ ಓದಿ: ‘ಜನ ನಾಯಗನ್’ ತಂಡದಿಂದ ಇದೆಂಥಾ ತಪ್ಪು; ಟ್ರೋಲಿಗರಿಗೆ ಆಹಾರವಾದ ನಿರ್ದೇಶಕ
ಈ ಸಿನಿಮಾ ಬಳಿಕ ವಿಜಯ್ ರಾಜಕೀಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ವರ್ಷ ನಡೆಯುವ ತಮಿಳುನಾಡು ಚುನಾವಣೆಯಲ್ಲಿ ಅವರು ಭಾಗಿ ಆಗಲಿದ್ದಾರೆ. ಅವರ ಕೊನೆಯ ಸಿನಿಮಾ ರಿಮೇಕ್ ಎಂಬ ಬೇಸರ ಅಭಿಮಾನಿಗಳಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:54 am, Tue, 6 January 26