ಸುಪ್ರೀಂಕೋರ್ಟ್​​ನಲ್ಲಿ ‘ಜನ ನಾಯಗನ್’ಗೆ ಹಿನ್ನಡೆ, ಚೆಂಡು ಮತ್ತೆ ಹೈಕೋರ್ಟ್ ಅಂಗಳಕ್ಕೆ

Jana Nayagan movie controversy: ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾಕ್ಕೆ ಸೆನ್ಸಾರ್ ಸಮಸ್ಯೆ ಆಗಿದೆ. ಮದ್ರಾಸ್ ಹೈಕೋರ್ಟ್​​ನಲ್ಲಿ ಪ್ರಕರಣ ಮತ್ತಷ್ಟು ವಿಳಂಬವೇ ಆಗುತ್ತಿದೆ. ಇದೇ ಕಾರಣಕ್ಕೆ ನಿರ್ಮಾಪಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲಿಯೂ ಸಹ ನಿರ್ಮಾಪಕರಿಗೆ ಹಿನ್ನಡೆಯೇ ಆಗಿದೆ. ಈಗ ಚೆಂಡು ಮತ್ತೆ ಮದ್ರಾಸ್ ಹೈಕೋರ್ಟ್ ಅಂಗಳಕ್ಕೆ ಬಂದಿದೆ.

ಸುಪ್ರೀಂಕೋರ್ಟ್​​ನಲ್ಲಿ ‘ಜನ ನಾಯಗನ್’ಗೆ ಹಿನ್ನಡೆ, ಚೆಂಡು ಮತ್ತೆ ಹೈಕೋರ್ಟ್ ಅಂಗಳಕ್ಕೆ
ಜನ ನಾಯಗನ್

Updated on: Jan 16, 2026 | 8:51 AM

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾಕ್ಕೆ ಬಿಡುಗಡೆ ಭಾಗ್ಯ ಸದ್ಯಕ್ಕೆ ದೊರಕುವ ಹಾಗೆ ಕಾಣುತ್ತಿಲ್ಲ. ವಿಜಯ್ ಸಿನಿಮಾ ಜನವರಿ 09 ರಂದು ಬಿಡುಡಗೆ ಆಗಬೇಕಿತ್ತು ಆದರೆ ಸಿಬಿಎಫ್​​ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲಿಲ್ಲ. ಇದರಿಂದ ಸಿಟ್ಟಾದ ನಿರ್ಮಾಣ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತು. ಹೈಕೋರ್ಟ್, ಮೊದಲಿಗೆ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡುವಂತೆ ಆದೇಶಿಸಿತಾದರೂ ಕೇವಲ ಕೆಲವೇ ಗಂಟೆಗಳಲ್ಲಿ ತಮ್ಮದೇ ಆದೇಶಕ್ಕೆ ತಡೆ ನೀಡಿತು. ಬಳಿಕ ಚಿತ್ರತಂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಆದರೆ ಅಲ್ಲಿಯೂ ಸಹ ಸಿನಿಮಾಕ್ಕೆ ಬೇಕಾದ ನ್ಯಾಯ ಧಕ್ಕಿಲ್ಲ.

ಶೀಘ್ರವೇ ಪ್ರಮಾಣ ಪತ್ರ ಕೊಡಿಸುವಂತೆ ನಿರ್ಮಾಪಕರು ಹಾಕಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪ್ರಕರಣವನ್ನು ಮದ್ರಾಸ್ ಹೈಕೋರ್ಟ್​​ನಲ್ಲಿಯೇ ಇತ್ಯರ್ಥ ಮಾಡಿಕೊಳ್ಳಿ ಎಂದು ಸೂಚಿಸಿದೆ. ಅಲ್ಲದೆ, ಈ ಅರ್ಜಿಯ ವಿಚಾರಣೆಯ ಅವಶ್ಯಕತೆ ಅಥವಾ ಆಸಕ್ತಿ ಇಲ್ಲ ಎಂದು ಸುಪ್ರೀಂಕೋರ್ಟ್, ಅರ್ಜಿದಾರರಿಗೆ ಹೇಳಿದೆ. ಆ ಮೂಲಕ ಪ್ರಕರಣ ಮತ್ತೆ ಮದ್ರಾಸ್ ಹೈಕೋರ್ಟ್​​ಗೆ ಬಂದು ತಲುಪಿದೆ.

ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮೊದಲು ಪ್ರಮಾಣ ಪತ್ರ ನೀಡುವಂತೆ ಆದೇಶಿಸಿ ಬಳಿಕ ಕೆಲವೇ ಗಂಟೆಗಳಲ್ಲಿ ತನ್ನದೇ ಆದೇಶಕ್ಕೆ ತಡೆ ನೀಡಿತ್ತು. ಇದರಿಂದಾಗಿ ಚಿತ್ರತಂಡಕ್ಕೆ ಹೈಕೋರ್ಟ್​​ ಆದೇಶದ ಮೇಲೆ ಅಸಮಾಧಾನ ಮೂಡಿ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಆದರೆ ಸುಪ್ರೀಂಕೋರ್ಟ್ ಸಹ ಮತ್ತೆ ಹೈಕೋರ್ಟ್​​ಗೆ ಹೋಗಲು ತಿಳಿಸಿರುವುದು ಚಿತ್ರತಂಡಕ್ಕೆ ಇಕ್ಕಟ್ಟಾಗಿ ಪರಿಣಮಿಸಿದೆ.

ಇದನ್ನೂ ಓದಿ:‘ಜನ ನಾಯಗನ್’ ಪ್ರಕರಣ ಕೋರ್ಟ್​​ನಲ್ಲಿರುವಾಗ ವಿಜಯ್​ಗೆ ಸಿಬಿಐನಿಂದ ಸಂಕಷ್ಟ

ಈ ಹಿಂದೆ ಪ್ರಮಾಣ ಪತ್ರ ಆದೇಶಕ್ಕೆ ತಡೆ ನೀಡಿದ್ದ ಮದ್ರಾಸ್ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜನವರಿ 23ರಂದು ಮಾಡುವುದಾಗಿ ಹೇಳಿತ್ತು. ಈಗ ಸುಪ್ರೀಂಕೋರ್ಟ್​​ಗೆ ಹೋಗಿ ಬಂದರೂ ಸಹ ಪ್ರಕರಣದ ಮುಂದಿನ ವಿಚಾರಣೆ 23 ರಂದೇ ನಡೆಯಲಿದ್ದು, ಅಂದು ಸಹ ಪ್ರಕರಣದ ವಿಷಯವಾಗಿ ಆದೇಶ ಹೊರಬೀಳುವುದು ಅನುಮಾನವೇ ಆಗಿದೆ.

ಇನ್ನು ಕೆಲವೇ ತಿಂಗಳಲ್ಲಿ ತಮಿಳುನಾಡಿನಲ್ಲಿ ಚುನಾವಣೆ ಘೋಷಣೆ ಆಗಲಿದೆ. ಒಂದೊಮ್ಮೆ ಚುನಾವಣೆ ಘೋಷಣೆ ಆದರೆ ಸ್ವತಃ ಈ ಬಾರಿ ಚುನಾವಣಾ ಸ್ಪರ್ಧಿ ಆಗಿರುವ ವಿಜಯ್ ಅವರ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗದೇ ಇರಬಹುದು. ಸಿನಿಮಾ ಬಿಡುಗಡೆ ಆಗಬಾರದೆಂದೇ ಕೆಲವರು ಪಿತೂರಿ ಮಾಡಿ ಹೀಗೆ ಮಾಡುತ್ತಿದ್ದಾರೆ ಎಂಬ ಅನುಮಾನಗಳು ಸಹ ವಿಜಯ್ ಅಭಿಮಾನಿಗಳಿಗೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:10 am, Fri, 16 January 26