ಬದಲಾಯ್ತು ಗಿಲ್ಲಿ ಮನಸ್ಸು; ಅಶ್ವಿನಿಗೆ ಮುದುಕಿ, ನೀನು, ತಾನು ಎಂದಿದ್ದಕ್ಕೆ ಕ್ಷಮೆ
ಅಶ್ವಿನಿ ಗೌಡ ಅವರನ್ನು ಏಕವಚನದಲ್ಲಿ ಮಾತಾಡಿಸಿ, ಮುದುಕಿ ಎಂದು ಗಿಲ್ಲಿ ನಟ ಅವರು ಹೀಯಾಳಿಸಿದ್ದರು. ಈಗ ಅವರಿಗೆ ತಮ್ಮ ತಪ್ಪಿನ ಅರಿವು ಆಗಿದೆ. ಎಲ್ಲರ ಎದುರಲ್ಲೂ ಈ ವಿಚಾರಕ್ಕೆ ಮನಸಾರೆ ಕ್ಷಮೆ ಕೇಳಿದ್ದಾರೆ. ಗಿಲ್ಲಿಯನ್ನು ಅಶ್ವಿನಿ ಗೌಡ ಅವರು ಕ್ಷಮಿಸಿದ್ದಾರೆ. ಹಳೇ ಜಗಳಗಳನ್ನು ಮರೆತು ಅವರು ಒಂದಾಗಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟ, ಕಾವ್ಯಾ ಶೈವ, ಅಶ್ವಿನಿ ಗೌಡ (Ashwini Gowda), ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ, ಧನುಷ್ ಅವರು ಫಿನಾಲೆಗೆ ಬಂದಿದ್ದಾರೆ. ಈ ಶೋನಲ್ಲಿ ಸ್ಪರ್ಧಿಗಳ ನಡುವೆ ನಡೆದ ಜಗಳ ಒಂದೆರಡಲ್ಲ. ಈಗ ಅದೆಲ್ಲವನ್ನೂ ಮರೆತು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವ ಸಮಯ ಎದುರಾಗಿದೆ. ಕೊನೇ ವಾರದಲ್ಲಿ ಒಬ್ಬರಿಗೊಬ್ಬರು ಕ್ಷಮೆ ಕೇಳಿದ್ದಾರೆ. ಗಿಲ್ಲಿ ನಟ ಅವರು ತಾವು ಮಾಡಿದ ತಪ್ಪನ್ನು ತಿದ್ದಿಕೊಂಡಿದ್ದಾರೆ. ಅಶ್ವಿನಿ ಗೌಡಗೆ ಮಾತ್ರವಲ್ಲದೇ ಕಾವ್ಯಾ ಶೈವ, ರಘು ಅವರಿಗೂ ಗಿಲ್ಲಿ ನಟ (Gilli Nata) ಕ್ಷಮೆ ಕೇಳಿದ್ದಾರೆ.
‘ನಾವಿಬ್ಬರು ಟೀಮ್ ಉಸ್ತುವಾರಿ ಮಾಡುವಾಗ ಜಗಳದ ಭರದಲ್ಲಿ ನಾನು ನಿಮಗೆ ಹೋಗೆ, ಬಾರೆ ಅಂತ ಬೈಯ್ದಿದ್ದೆ. ಆ ಸಮಯದಲ್ಲಿ ನಾನೇ ಸಮಾಧಾನ ಆಗಬಹುದಿತ್ತು. ನೀವು ಅವಿ ಅಣ್ಣನ ಬಳಿ ಹೇಳಿಕೊಂಡು ಅತ್ತಿದ್ರಿ. ಅದು ನನಗೆ ಗೊತ್ತಾಯಿತು. ನೀವು ವಯಸ್ಸಿನಲ್ಲಿ ದೊಡ್ಡವರು. ಅದು ನನಗೂ ಗೊತ್ತಿತ್ತು. ನೀವು ಅತ್ತಿದ್ದು ತಿಳಿದು ಬಹಳ ಬೇಜಾರು ಆಯ್ತು’ ಎಂದು ಗಿಲ್ಲಿ ನಟ ಅವರು ಹೇಳಿದರು.
‘ನಿಮ್ಮ ಜಾಗದಲ್ಲಿ ನಮ್ಮ ಅಕ್ಕನೋ ಅಥವಾ ಅಮ್ಮನೋ ಇದ್ದಿದ್ದು ಬೇರೆ ಯಾರಾದರೂ ಆ ರೀತಿ ಮಾತನಾಡಿದ್ದರೆ ನಾನು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದೆ ಅಂತ ನನಗೆ ಅನಿಸಿತು. ಎಲ್ಲರಿಗೂ ಫ್ಯಾಮಿಲಿ ಇರುತ್ತದೆ. ಅವರ ಕುಟುಂಬದವರು ಇದನ್ನು ನೋಡುತ್ತಿರುತ್ತಾರೆ. ಅವರಿಗೆ ಹೇಗೆ ಅನಿಸಬಹುದು. ಪ್ರತಿಬಾರಿ ನಿಮ್ಮನ್ನು ರೇಗಿಸುವಾಗ, ಜಗಳ ಆಡುವಾಗ ಮುದುಕಿ ಅಂದಿದ್ದೇನೆ, ಹಲ್ಲು ಸೆಟ್ ಹಾಕಿಕೊಂಡು ಬಂದಿದ್ದೀರಿ ಅಂತ ಹೇಳಿದ್ದೇನೆ. ನೀವೇ ಚೆನ್ನಾಗಿ ಮಾತನಾಡಿಸಲು ಬಂದಾಗಲೂ ನಾನು ಮತ್ತೆ ರೇಗಿಸಿದೆ. ನಿಮ್ಮ ಮನಸ್ಸಿಗೆ ನಾನು ತುಂಬಾ ಬೇಜಾರು ಮಾಡಿಸಿದ್ದೇನೆ. ನನ್ನಿಂದ ಏನೇ ಬೇಜಾರು ಆಗಿದ್ದರು ಕ್ಷಮಿಸಿ’ ಎಂದು ಗಿಲ್ಲಿ ನಟ ಅವರು ಹೇಳಿದರು.
ಮ್ಯೂಟೆಂಟ್ ರಘು ಅವರಿಗೂ ಗಿಲ್ಲಿ ಕ್ಷಮೆ ಕೇಳಿದರು. ‘ತಲೆಯಲ್ಲಿ ಕೂದಲು ಇಲ್ಲ, ದವಡೆ ಹಲ್ಲು ಇಲ್ಲ ಅಂತ ನಿಮಗೆ ಅವಮಾನ ಮಾಡಿದ್ದಕ್ಕೆ ಕ್ಷಮೆ ಕೇಳುತ್ತೇನೆ’ ಎಂದು ಅವರು ಹೇಳಿದರು. ಸೀಕ್ರೆಟ್ ಟಾಸ್ಕ್ನಲ್ಲಿ ಕಾವ್ಯಾಗೆ ಗಿಲ್ಲಿ ಅವರು ಕಣ್ಣೀರು ಹಾಕಿಸಿದ್ದರು. ಅದಕ್ಕಾಗಿ ಅವರು ಈಗ ಕ್ಷಮೆ ಕೇಳಿದ್ದಾರೆ. ‘ನಿನಗೆ ತುಂಬಾ ಕಿರಿಕಿರಿ ಮಾಡಿದ್ದೇನೆ. ಪ್ರತಿ ವಾರ ನೀನು ನನ್ನನ್ನು ಕ್ಷಮಿಸಿದ್ದೀಯ. ನಿನಗೆ ನಾನು ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ ಗಿಲ್ಲಿ.
ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಅಭಿಮಾನಿಗಳು
ಅಶ್ವಿನಿ ಗೌಡ ಅವರು ಕೂಡ ಗಿಲ್ಲಿಯ ಬಳಿ ಕ್ಷಮೆ ಕೇಳಿದ್ದಾರೆ. ಈಗ ಎಲ್ಲ ಸ್ಪರ್ಧಿಗಳು ಪರಸ್ಪರ ದ್ವೇಷ ಮರೆತು ಒಂದಾಗಿದ್ದಾರೆ. ಸಂಕ್ರಾಂತಿ ಹಬ್ಬದ ದಿನವೇ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಜನವರಿ 17 ಮತ್ತು 18ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಈ 6 ಜನರ ಪೈಕಿ ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




