ಕೊವಿಡ್​ ನಿಯಮ ಉಲ್ಲಂಘಿಸಿ ಶೂಟಿಂಗ್​ ಮಾಡುತ್ತಿದ್ದ ಖ್ಯಾತ ನಟ, ನಿರ್ದೇಶಕನ ಬಂಧನ

| Updated By: Digi Tech Desk

Updated on: Apr 29, 2021 | 9:13 AM

Coronavirus: ಕೊವಿಡ್​ ಕರ್ಫ್ಯೂ ಜಾರಿಯಾಗಿ ಎರಡು ಗಂಟೆ ಕಳೆದ ಬಳಿಕವೂ ಚಿತ್ರತಂಡದವರು ಶೂಟಿಂಗ್​ ನಡೆಸುತ್ತಿದ್ದರು. ಆಗ ಸಮಯ ರಾತ್ರಿ 8 ಗಂಟೆ ಆಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಂಡಿದ್ದಾರೆ.

ಕೊವಿಡ್​ ನಿಯಮ ಉಲ್ಲಂಘಿಸಿ ಶೂಟಿಂಗ್​ ಮಾಡುತ್ತಿದ್ದ ಖ್ಯಾತ ನಟ, ನಿರ್ದೇಶಕನ ಬಂಧನ
ನಟ ಜಿಮ್ಮಿ ಶೇರ್ಗಿಲ್
Follow us on

ಕೊರೊನಾ ವೈರಸ್​ನಿಂದಾಗಿ ಇಡೀ ದೇಶವೇ ತತ್ತರಿಸುತ್ತಿದೆ. ಈ ಮಹಾಮಾರಿ ಹರಡುವುದನ್ನು ತಪ್ಪಿಸಲು ಹಲವು ರಾಜ್ಯಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಪರಿಸ್ಥಿತಿ ಇನ್ನಷ್ಟು ಕೈ ಮೀರಬಾರದು ಎಂಬ ಕಾರಣಕ್ಕೆ ಕಠಿಣ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಆದರೆ ಕೆಲವರು ಇದನ್ನೆಲ್ಲ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೆಲವು ಸೆಲೆಬ್ರಿಟಿಗಳು ಕೂಡ ಉಡಾಫೆ ಮನೋಭಾವ ತೋರುತ್ತಿದ್ದಾರೆ. ಕೊವಿಡ್​ ಕರ್ಫ್ಯೂ ನಿಯಮ ಉಲ್ಲಂಘಿಸಿ ಶೂಟಿಂಗ್​ ಮಾಡಿದ ನಟ ಜಿಮ್ಮಿ ಶೇರ್​ಗಿಲ್​ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪಂಜಾಬ್​ನಲ್ಲಿ ಈ ಘಟನೆ ನಡೆದಿದೆ. ಒಂದು ವೆಬ್​ ಸಿರೀಸ್​ ಸಲುವಾಗಿ ನಟ ಜಿಮ್ಮಿ ಶೇರ್​ಗಿಲ್​ ಮತ್ತು ನಿರ್ದೇಶಕ ಈಶ್ವರ್​ ನಿವಾಸ್​ ಅವರು ಶೂಟಿಂಗ್​ ನಡೆಸುತ್ತಿದ್ದರು. ಈ ಚಿತ್ರೀಕರಣದಲ್ಲಿ 150ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಒಂದು ಖಾಸಗಿ ಶಾಲೆಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಅದಕ್ಕೆ ಯಾವುದೇ ಅನುಮತಿಯನ್ನೂ ಪಡೆದುಕೊಂಡಿರಲಿಲ್ಲ. ಅಲ್ಲದೆ, ಶೂಟಿಂಗ್​ನಲ್ಲಿ ಭಾಗವಹಿಸಿದ್ದ ಜನರು ಕೊವಿಡ್​ ನಿಯಮಗಳನ್ನೂ ಪಾಲಿಸುತ್ತಿರಲಿಲ್ಲ.

ಕೊವಿಡ್​ ಕರ್ಫ್ಯೂ ಜಾರಿಯಾಗಿ ಎರಡು ಗಂಟೆ ಕಳೆದ ಬಳಿಕವೂ ಚಿತ್ರತಂಡದವರು ಶೂಟಿಂಗ್​ ನಡೆಸುತ್ತಿದ್ದರು. ಆಗ ಸಮಯ ರಾತ್ರಿ 8 ಗಂಟೆ ಆಗಿತ್ತು. ಆ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಂಡಿದ್ದಾರೆ. ನಟ ಜಿಮ್ಮಿ ಶೇರ್​ಗಿಲ್​ ಮತ್ತು ನಿರ್ದೇಶಕ ಈಶ್ವರ್​ ನಿವಾಸ್​ ಅವರನ್ನು ಬಂಧಿಸಲಾಯಿತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ವರದಿ ಆಗಿದೆ. ಅಲ್ಲದೆ, ಚಿತ್ರತಂಡದ 35 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಚಿತ್ರರಂಗದ ಅನೇಕರಿಗೆ ಕೊವಿಡ್​ ಕಾಟ ಕೊಡುತ್ತಿದೆ. ಸಮೀರಾ ರೆಡ್ಡಿ, ಅಲ್ಲು ಅರ್ಜುನ್​, ಪೂಜಾ ಹೆಗ್ಡೆ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೊವಿಡ್​ 19 ಸೋಂಕಿಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ಕೆಲವು ಸೆಲೆಬ್ರಿಟಿಗಳು ಈ ಮಹಾಮಾರಿಗೆ ಬಲಿ ಆಗಿರುವುದು ವಿಪರ್ಯಾಸ. ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೋಟಿ ರಾಮು ಅವರು ಕೊರೊನಾ ಸೋಂಕಿನಿಂದ ಕೊನೆಯುಸಿರೆಳೆದರು.

ರನ್ನ, ಅಣ್ಣಯ್ಯ, ಬಿಂದಾಸ್​ ಮುಂತಾದ ಸಿನಿಮಾಗಳ ನಿರ್ಮಾಪಕ ಚಂದ್ರಶೇಖರ್​ ಅವರು ಕೂಡ ಗುರುವಾರ (ಏ.29) ಮುಂಜಾನೆ ಕೊವಿಡ್​ನಿಂದ ಮೃತಪಟ್ಟರು. ಕೆಲವೇ ದಿನಗಳ ಹಿಂದೆ ಯುವ ನಟ, ನಿರ್ಮಾಪಕ ಡಾ. ಡಿ.ಎಸ್​. ಮಂಜುನಾಥ್​ ನಿಧನರಾದರು. ಹೀಗೆ ಸೆಲೆಬ್ರಿಟಿಗಳ ವಲಯದಲ್ಲಿ ಕೊರೊನಾದ ಮರಣ ಮೃದಂಗ ಮುಂದುವರಿದಿದೆ.

ಇದನ್ನೂ ಓದಿ: Producer Ramu Death: ಕೊರೊನಾ ಸೋಂಕಿನಿಂದ ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ರಾಮು ನಿಧನ

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೊವಿಡ್​ 19 ಸೋಂಕಿನಿಂದ ಸಾವು

Published On - 9:01 am, Thu, 29 April 21