ಜೂ ಎನ್​ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

Jr NTR: ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಜಪಾನ್​ನಲ್ಲಿ ಬಿಡುಗಡೆ ಆಗಿದೆ. ಜೂ ಎನ್​ಟಿಆರ್ ನಟನೆಯ ಹಿಂದಿ ಸಿನಿಮಾ ‘ವಾರ್ 2’ ಚಿತ್ರೀಕರಣ ಇನ್ನೇನು ಮುಗಿಯುವ ಹಂತದಲ್ಲಿದ್ದು, ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಇದೀಗ ಸಿನಿಮಾ ಬಿಡುಗಡೆ ದಿನಾಂಕವನ್ನು ಸಹ ಪ್ರಕಟಿಸಲಾಗಿದೆ.

ಜೂ ಎನ್​ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
Neel Jrntr

Updated on: Mar 26, 2025 | 11:57 AM

‘ದೇವರ’ ಸಿನಿಮಾದ ಸಾಧಾರಣ ಯಶಸ್ಸಿನ ಬಳಿಕ ಜೂ ಎನ್​ಟಿಆರ್ ಮತ್ತೊಂದು ‘ಆರ್​ಆರ್​ಆರ್’ ರೀತಿಯ ಯಶಸ್ಸಿನ ಹುಡುಕಾಟದಲ್ಲಿದ್ದಾರೆ. ‘ಆರ್​ಆರ್​ಆರ್’ ಬಳಿಕ ಬಂದ ‘ದೇವರ’ ಸಿನಿಮಾದ ಬಗ್ಗೆ ಸಾಕಷ್ಟು ಋಣಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿದ್ದವು ಹಾಗಿದ್ದರೂ ಸಹ ಜೂ ಎನ್​ಟಿಆರ್ ಅಭಿಮಾನಿಗಳು ಆ ಸಿನಿಮಾವನ್ನು ಗೆಲ್ಲಿಸಿದರು. ಇದೀಗ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿರುವ ಜೂ ಎನ್​ಟಿಆರ್, ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಕೈಜೋಡಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಶುರುವಾಗಿದ್ದು, ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಲಾಗಿದೆ.

ಜೂ ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಅವರ ಸಿನಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ. 2026ರ ಜನವರಿ 9 ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ವಿಶೇಷವೆಂದರೆ ಇದೇ ಸಮಯಕ್ಕೆ ಸರಿಯಾಗಿ ದಳಪತಿ ವಿಜಯ್ ನಟನೆಯ ಕಟ್ಟ ಕಡೆಯ ಸಿನಿಮಾ ‘ಜನನಾಯಗನ್’ ಸಿನಿಮಾ ಬಿಡುಗಡೆ ಆಗಲಿಕ್ಕಿದೆ. ಹಾಗಾಗಿ ಎರಡು ದೊಡ್ಡ ನಟರ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಪರಸ್ಪರ ಎದುರಾಗುವ ಸಂಭವ ಹೆಚ್ಚಾಗಿದೆ.

ಇನ್ನುಳಿದಂತೆ, ಜೂ ಎನ್​ಟಿಆರ್ ಮತ್ತು ನೀಲ್ ಸಿನಿಮಾ ಪೀರಿಯಡ್ ಸಿನಿಮಾ ಆಗಿರಲಿದ್ದು, ಸಿನಿಮಾದಲ್ಲಿ ಎರಡು ಷೇಡ್​ಗಳಲ್ಲಿ ಜೂ ಎನ್​ಟಿಆರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಜೂ ಎನ್​ಟಿಆರ್ ಎದುರು ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಲಿದ್ದಾರೆ. ಸಿನಿಮಾದ ಚಿತ್ರೀಕರಣವನ್ನು ಹೈದರಾಬಾದ್​ನಲ್ಲಿ ಈಗಾಗಲೇ ನೀಲ್ ಪ್ರಾರಂಭ ಮಾಡಿದ್ದಾರೆ. ಇದೇ ವರ್ಷದ ಅಂತ್ಯದ ವೇಳೆಗೆ ಸಿನಿಮಾದ ಚಿತ್ರೀಕರಣ ಮುಗಿಯಲಿದೆ. ನೀಲ್ ಅವರ ಎಲ್ಲ ಸಿನಿಮಾಗಳಲ್ಲಿಯೂ ಕೆಲಸ ಮಾಡುವ ತಂಡವೇ ಈ ಸಿನಿಮಾದಲ್ಲಿಯೂ ಕೆಲಸ ಮಾಡಲಿದೆ. ಭುವನ್ ಗೌಡ ಕ್ಯಾಮೆರಾಮನ್, ರವಿ ಬಸ್ರೂರು ಸಂಗೀತ ನೀಡಲಿದ್ದಾರೆ.

ಇದನ್ನೂ ಓದಿ:ಬಾಲಿವುಡ್​ ಹಿರಿಯ ನಟ ದೇಬ್ ಮುಖರ್ಜಿ ನಿಧನ, ಜೂ ಎನ್​ಟಿಆರ್ ಸಿನಿಮಾ ಮೇಲೆ ಪ್ರಭಾವ?

ಜೂ ಎನ್​ಟಿಆರ್, ಹಿಂದಿಯ ‘ವಾರ್ 2’ ಸಿನಿಮಾನಲ್ಲಿ ಹೃತಿಕ್ ರೋಷನ್ ಜೊತೆ ನಟಿಸುತ್ತಿದ್ದಾರೆ. ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ಬಾಕಿ ಇದೆ. ಈ ಸಮಯದಲ್ಲಿ ಸಿನಿಮಾದ ಮತ್ತೊಬ್ಬ ನಾಯಕ ಹೃತಿಕ್ ರೋಷನ್ ಕಾಲಿನ ಮೂಳೆ ಮುರಿದುಕೊಂಡಿದ್ದು, ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ಇದರ ಜೊತೆಗೆ ‘ವಾರ್’ ಸಿನಿಮಾದ ನಿರ್ದೇಶಕ ಅಯಾನ್ ಮುಖರ್ಜಿ ಅವರ ತಂದೆಯ ನಿಧನವೂ ಆಗಿದ್ದರಿಂದ ಸಿನಿಮಾದ ಚಿತ್ರೀಕರಣ ಇನ್ನಷ್ಟು ತಡವಾಗಲಿದೆ ಎನ್ನಲಾಗುತ್ತಿದೆ. ‘ವಾರ್ 2’ ಸಿನಿಮಾ ಆಗಸ್ಟ್ ತಿಂಗಳ ವೇಳೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ