ಬಾಲಿವುಡ್ ಹಿರಿಯ ನಟ ದೇಬ್ ಮುಖರ್ಜಿ ನಿಧನ, ಜೂ ಎನ್ಟಿಆರ್ ಸಿನಿಮಾ ಮೇಲೆ ಪ್ರಭಾವ?
Deb Mukharjee: ಬಾಲಿವುಡ್ ಚಿತ್ರರಂಗದ ಹಿರಿಯ ನಟ ದೇಬ್ ಮುಖರ್ಜಿ ನಿಧನ ಹೊಂದಿದ್ದಾರೆ. ದೇಬ್ ಮುಖರ್ಜಿ ಅವರ ಕುಟುಂಬಕ್ಕೆ 1930 ರಿಂದಲೂ ಹಿಂದಿ ಚಿತ್ರರಂಗದ ಜೊತೆಗೆ ನಂಟಿದೆ. ದೇಬ್ ಮುಖರ್ಜಿ ಅವರ ಪುತ್ರ ಈಗ ಬಾಲಿವುಡ್ನ ಬಹು ಯಶಸ್ವಿ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು.

ಬಾಲಿವುಡ್ನ (Bollywood) ಹಿರಿಯ ನಟ ದೇಬ್ ಮುಖರ್ಜಿ ನಿಧನ ಹೊಂದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. 1965 ರಿಂದಲೂ ಸಿನಿಮಾಗಳಲ್ಲಿ ತೊಡಗಿಕೊಂಡಿರುವ ದೇಬ್ ಮುಖರ್ಜಿ ನಟನೆಯ ಜೊತೆಗೆ ನಿರ್ಮಾಣದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ನೂರಾರು ಸಿನಿಮಾಗಳಲ್ಲಿ ನಟಿಸದಿದ್ದರೂ ಸಹ ನಟಿಸಿದ ಕಡಿಮೆ ಸಿನಿಮಾಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ ದೇಬ್ ಮುಖರ್ಜಿ. ಅಂದಹಾಗೆ ದೇಬ್ ಮುಖರ್ಜಿ, ಬಾಲಿವುಡ್ನ ಖ್ಯಾತ ಯುವ ನಿರ್ದೇಶಕ ಅಯಾನ್ ಮುಖರ್ಜಿಯ ತಂದೆ.
ದೇಬ್ ಮುಖರ್ಜಿ, ಬಾಲಿವುಡ್ನ ಕಲ್ಟ್ ಕ್ಲಾಸಿಕ್ ಸಿನಿಮಾಗಳಾದ ‘ಅಭಿನೇತ್ರಿ’, ‘ಏಕ್ ಬಾರ್ ಮುಸ್ಕುರಾದೊ’, ‘ಆಸೂ ಬನ್ ಗಯೇ ಪೂಲ್’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2009 ರಲ್ಲಿ ಬಿಡುಗಡೆ ಆದ ಶಾಹಿದ್ ಕಪೂರ್ ನಟನೆಯ ‘ಕಮೀನೆ’ ಅವರ ಕೊನೆಯ ಸಿನಿಮಾ. ಅದಾದ ಬಳಿಕ ಅವರು ಸಿನಿಮಾ ರಂಗದಿಂದ ದೂರವೇ ಉಳಿದಿದ್ದರು.
ದೇಬ್ ಮುಖರ್ಜಿ ಅವರದ್ದು ಬಹುದೊಡ್ಡ ಸಿನಿಮಾ ಕುಟುಂಬ. ದೇಬ್ ಮುಖರ್ಜಿ ಅವರ ಕುಟುಂಬ ಭಾರತದಲ್ಲಿ ಸಿನಿಮಾ ಪ್ರಾರಂಭ ಆದಾಗಿನಿಂದ ಈಗಿನ ವರೆಗೆ ಚಿತ್ರರಂಗದೊಡನೆ ಗುರುತಿಸಿಕೊಂಡಿದೆ. ದೇಬ್ ಮುಖರ್ಜಿ ಅವರ ತಂದೆ ಸಾಶ್ಧಾರ್ ಮುಖರ್ಜಿ ಭಾರತದಲ್ಲಿ ಮೊದಲಿಗೆ ನಿರ್ಮಾಣವಾದ ಸ್ಟುಡಿಯೋಗಳಲ್ಲಿ ಒಂದಾದ ಫಿಲ್ಮಾಯನ ಸ್ಟುಡಿಯೋದ ಮಾಲೀಕರು. ಜೊತೆಗೆ 1930 ರಿಂದಲೂ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು.
ದೇಬ್ ಮುಖರ್ಜಿ ಅವರ ತಾಯಿ, ಭಾರತದ ಬ್ಲಾಕ್ ಆಂಡ್ ವೈಟ್ ಕಾಲದ ಸೂಪರ್ ಸ್ಟಾರ್ ಅಶೋಕ್ ಕುಮಾರ್ ಅವರ ಸಹೋದರಿ ಸತಿದೇವಿ ಮುಖರ್ಜಿ. ಲೆಜೆಂಡರಿ ಗಾಯಕ ಕಿಶೋರ್ ಕುಮಾರ್ ಅವರಿಗೂ ಇವರು ಸಹೋದರಿ. ದೇಬ್ ಮುಖರ್ಜಿ ಅವರು ಎರಡು ಮದುವೆ ಆಗಿದ್ದರು. ಮೊದಲ ಪತ್ನಿಯ ಮಗಳು ‘ಲಗಾನ್’ ಸಿನಿಮಾದ ನಿರ್ದೇಶಕ ಅಶುತೋಶ್ ಗೋವರಿಕರ್ ಅವರ ಪತ್ನಿಯಾಗಿದ್ದಾರೆ. ಎರಡನೇ ಪತ್ನಿಯ ಮಗ ಅಯಾನ್ ಮುಖರ್ಜಿ ಬಾಲಿವುಡ್ನ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು. ದೇಬ್ ಮುಖರ್ಜಿ, ಬಾಲಿವುಡ್ ಸ್ಟಾರ್ ನಟಿಯರಾದ ಕಾಜೊಲ್, ರಾಣಿ ಮುಖರ್ಜಿ ಅವರಿಗೆ ಚಿಕ್ಕಪ್ಪ ಸಹ.
ಇದನ್ನೂ ಓದಿ:ಬಾಲಿವುಡ್ ನಾಯಕನ ಜೊತೆ ಶ್ರೀಲೀಲಾ ಲವ್ವಿ-ಡವ್ವಿ, ಮದುವೆ ಫಿಕ್ಸ್?
ಅಯಾನ್ ಮುಖರ್ಜಿ, ಇದೀಗ ಜೂ ಎನ್ಟಿಆರ್ ನಟನೆಯ ‘ವಾರ್ 2’ ಸಿನಿಮಾದ ನಿರ್ದೇಶನ ಮಾಡುತ್ತಿದ್ದು, ಅವರ ತಂದೆ ದೇಬ್ ಮುಖರ್ಜಿ ಅವರ ನಿಧನದಿಂದಾಗಿ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ನಟರಾದ ರಣ್ಬೀರ್ ಕಪೂರ್, ಆಲಿಯಾ ಅವರುಗಳು ಈಗಾಗಲೇ ಮುಂಬೈಗೆ ವಾಪಸ್ಸಾಗಿದ್ದು, ಅಯಾನ್ ಮುಖರ್ಜಿ ನಿವಾಸಕ್ಕೆ ತೆರಳಿದ್ದಾರೆ. ಹಲವು ಚಿತ್ರತಾರೆಯವರು ದೇಬ್ ಮುಖರ್ಜಿಯ ಅಂತಿಮ ದರ್ಶನ ಪಡೆಯುತ್ತಿದ್ದು, ಇಂದು ಸಂಜೆಯೇ ಮುಂಬೈನಲ್ಲಿ ಅವರ ಅಂತಿಮ ಸಂಸ್ಕಾರ ಮಾಡಲಾಗುತ್ತದೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Fri, 14 March 25