ರಾಜಮೌಳಿ-ಜೂ ಎನ್​ಟಿಆರ್ ಹಳೆ ಸಿನಿಮಾ ಮರು ಬಿಡುಗಡೆ, ಪ್ರೀ ರಿಲೀಸ್ ಇವೆಂಟ್​ ಆಯೋಜನೆ

|

Updated on: May 17, 2023 | 3:40 PM

Jr NTR-Rajamouli: ಜೂ ಎನ್​ಟಿಆರ್-ರಾಜಮೌಳಿ ಕಾಂಬಿನೇಶನ್​ನ ಹಳೆಯ ಸಿನಿಮಾ ಸಿಂಹಾದ್ರಿ ಮರು ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಕತೆ ಹುಟ್ಟಿದ್ದು ಹೇಗೆ?

ರಾಜಮೌಳಿ-ಜೂ ಎನ್​ಟಿಆರ್ ಹಳೆ ಸಿನಿಮಾ ಮರು ಬಿಡುಗಡೆ, ಪ್ರೀ ರಿಲೀಸ್ ಇವೆಂಟ್​ ಆಯೋಜನೆ
ಜೂ ಎನ್​ಟಿಆರ್
Follow us on

ರಾಜಮೌಳಿ (SS Rajamouli) ಈಗ ವಿಶ್ವದ ಟಾಪ್ ನಿರ್ದೇಶಕರಲ್ಲಿ ಒಬ್ಬರು. ಅವರೊಟ್ಟಿಗೆ ನಟಿಸಲು ಹಲವು ತಾರೆಯರು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಆದರೆ ರಾಜಮೌಳಿ ಚಿತ್ರರಂಗಕ್ಕೆ ಕಾಲಿಡುವಾಗ ಅವರ ಮೇಲೆ ನಂಬಿಕೆ ಇಟ್ಟ ಕೆಲವೇ ಮೊದಲಿಗರಲ್ಲಿ ನಟ ಜೂ ಎನ್​ಟಿಆರ್ (Jr NTR) ಪ್ರಮುಖರು. ಮೊದಲ ಸಿನಿಮಾ ಮೂಲಕವೇ ಹಿಟ್ ನಾಯಕ ಎನಿಸಿಕೊಂಡಿದ್ದ ಜೂ ಎನ್​ಟಿಆರ್ ತಮ್ಮ ಎರಡನೇ ಸಿನಿಮಾಕ್ಕೆ ಹೊಸ ನಿರ್ದೇಶಕರಾಗಿದ್ದ ರಾಜಮೌಳಿಗೆ ಅವಕಾಶ ನೀಡಿದರು. ಆ ಮೂಲಕ ರಾಜಮೌಳಿ ಚಿತ್ರರಂಗಕ್ಕೆ ಪ್ರವೇಶಕ್ಕೆ ಕಾರಣರಾದರು. ಆ ಬಳಿಕ ಈ ಇಬ್ಬರ ಜೋಡಿ ಹಲವು ಇಂಡಸ್ಟ್ರಿ ಹಿಟ್ ಸಿನಿಮಾಗಳನ್ನು ನೀಡಿದೆ. ಅದರಲ್ಲಿ ಒಂದು ಸಿನಿಮಾ ಈಗ ಮರು ಬಿಡುಗಡೆ ಆಗಲಿಕ್ಕಿದೆ.

ಸ್ಟುಡೆಂಟ್ ನಂಬರ್ 1 ಸಿನಿಮಾ ಸಮಯದಲ್ಲಿಯೇ ರಾಜಮೌಳಿ ಹಾಗೂ ಜೂ ಎನ್​ಟಿಆರ್ ಆತ್ಮೀಯ ಗೆಳೆಯರಾಗಿಬಿಟ್ಟರು. ಪರಸ್ಪರರ ಕೆಲಸದ ಬಗ್ಗೆ ಇಬ್ಬರಿಗೂ ಗೌರವ, ನಂಬಿಕೆಗಳು ಮೂಡಿದ್ದವು. ಹಾಗಾಗಿ ರಾಜಮೌಳಿ ಹಾಗೂ ಜೂ ಎನ್​ಟಿಆರ್ ಪರಸ್ಪರರೊಟ್ಟಿಗೆ ಕೆಲಸ ಮಾಡುವಂತಾಯಿತು. ಸ್ಟುಡೆಂಟ್ ನಂಬರ್ 1 ಸಿನಿಮಾ ಮುಗಿದಂತೆ 2003 ರಲ್ಲಿ ರಾಜಮೌಳಿ ಹಾಗೂ ಜೂ ಎನ್​ಟಿಆರ್ ಕಾಂಬಿನೇಶನ್​ನಲ್ಲಿ ಸಿಂಹಾದ್ರಿ ಸಿನಿಮಾ ತೆರೆಗೆ ಬಂತು. ರಾಯಲ ಸೀಮ ಮಾದರಿಯ ಈ ಸಿನಿಮಾ ಆ ಕಾಲಕ್ಕೆ ಇಂಡಸ್ಟ್ರಿ ಹಿಟ್. ಈ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ.

ಮೇ 20 ರಂದು ಜೂ ಎನ್​ಟಿಆರ್ ಹುಟ್ಟುಹಬ್ಬವಿದ್ದು ಈ ಪ್ರಯುಕ್ತ ಸಿಂಹಾದ್ರಿ ಸಿನಿಮಾದ ಮರುಬಿಡುಗಡೆ ಆಗಲಿಕ್ಕಿದೆ. 2003 ರ ಜುಲೈ 9 ರಂದು ಈ ಸಿನಿಮಾ ಮೊದಲ ಬಾರಿಗೆ ಬಿಡುಗಡೆ ಆಗಿತ್ತು. ಇದೀಗ ಇಪ್ಪತ್ತು ವರ್ಷದ ಬಳಿಕ ಅದೇ ಸಿನಿಮಾ ಮತ್ತೆ ತೆರೆಗೆ ಬರುತ್ತಿದೆ. ವಿಶೇಷವೆಂದರೆ ಈ ರೀ-ರಿಲೀಸ್​ಗೂ ಸಹ ಪ್ರೀ ರಿಲೀಸ್ ಇವೆಂಟ್ ಹಮ್ಮಿಕೊಳ್ಳಲಾಗಿದ್ದು, ಪ್ರೀ ರಿಲೀಸ್ ಇವೆಂಟ್​ಗೆ ನಾಯಕ, ನಿರ್ದೇಶಕ ವಿಶ್ವಕ್ ಸೇನ್ ಆಗಮಿಸಲಿದ್ದಾರೆ. ವಿಶ್ವಕ್ ಸೇನ್ ಜೂ ಎನ್​ಟಿಆರ್​ರ ದೊಡ್ಡ ಅಭಿಮಾನಿ, ಹಾಗಾಗಿ ಜೂ ಎನ್​ಟಿಆರ್ ಅಭಿಮಾನಿಗಳು ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದಾರೆ.

ಸಿಂಹಾದ್ರಿ ಸಿನಿಮಾದಲ್ಲಿ ಜೂ ಎನ್​ಟಿಆರ್ ಜೊತೆಗೆ ಭೂಮಿಕಾ ಚಾವ್ಲಾ, ಅಂಕಿತಾ ಜಾವೇರಿ, ನಾಸರ್, ಮುಕೇಶ್ ರಿಷಿ, ರಾಹುಲ್ ದೇವ್, ಬ್ರಹ್ಮಾನಂದಂ, ದಿವಂಗತ ವೇಣು ಮಾಧವನ್, ಆಲಿ ಇನ್ನೂ ಹಲವರು ನಟಿಸಿದ್ದಾರೆ. ಈ ಸಿನಿಮಾದ ಫೈಟ್​ಗಳು, ಡೈಲಾಗ್​ಗಳು ಹಾಗೂ ಹಾಡುಗಳು ಬಹಳ ಜನಪ್ರಿಯವಾಗಿದ್ದವು. ನಟಿ ಭೂಮಿಕಾ ಚಾವ್ಲಾ ಈ ಸಿನಿಮಾದಲ್ಲಿ ಅರೆಹುಚ್ಚಿಯ ಪಾತ್ರದಲ್ಲಿ ನಟಿಸಿದ್ದಾರೆ. ಇಂಟರ್ವೆಲ್ ವೇಳೆಗೆ ನಾಯಕಿ ಭೂಮಿಕಾ, ಜೂ ಎನ್​ಟಿಆರ್ ಗೆ ಗಡಪಾರಿ ಚುಚ್ಚಿ ಕೊಲ್ಲುವ ಯತ್ನ ಮಾಡುವ ದೃಶ್ಯ ಅಭಿಮಾನಿಗಳ ಫೇವರೇಟ್ ಆಗಿತ್ತು.

ಈ ಸಿನಿಮಾಕ್ಕೆ ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ ಅವರೇ ಕತೆ ಬರೆದಿದ್ದರು. ಒಮ್ಮೆ ಯಾವುದೋ ಸಿನಿಮಾ ನೋಡಿದ ಬಳಿಕ ಅವರ ಜೊತೆಗಿದ್ದವರೊಬ್ಬರು, ಸಿನಿಮಾವನ್ನು ಕುರಿತು ನಾಯಕಿ, ನಾಯಕನನ್ನು ಬಿಟ್ಟು ಹೋಗುವಾಗ ಎದೆಗೆ ಚೂರಿ ಇರಿದಂತೆ ಆಯಿತು ಎಂದರಂತೆ. ಆಗ ವಿಜಯೇಂದ್ರ ಪ್ರಸಾದ್, ಒಂದೊಮ್ಮೆ ನಿಜವಾಗಿಯೂ ನಾಯಕಿ, ನಾಯಕನಿಗೆ ಚೂರಿ ಇರಿದರೆ ಹೇಗಿರಬಹುದು ಎನಿಸಿ ಸಿಂಹಾದ್ರಿ ಕತೆ ಬರೆದರಂತೆ!

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ