ಎನ್ಟಿಆರ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ? ಜೂ ಎನ್ಟಿಆರ್ ಏರಿಗೆ, ಬಾಲಕೃಷ್ಣ-ಚಂದ್ರಬಾಬು ನೀರಿಗೆ
NTR Family: ಎನ್ಟಿಆರ್ ಕುಟುಂಬದಲ್ಲಿ ಎಲ್ಲವೂ ಸರಿಯಿದ್ದಂತಿಲ್ಲ. ಚಂದ್ರಬಾಬು ನಾಯ್ಡು, ಬಾಲಕೃಷ್ಣ ಆಯೋಜಿಸಿದ್ದ ಎನ್ಟಿಆರ್ 100 ಕಾರ್ಯಕ್ರಮಕ್ಕೆ ಜೂ ಎನ್ಟಿಆರ್ಗೆ ಆಹ್ವಾನವಿರಲಿಲ್ಲ. ಇದೀಗ ಜೂ ಎನ್ಟಿಆರ್, ತೆಲಂಗಾಣ ಆಡಳಿತ ಪಕ್ಷ ಆಯೋಜಿಸಿರುವ ಎನ್ಟಿಆರ್ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ತೆಲುಗು ಚಿತ್ರರಂಗ (Tollywood) ಹಾಗೂ ರಾಜಕೀಯ (Politics) ಎರಡರಲ್ಲೂ ಎನ್ಟಿಆರ್ (NTR) ಕುಟುಂಬ ಛಾಯೆ, ಪ್ರಭಾವ ಅತೀವವಾದುದು. ಎನ್ಟಿಆರ್ ಕುಟುಂಬದ ಅಗ್ರಗಣ್ಯ ಸೀನಿಯರ್ ಎನ್ಟಿಆರ್ ತೆಲುಗು ಚಿತ್ರರಂಗದ ದಂತಕತೆ ಎನಿಸಿಕೊಂಡವರು. ಜೊತೆಗೆ ತೆಲುಗುದೇಶಂ ಪಕ್ಷ ಕಟ್ಟಿ ಒಂದು ವರ್ಷದೊಳಗೆ ಅವಿಭಜತ ಆಂಧ್ರ ಪ್ರದೇಶದ ಸಿಎಂ ಆದವರು. ಆ ಕುಟುಂಬದ ಹಲವರು ಇಂದು ಸಿನಿಮಾ ಸ್ಟಾರ್ ನಟರಾಗಿ, ರಾಜಕೀಯದಲ್ಲಿ ನಾಯಕರುಗಳಾಗಿ ಮೆರೆಯುತ್ತಿದ್ದಾರೆ. ಬೃಹತ್ ಎನ್ಟಿಆರ್ ಕುಟುಂಬದಲ್ಲಿ ಮೊದಲಿನಿಂದಲೂ ಸಣ್ಣ-ಪುಟ್ಟ ವೈಮಸ್ಸುಗಳು ಇದ್ದವು. ಈಗ ಮತ್ತೊಮ್ಮೆ ಎನ್ಟಿಆರ್ ಕುಟುಂಬದ ವೈಮನ್ಯಸಗಳು ಮುನ್ನೆಲೆಗೆ ಬಂದಿವೆ.
ಎನ್ಟಿಆರ್ ಅವರ 100ನೇ ಜನ್ಮಶತಮಾನೋತ್ಸವ ವರ್ಷ ಇದಾಗಿದ್ದು ಕೆಲವು ದಿನಗಳ ಮುಂಚೆಯಷ್ಟೆ ಎನ್ಟಿಆರ್ ಅಳಿಯ ಚಂದ್ರಬಾಬು ನಾಯ್ಡು, ಪುತ್ರ ಬಾಲಕೃಷ್ಣ ಮುಂದಾಳತ್ವದಲ್ಲಿ ಎನ್ಟಿಆರ್ 100 ಕಾರ್ಯಕ್ರಮವನ್ನು ವೈಜಾಗ್ನಲ್ಲಿ ಅದ್ಧೂರಿಯಾಗಿ ನೆರವೇರಿಸಲಾಯ್ತು. ಈ ಕಾರ್ಯಕ್ರಮಕ್ಕೆ ರಜನೀಕಾಂತ್ ಅನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಎನ್ಟಿಆರ್ ಕುಟುಂಬದ ಜನಪ್ರಿಯ ಸದಸ್ಯ ಜೂ ಎನ್ಟಿಆರ್ ಅವರನ್ನು ಆಹ್ವಾನಿಸಲಾಗಿರಲಿಲ್ಲ ಎನ್ನಲಾಗಿದೆ. ವಿಶೇಷವೆಂದರೆ ಆ ಕಾರ್ಯಕ್ರಮದಲ್ಲಿ ಜೂ ಎನ್ಟಿಆರ್ ಪ್ರಸ್ತಾಪವೂ ಆಗಲಿಲ್ಲ ಎಂದು ಸಹ ಕೆಲವು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಆ ಕಾರ್ಯಕ್ರಮದ ಬಗ್ಗೆ ಜೂ ಎನ್ಟಿಆರ್ ಸಹ ಯಾವುದೇ ಸೋಷಿಯಲ್ ಮೀಡಿಯಾ ಪೋಸ್ಟ್ ಆಗಲಿ ಹೇಳಿಕೆಯನ್ನಾಗಲಿ ನೀಡಿಲ್ಲ.
ಇದು ಹೀಗಿರುವಾಗ ಜೂ ಎನ್ಟಿಆರ್ ಅವರನ್ನು ಇಂದು ತೆಲಂಗಾಣದ ಆಡಳಿತರೂಢ ಸರ್ಕಾರದ ಸಚಿವರೊಬ್ಬರು ಭೇಟಿಯಾಗಿದ್ದು, ತೆಲಂಗಾಣದಲ್ಲಿ ಜೂ ಎನ್ಟಿಆರ್ ಅವರ ಮೂರ್ತಿ ಉದ್ಘಾಟನೆಗೆ ಆಹ್ವಾನಿಸಿದ್ದಾರೆ. ಆಹ್ವಾನ ಸ್ವೀಕರಿಸಿರುವ ಎನ್ಟಿಆರ್ ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರಂತೆ. ಇದು ಪ್ರಸ್ತುತ ಚಂದ್ರಬಾಬು ನಾಯ್ಡು ನಾಯಕತ್ವದಲ್ಲಿರುವ ತೆಲುಗು ದೇಶಂ ಪಾರ್ಟಿ ಸದಸ್ಯರಿಗೆ ಅಸಮಾಧಾನ ತಂದಿದೆ. ತಮ್ಮದೇ ಕುಟುಂಬದವರು ಮಾಡಿದ ಕಾರ್ಯಕ್ರಮಕ್ಕೆ ಹೋಗದ ಜೂ ಎನ್ಟಿಆರ್ ಈಗ ವಿರೋಧಿ ಪಕ್ಷದವರ ಕಾರ್ಯಕ್ರಮಕ್ಕೆ ಹೋಗುತ್ತಿರುವುದು ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗೆ ಪುಷ್ಠಿ ನೀಡಿದೆ.
ಎನ್ಟಿಆರ್ ಕುಟುಂಬದಲ್ಲಿ ವೈಮಸ್ಯ ಹೊಸದೇನೂ ಅಲ್ಲ. ಭಾರಿ ಸಂಖ್ಯೆಯ ಅಭಿಮಾನಿಗಳು, ಜನಬೆಂಬಲ ಹೊಂದಿರುವ ಜೂ ಎನ್ಟಿಆರ್ ಅನ್ನು ಬೇಕೆಂದೇ ಚಂದ್ರಬಾಬು ನಾಯ್ಡು, ಬಾಲಕೃಷ್ಣ ಇನ್ನಿತರರು ಟಿಡಿಪಿ ಪಕ್ಷದಿಂದ ದೂರ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಚಂದ್ರಬಾಬು ನಾಯ್ಡು, ತಮ್ಮ ಪುತ್ರ ನಾರಾ ಲೋಕೇಶ್ ಅನ್ನು ಟಿಡಿಪಿ ಪಕ್ಷದ ಭವಿಷ್ಯದ ನಾಯಕನನ್ನಾಗಿಸುವ ಯತ್ನ ಮಾಡುತ್ತಿದ್ದು, ಜೂ ಎನ್ಟಿಆರ್, ಪಕ್ಷದ ಹತ್ತಿರಕ್ಕೆ ಬಂದರೆ ತಮ್ಮ ಉದ್ದೇಶ ಫಲಿಸುವುದಿಲ್ಲವೆಂಬ ಕಾರಣಕ್ಕೆ ಜೂ ಎನ್ಟಿಆರ್ ಅನ್ನು ದೂರವಿಟ್ಟಿದ್ದಾರೆ ಎನ್ನುವ ಮಾತುಗಳು ಇವೆ.
ಇನ್ನು ಜೂ ಎನ್ಟಿಆರ್ ಚಿಕ್ಕಪ್ಪ, ನಟ ಬಾಲಕೃಷ್ಣ ಸಹ ಜೂ ಎನ್ಟಿಆರ್ ವಿರುದ್ಧ ಕೆಲವು ಸಂದರ್ಶನಗಳಲ್ಲಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಿದೆ. ಹಿಂದೊಮ್ಮೆ, ಜೂ ಎನ್ಟಿಆರ್ ಅನ್ನು ಏಕೆ ಪಕ್ಷದ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿಲ್ಲ, ಯುವಕರನ್ನು ಸೆಳೆಯಲು ಅವರು ಉಪಯೋಗವಾಗುತ್ತಾರಲ್ಲ ಎಂಬ ಪ್ರಶ್ನೆಗೆ, ಅವರ ಅವಶ್ಯಕತೆ ಏನಿದೆ? ನಾವೇ ಇಲ್ಲವೇ ಯುವಕರಿಗೆ ಸ್ಪೂರ್ತಿ ತುಂಬಲು, ನಾನು ಸಾಕಾಗುವುದಿಲ್ಲವೇ, ನಾನೇ ಆ ಕೆಲಸ ಮಾಡುತ್ತೇನೆ ಎಂದಿದ್ದರು.
ಅಲ್ಲದೆ, ಜೂ ಎನ್ಟಿಆರ್ ಸಹ ಇತ್ತೀಚೆಗೆ ಬಿಜೆಪಿಯ ಕೇಂದ್ರ ಗೃಹ ಮಂತ್ರಿಯವರನ್ನು ಭೇಟಿಯಾಗಿದ್ದರು. ಈ ಮೊದಲು ಎನ್ಡಿಎ ಭಾಗವಾಗಿದ್ದ ಟಿಡಿಪಿ ಕೆಲ ವರ್ಷಗಳ ಹಿಂದೆ ಮೈತ್ರಿ ಮುರಿದುಕೊಂಡು ಬಿಜೆಪಿಯನ್ನು ವಿರೋಧಿ ಪಕ್ಷವಾಗಿ ಪರಿಗಣಿಸಿದೆ. ಹೀಗಿರುವಾಗ ಜೂ ಎನ್ಟಿಆರ್, ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದಕ್ಕೆ ಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಆಂಧ್ರ ವಿಧಾನಸಭೆಯಲ್ಲಿ ತಮ್ಮ ಪತ್ನಿಯ ಹೆಸರು ಹೇಳಿ ಬೈದಿದ್ದಾರೆ ಎಂದು ಚಂದ್ರಬಾಬು ನಾಯ್ಡು ಪತ್ರಿಕಾಗೋಷ್ಠಿಯಲ್ಲಿ ಅತ್ತಾಗ, ಎನ್ಟಿಆರ್ ಕುಟುಂಬದವರು ಒಕ್ಕೂರಲಾಗಿ ವಿಡಿಯೋ ಮಾಡಿ ಖಂಡಿಸಿದ್ದರು. ಕೆಲವರು ಕಟು ಪದಗಳನ್ನು ಆಡಳಿತ ಪಕ್ಷದ ವಿರುದ್ಧ ಬಳಸಿದ್ದರು. ಜೂ ಎನ್ಟಿಆರ್ ಸಹ ಪ್ರತ್ಯೇಕ ವಿಡಿಯೋ ಮಾಡಿ ಆಡಳಿತ ಪಕ್ಷದ ನಡೆಯನ್ನು ಖಂಡಿಸಿದ್ದರು. ಆದರೆ ಜೂ ಎನ್ಟಿಆರ್ ಬಹಳ ಮೃದು ಧೋರಣೆಯಲ್ಲಿ ವಿಡಿಯೋ ಮಾಡಿದ್ದಾರೆ ಎಂದು ಆಗಲೂ ಕೆಲವರು ಟೀಕಿಸಿದ್ದರು.
ಏನೇ ಆಗಲಿ, ಎನ್ಟಿಆರ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆದರೆ ಈ ಭಿನ್ನಾಭಿಪ್ರಾಯ ಕುಟುಂಬದಲ್ಲಿ ಒಡಕು ಮೂಡಿ, ಜೂ ಎನ್ಟಿಆರ್, ಟಿಡಿಪಿ ಬಿಟ್ಟು ತಮ್ಮದೇ ಬೇರೆ ಹಾದಿ ಆಯ್ದುಕೊಳ್ಳುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ