ಜೂನಿಯರ್ ಎನ್ಟಿಆರ್ ಅವರ ‘ದೇವರ’ ಪ್ರೀ ರಿಲೀಸ್ ಇವೆಂಟ್ ಅದ್ದೂರಿಯಾಗಿ ಸೆಪ್ಟೆಂಬರ್ 22ರಂದು ನಡೆಯಬೇಕಿತ್ತು. ಕೆಲವೇ ಸಾವಿರ ಜನರು ನಡೆಯುವ ಜಾಗದಲ್ಲಿ ದೊಡ್ಡ ಮಟ್ಟದಲ್ಲಿ ಜನರು ಸೇರಿದ್ದರಿಂದ ಅದನ್ನು ಕ್ಯಾನ್ಸಲ್ ಮಾಡಲಾಯಿತು. ಭಾರೀ ರಾದ್ದಾಂತ ನಡೆದಿದ್ದರಿಂದ ಬಂದ ಸೆಲೆಬ್ರಿಟಿಗಳು ತೊಂದರೆ ಅನುಭವಿಸಬೇಕಾಯಿತು. ಈ ಘಟನೆ ಬಗ್ಗೆ ಜೂನಿಯರ್ ಎನ್ಟಿಆರ್ ಪ್ರತಿಕ್ರಿಯೆ ನೀಡಿದ್ದಾರೆ.
‘ದೇವರ ಈವೆಂಟ್ ಕ್ಯಾನ್ಸಲ್ ಆಗಿದೆ ಎಂದು ತಿಳಿದು ಬೇಸರ ಆಯಿತು. ಈ ಇವೆಂಟ್ಗಾಗಿ ನಾನು ಕಾದಿದ್ದೆ. ನಾನು ನಿಮ್ಮೊಂದಿಗೆ ಸಮಯ ಕಳೆಯಲು ಮತ್ತು ದೇವರ ಬಗ್ಗೆ ಅನೇಕ ಆಸಕ್ತಿದಾಯಕ ವಿವರಗಳನ್ನು ಹಂಚಿಕೊಳ್ಳಲು ಕಾದಿದ್ದೆ. ಈ ಸಿನಿಮಾಗಾಗಿ ಹಾಕಿದ ಶ್ರಮದ ಬಗ್ಗೆ ತಿಳಿಸಲು ಕಾದಿದ್ದೆ. ಆದರೆ, ಭದ್ರತೆಯ ಕಾರಣದಿಂದ ಈ ಕಾರ್ಯಕ್ರಮ ನಡೆಯಲಿಲ್ಲ. ನಿಮಗಿಂತ ಹೆಚ್ಚು ನೋವು ನನಗೆ ಆಗಿದೆ. ಈ ಕಾರ್ಯಕ್ರಮ ಕ್ಯಾನ್ಸಲ್ ಮಾಡಿದ್ದಕ್ಕೆ ನಿರ್ಮಾಪಕರು ಹಾಗೂ ಸಂಘಟಕರನ್ನು ಬಯ್ಯೋದು ತಪ್ಪು’ ಎಂದಿದ್ದಾರೆ ಅವರು.
‘ದೇವರ’ ಈವೆಂಟ್ಗೆ ಫ್ಯಾನ್ಸ್ ಕಾದಿದ್ದರು. ಕಳೆದ ಆರು ವರ್ಷಗಳಲ್ಲಿ ಜೂನಿಯರ್ ಎನ್ಟಿಆರ್ ಸೋಲೋ ಹೀರೋ ಆಗಿ ನಟಿಸಿದ ಸಿನಿಮಾ ಇದು. ಈ ಸಿನಿಮಾ ಮಾಡುವಾಗ ಅವರಿಗೆ ಸಾಕಷ್ಟು ತೊಂದರೆಗಳು ಎದುರಾಗಿದ್ದವು. ಈಗ ಸಿನಿಮಾ ರಿಲೀಸ್ ಆಗುತ್ತಿದೆ ಎನ್ನುವಾಗ ಈ ರೀತಿ ಆಗಿದೆ.
ಇದನ್ನೂ ಓದಿ: ಇನ್ನೊಂದು ಟ್ರೇಲರ್ ಬಿಡುಗಡೆ ಮಾಡಿದ ‘ದೇವರ’ ಚಿತ್ರತಂಡ; ಜನರಿಗೆ ಇಷ್ಟ ಆಯ್ತಾ?
‘ದೇವರ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಕೆಲವೇ ಸಾವಿರ ಜನರು ಸೇರಬಹುದಾದ ಸ್ಥಳದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದು ಚಿತ್ರತಂಡದವರು ಮಾಡಿದ ಮೊದಲ ತಪ್ಪು. ಇವೆಂಟ್ ನಡೆಯಬೇಕಿದ್ದ ಸ್ಥಳದಲ್ಲಿ ಅಂದಾಜು 15ರಿಂದ 20 ಸಾವಿರ ಜನರು ನೆರೆದಿದ್ದರು. ಎಲ್ಲರಿಗೂ ಜಾಗ ಸಿಗದ ಕಾರಣ ವಿಐಪಿ ಅತಿಥಿಗಳಿಗೆ ಮೀಸಲಾಗಿದ್ದ ಕುರ್ಚಿಗಳತ್ತ ಕೆಲವರು ನುಗ್ಗಿದರು. ಇದರಿಂದ ತೊಂದರೆ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:33 am, Mon, 23 September 24