
ಜೂ ಎನ್ಟಿಆರ್ (Jr NTR), ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ. ‘ಆರ್ಆರ್ಆರ್’ ಸಿನಿಮಾದ ಬಳಿಕವಂತೂ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಜೂ ಎನ್ಟಿಆರ್ ಅವರ ನಂದಮೂರಿ ಕುಟುಂಬ ಹಲವು ದಶಕಗಳಿಂದಲೂ ತೆಲುಗು ಚಿತ್ರರಂಗ ಮತ್ತು ರಾಜಕೀಯದ ಮೇಲೆ ಪ್ರಭಾವ ಬೀರುತ್ತಲೇ ಬಂದಿದೆ. ಸ್ವತಃ ಜೂ ಎನ್ಟಿಆರ್ ಸಹ ಕೆಲವು ವರ್ಷಗಳ ಹಿಂದಿನ ವರೆಗೂ ಸಹ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ತಮ್ಮ ಕುಟುಂಬದ ಪಕ್ಷವಾದ ಟಿಡಿಪಿ (ತೆಲುಗು ದೇಶಂ ಪಾರ್ಟಿ)ಯ ತಾರಾ ಪ್ರಚಾರಕ ಆಗಿದ್ದರು. ಆದರೆ ಇತ್ತೀಚೆಗೆ ಅವರನ್ನು ಕುಟುಂಬದಿಂದ ತುಸು ದೂರ ಇರಿಸಲಾಗಿದೆ. ಟಿಡಿಪಿಯಿಂದಲೂ ಜೂ ಎನ್ಟಿಆರ್ ದೂರ ಸರಿದಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ತಮ್ಮ ನಾಯಕ ಸಿಎಂ ಆಗಲಿ ಮತ್ತು ಆಗಿಯೇ ಆಗುತ್ತಾರೆ ಎಂಬ ಭರವಸೆಯಲ್ಲಿದ್ದು, ಅದನ್ನು ಅಭಿವ್ಯಕ್ತಿಪಡಿಸಿದ್ದಾರೆ.
ನಟ ಜೂ ಎನ್ಟಿಆರ್ ಅವರು ಇಂದು (ಮಾರ್ಚ್ 08) ಬೆಂಗಳೂರಿಗೆ ಬಂದಿದ್ದರು. ಇಲ್ಲಿನ ಕಿಮ್ಸ್ ಆಸ್ಪತ್ರೆಯ ಹೊಸ ಘಟಕದ ಉದ್ಘಾಟನೆಗೆಂದು ಜೂ ಎನ್ಟಿಆರ್ ಅವರು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಜೂ ಎನ್ಟಿಆರ್ ಅವರನ್ನು ನೋಡಲು ನೂರಾರು ಮಂದಿ ಅಭಿಮಾನಿಗಳು ಧಾವಿಸಿದ್ದರು. ಬಳಿಕ ಕಿಮ್ಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೂ ಎನ್ಟಿಆರ್ ಅವರನ್ನು ‘25 ವರ್ಷಗಳ ಬಳಿಕ ನಿಮ್ಮನ್ನು ನೀವು ಎಲ್ಲಿ ನೋಡಲು ಬಯಸುತ್ತೀರಿ’ ಎಂದು ಕೇಳಿದರು. ಜೂ ಎನ್ಟಿಆರ್ ಸಹಜವಾಗಿಯೇ ತಮ್ಮ ಹಾಸ್ಯಮಯ ಶೈಲಿಯಲ್ಲಿ ಆಗ ನನಗೆ 67 ವರ್ಷ ವಯಸ್ಸಾಗಿರುತ್ತದೆ ಎಂದಷ್ಟೆ ಹೇಳಿದರು.
ಆದರೆ ಅಭಿಮಾನಿಗಳು ಸುಮ್ಮಿರಲಿಲ್ಲ, ‘ಸಿಎಂ ಸಿಎಂ’ ಎಂದು ಕೂಗಲು ಆರಂಭಿಸಿದರು. ಜೂ ಎನ್ಟಿಆರ್ ಅವರು ಅಭಿಮಾನಿಗಳ ಕೂಗಾಟ ಗಮನಿಸಿದರಾದರೂ ಅವರಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಭಿಮಾನಿಗಳ ಕೂಗು ಕೇಳಿದರೂ ಸಹ ಸುಮ್ಮನೇ ಇದ್ದರು ಜೂ ಎನ್ಟಿಆರ್. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಜೂ ಎನ್ಟಿಆರ್ ಹಳೆ ಸಿನಿಮಾ ಸೀಕ್ವೆಲ್ಗೆ ಕತೆ ರೆಡಿ, ಆದರೆ ನಟಿಸುತ್ತಾರಾ ನಟ?
ಟಿಡಿಪಿ ಪಕ್ಷದ ಸ್ಟಾರ್ ಪ್ರಚಾರಕ ಆಗಿದ್ದರು ಜೂ ಎನ್ಟಿಆರ್. ಆದರೆ ಇತ್ತೀಚೆಗೆ ಚಂದ್ರಬಾಬು ನಾಯ್ಡು ಮತ್ತು ಜೂ ಎನ್ಟಿಆರ್ ಅವರ ಚಿಕ್ಕಪ್ಪ ಆಗಿರುವ ನಂದಮೂರಿ ಬಾಲಕೃಷ್ಣ ಅವರು ಜೂ ಎನ್ಟಿಆರ್ ಅನ್ನು ಪಕ್ಷದಿಂದ ಮತ್ತು ನಂದಮೂರಿ ಕುಟುಂಬದಿಂದ ದೂರ ಇರಿಸಿದ್ದಾರೆ. ಚಂದ್ರಬಾಬು ನಾಯ್ಡುಗೆ ಪುತ್ರ, ಬಾಲಕೃಷ್ಣಗೆ ಅಳಿಯ (ಮಗಳ ಗಂಡ) ಆಗಿರುವ ನಾರಾ ಲೋಕೇಶ್ ಅನ್ನು ರಾಜಕೀಯದಲ್ಲಿ ಬೆಳೆಸಬೇಕೆಂದು ಜೂ ಎನ್ಟಿಆರ್ ಅವರನ್ನು ಪಕ್ಕಕ್ಕೆ ಸರಿಸಲಾಗಿದೆ. ಜೂ ಎನ್ಟಿಆರ್, ಪಕ್ಷಕ್ಕೆ ಬಂದರೆ ಅವರ ಜನಪ್ರಿಯತೆ ಮುಂದೆ ನಾರಾ ಲೋಕೇಶ್ ಮಂಕಾಗುವುದು ಖಾತ್ರಿ. ಹಾಗಾಗಿ ಜೂ ಎನ್ಟಿಆರ್ ಮಾತ್ರವಲ್ಲ ಅವರ ಸಹೋದರ ಕಲ್ಯಾಣ್ ರಾಮ್ ಅವರನ್ನೂ ಸಹ ಪಕ್ಷದಿಂದ ದೂರ ಇರಿಸಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ