
ಪ್ಯಾನ್ ಇಂಡಿಯಾ ಸ್ಟಾರ್ ನಟ ಜೂ ಎನ್‌ಟಿಆರ್ (Jr NTR) ಇದೀಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಾಮಾನ್ಯವಾಗಿ ವಿವಾದಗಳಿಂದ ದೂರ ಉಳಿವ ಜೂ ಎನ್‌ಟಿಆರ್ ಅವರು ಇದೀಗ ಕೋರ್ಟ್ ಮೆಟ್ಟಿಲೇರಿರುವುದು ಅಭಿಮಾನಿಗಳ ಆಶ್ಚರ್ಯಕ್ಕೆ ಕಾರಣವಾಗಿದೆ. ಕೆಲವು ಬಾಲಿವುಡ್ ಸ್ಟಾರ್ ನಟ, ನಟಿಯರು ಇತ್ತೀಚೆಗೆ ತಮ್ಮ ವ್ಯಕ್ತಿತ್ವದ ಹಕ್ಕುಗಳ ರಕ್ಷಣೆಗೆ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ಇದೀಗ ನಟ ಜೂ ಎನ್‌ಟಿಆರ್ ಸಹ ಇದೇ ವಿಷಯಕ್ಕೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ತಮ್ಮ ಹೆಸರು, ಚಿತ್ರ, ಹೋಲಿಕೆ ಮತ್ತು ಗುರುತಿನ ಇತರ ಗುಣಲಕ್ಷಣಗಳನ್ನು ಅನಧಿಕೃತವಾಗಿ ಬಳಸುವುದರ ವಿರುದ್ಧ ತಮ್ಮ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸಿಕೊಡುವಂತೆ ಕೋರಿ ಜೂನಿಯರ್ ಎನ್‌ಟಿಆರ್ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅವರು ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಹಿರಿಯ ವಕೀಲ ಜೆ ಸಾಯಿ ದೀಪಕ್, ಜೂನಿಯರ್ ಎನ್‌ಟಿಆರ್ ಅವರ ಪರವಾಗಿ ವಾದಿಸಿದ್ದು, ಹಲವಾರು ಇ-ಕಾಮರ್ಸ್ ಮತ್ತು ಸಾಮಾಜಿಕ ಮಾಧ್ಯಮ ಸೈಟ್‌ಗಳು ಜೂ ಎನ್‌ಟಿಆರ್ ಅವರ ಚಿತ್ರ, ವಿಡಿಯೋಗಳನ್ನು ಬಳಸುವ ಮೂಲಕ ಅವರ ಹಕ್ಕುಗಳನ್ನು ಉಲ್ಲಂಘಿಸಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಜೂ ಎನ್‌ಟಿಆರ್ ಅವರ ಒಪ್ಪಿಗೆಯಿಲ್ಲದೆ ವಾಣಿಜ್ಯ ಲಾಭಕ್ಕಾಗಿ ಅವರ ಚಿತ್ರ, ವಿಡಿಯೋ ಇನ್ನಿತರೆಗಳನ್ನು ಬಳಸಲಾಗುತ್ತಿದೆ ಎಂದು ಅವರು ನ್ಯಾಯಾಲಯದಲ್ಲಿ ತಿಳಿಸಿದರು.
ಜೂ ಎನ್‌ಟಿಆರ್ ಪರ ವಕೀಲರ ವಾದ ಆಲಿಸಿದ ನಂತರ, ನ್ಯಾಯಾಲಯವು ಜೂನಿಯರ್ ಎನ್‌ಟಿಆರ್ ಅವರ ಮೊಕದ್ದಮೆಯನ್ನು ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ಅಡಿಯಲ್ಲಿ ಔಪಚಾರಿಕ ದೂರಾಗಿ ಪರಿಗಣಿಸಲು ವೇದಿಕೆಗಳಿಗೆ ಸಾಮಾಜಿಕ ಜಾಲತಾಣ ವೇದಿಕೆಗಳು ಮತ್ತು ಕೆಲ ವೆಬ್ಸೈಟ್ಗಳಿಗೆ ಸೂಚನೆ ನಿಡಿದ್ದಲ್ಲದೆ, ಕಂಪನಿಗಳಿಗೆ ಪ್ರತಿಕ್ರಿಯಿಸಲು ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ.
ಇದನ್ನೂ ಓದಿ:‘ವಾರ್ 2’ ಸೋತರೂ ಜೂ ಎನ್ಟಿಆರ್ಗೆ ಮತ್ತೊಂದು ಅವಕಾಶ ಕೊಟ್ಟ ವೈಆರ್ಎಫ್
ಡಿಸೆಂಬರ್ 22 ರಂದು ನ್ಯಾಯಾಲಯವು ಈ ವಿಷಯವನ್ನು ಮತ್ತೆ ವಿಚಾರಣೆ ನಡೆಸಲಿದೆ, ಆಗ ವಿವರವಾದ ಮತ್ತು ಔಪಚಾರಿಕ ಆದೇಶ ಹೊರಡಿಸುವ ನಿರೀಕ್ಷೆಯಿದೆ. ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ, ನಾಗಾರ್ಜುನ, ಅನಿಲ್ ಕಪೂರ್, ಅಭಿಷೇಕ್ ಬಚ್ಚನ್, ಚಿರಂಜೀವಿ ಮತ್ತು ಇತರ ಸೆಲೆಬ್ರಿಟಿಗಳು ತಮ್ಮ ವ್ಯಕ್ತಿತ್ವದ ದುರುಪಯೋಗದ ವಿರುದ್ಧ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಹಲವಾರು ನಟ, ನಟಿಯರು ತಮ್ಮ ವ್ಯಕ್ತಿತ್ವ ಹಕ್ಕಿನ ರಕ್ಷಣೆಯನ್ನು ಮಾಡಿಕೊಂಡಿದ್ದಾರೆ.
ಜೂ ಎನ್‌ಟಿಆರ್ ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿ. ಇದರ ಬಳಿಕ ಜೂ ಎನ್‌ಟಿಆರ್ ಅವರು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸಲಿರುವ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಸಿನಿಮಾದ ಕತೆಯು ಮುರುಗನ್ ದೇವರ ಕುರಿತಾದ ಕತೆಯನ್ನು ಒಳಗೊಂಡಿರಲಿದೆ. ಅದಾದ ಬಳಿಕ ‘ದೇವರ 2’ನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಬಾಲಿವುಡ್ ಸಿನಿಮಾ ಒಂದರಲ್ಲಿ ಜೂ ಎನ್‌ಟಿಆರ್ ನಟಿಸಲಿದ್ದಾರೆ. ತಮಿಳಿನ ನಿರ್ದೇಶಕ ವೆಟ್ರಿಮಾರನ್ ಅವರೊಟ್ಟಿಗೆ ಸಹ ಸಿನಿಮಾ ಒಂದರ ಕುರಿತು ಚರ್ಚೆ ಜಾರಿಯಲ್ಲಿದೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ