‘ಟಾಕ್ಸಿಕ್’ಗೆ ಕೆಲಸ ಮಾಡುತ್ತಿದೆ ಪ್ರತಿಭಾವಂತ ತಂತ್ರಜ್ಞರ ತಂಡ: ಹೆಸರುಗಳು ಇಲ್ಲಿವೆ
Toxic movie: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರಿ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿದೆ. ಸಿನಿಮಾಕ್ಕಾಗಿ ದೊಡ್ಡ ತಂತ್ರಜ್ಞರ ತಂಡವನ್ನು ಯಶ್ ಒಟ್ಟಿಗೆ ಸೇರಿಸಿದ್ದಾರೆ. ಈ ಸಿನಿಮಾಕ್ಕಾಗಿ ಭಾರತ ಚಿತ್ರರಂಗದ ಕೆಲವು ಅತ್ಯುತ್ತಮ ತಂತ್ರಜ್ಞರು ಕೆಲಸ ಮಾಡಿದ್ದಾರೆ. ‘ಟಾಕ್ಸಿಕ್’ ಸಿನಿಮಾಕ್ಕೆ ಕೆಲಸ ಮಾಡುತ್ತಿರುವ ತಂತ್ರಜ್ಞರ ಪಟ್ಟಿ ಇಲ್ಲಿದೆ...

ಯಾವುದೇ ಸಿನಿಮಾಕ್ಕೆ ಮೂಲ ಜೀವಾಳ ಆ ಸಿನಿಮಾದ ತಂತ್ರಜ್ಞರು. ನಿರ್ದೇಶಕ, ಕ್ಯಾಮೆರಾಮ್ಯಾನ್, ಎಡಿಟರ್, ಕೊರಿಯೋಗ್ರಾಫರ್, ಪ್ರೊಡಕ್ಷನ್ ಡಿಸೈನರ್, ಸಂಗೀತ ನಿರ್ದೇಶಕ ಇನ್ನೂ ಕೆಲವರು. ಸಿನಿಮಾದ ನಿಜವಾದ ಬೆನ್ನೆಲುಬು ಈ ತಂತ್ರಜ್ಞರು. ನಟರುಗಳು ತೆರೆಯ ಮುಂದೆ ಕಾಣಿಸುತ್ತಾರೆ ಆದರೆ ನಿಜವಾಗಿಯೂ ‘ಹೀರೋ’ಗಳೆಂದರೆ ತಂತ್ರಜ್ಞರು. ಇದನ್ನು ಚೆನ್ನಾಗಿ ಅರಿತಿರುವ ನಟ ಯಶ್, ತಮ್ಮ ಮಹಾತ್ವಾಕಾಂಕ್ಷೆಯ ಸಿನಿಮಾ ‘ಟಾಕ್ಸಿಕ್’ಗಾಗಿ ಅದ್ಭುತವಾದ ತಂತ್ರಜ್ಞರ ತಂಡವನ್ನು ಸೇರಿಸಿಕೊಂಡಿದ್ದಾರೆ. ‘ಟಾಕ್ಸಿಕ್’ (Toxic) ಸಿನಿಮಾಕ್ಕೆ ಕೆಲಸ ಮಾಡಿರುವ ಪ್ರಮುಖ ತಂತ್ರಜ್ಞರ ಪಟ್ಟಿಯಿರುವ ಹೊಸ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿದೆ.
ಬಹುತೇಕರಿಗೆ ತಿಳಿದಿರುವಂತೆ ‘ಟಾಕ್ಸಿಕ್’ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಮಲಯಾಳಂ ಚಿತ್ರರಂಗದ ನಿರ್ದೇಶಕಿ ಮತ್ತು ನಟಿ ಗೀತು ಮೋಹನ್ದಾಸ್. ವಿಶೇಷವೆಂದರೆ ‘ಟಾಕ್ಸಿಕ್’ ಸಿನಿಮಾದ ಕತೆಯನ್ನು ಜಂಟಿಯಾಗಿ ಯಶ್ ಮತ್ತು ಗೀತು ಮೋಹನ್ದಾಸ್ ಬರೆದಿದ್ದಾರೆ. ಕತೆ ರಚನೆಯಲ್ಲಿ ಯಶ್ ಅವರ ಪಾಲುದಾರಿಕೆಯೂ ಇದೆ. ಸಿನಿಮಾಕ್ಕೆ ಬಂಡವಾಳವನ್ನು ಯಶ್ ಮತ್ತು ಕೆವಿಎನ್ ಒಟ್ಟಿಗೆ ಹೂಡಿಕೆ ಮಾಡಿದ್ದಾರೆ.
ಸಿನಿಮಾದ ಸಿನಿಮಾಟೊಗ್ರಾಫರ್ ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ಕ್ಯಾಮೆರಾಮ್ಯಾನ್ ಆಗಿರುವ ರಾಜೀವ್ ರವಿ. ಭಾರತದ ಅತ್ಯುತ್ತಮ ಸಿನಿಮಾಟೊಗ್ರಾಫರ್ಗಳಲ್ಲಿ ಇವರು ಸಹ ಒಬ್ಬರು. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ಬಾಂಬೆ ವೆಲ್ವೆಟ್’, ‘ಲೈಯರ್ಸ್ ಡೈಸ್’, ‘ನೋ ಸ್ಮೋಕಿಂಗ್’, ‘ಉಡ್ತಾ ಪಂಜಾಬ್’, ಹಿಂದಿಯ ‘ಬೆಲ್ ಬಾಟಮ್’ ಇನ್ನೂ ಹಲವಾರು ಅತ್ಯುತ್ತಮ ಸಿನಿಮಾಗಳಿಗೆ ಕ್ಯಾಮೆರಾಮ್ಯಾನ್ ಆಗಿದ್ದಾರೆ. ಜೊತೆಗೆ ‘ಅನ್ನಯುಂ ರಸೂಲುಂ’, ‘ಕಮ್ಮಟಿಪಾದಂ’ ಸೇರಿದಂತೆ ಇನ್ನೂ ಕೆಲವು ಅತ್ಯುತ್ತಮ ಮಲಯಾಳಂ ಸಿನಿಮಾಗಳ ನಿರ್ದೇಶನ ಸಹ ಮಾಡಿದ್ದಾರೆ.
ಇದನ್ನೂ ಓದಿ:ಈ ವರ್ಷ ಪೋಷಕರಾದ ಬಾಲಿವುಡ್ ಸೆಲೆಬ್ರಿಟಿಗಳು ಇವರೇ ನೋಡಿ
ಇನ್ನು ಸಂಗೀತ ನಿರ್ದೇಶಕರಾಗಿ ರವಿ ಬಸ್ರೂರು ಇದ್ದಾರೆ. ಅನಿರುದ್ಧ್ ರವಿಚಂದ್ರನ್ ಬದಲಿಗೆ ರವಿ ಬಸ್ರೂರು ಅವರಿಗೆ ಯಶ್ ಅವಕಾಶ ನೀಡಿದ್ದಾರೆ. ಇದೊಂದು ಆಕ್ಷನ್ ಸಿನಿಮಾ ಆಗಿರುವ ಕಾರಣ ಆಕ್ಷನ್ ದೃಶ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು ಹಾಲಿವುಡ್ ಆಕ್ಷನ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ ಈ ಸಿನಿಮಾಕ್ಕೆ ಫೈಟ್ ಕೊರಿಯೋಗ್ರಫಿ ಮಾಡಿದ್ದಾರೆ. ಅವರ ಜೊತೆಗೆ ದಕ್ಷಿಣದ ಖ್ಯಾತ ಆಕ್ಷನ್ ಡಿಯೋ ಆಗಿರುವ ಅನ್ಬರಿವ್ ಅವರುಗಳು ಸಹ ಇದ್ದಾರೆ.
ದೊಡ್ಡ ಸಿನಿಮಾಗಳಿಗೆ ಅತ್ಯಂತ ಮುಖ್ಯವಾಗಿ ಬೇಕಾಗುವುದು ಪ್ರೊಡಕ್ಷನ್ ಡಿಸೈನರ್. ‘ಟಾಕ್ಸಿಕ್’ ಸಿನಿಮಾನಲ್ಲಿ ಅಬಿಡ್ ಟಿಪಿ ಅವರು ಪ್ರೊಡಕ್ಷನ್ ಡಿಸೈನರ್ ಆಗಿದ್ದಾರೆ. ಇವರು ಈ ಹಿಂದೆ ಶಾರುಖ್ ನಟನೆಯ ‘ಫ್ಯಾನ್’, ‘ಡಾನ್’, ‘ಲಕ್ ಬೈ ಚಾನ್ಸ್’, ‘ಪರಮಾಣು’ ಇನ್ನೂ ಕೆಲವು ಸೂಪರ್ ಹಿಟ್ ಬಾಲಿವುಡ್ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಸಿನಿಮಾದ ಕಲಾ ನಿರ್ದೇಶನ ಮಾಡಿರುವುದು ಮೋಹನ್ ಬಿ ಕೆರೆ.
ಸಿನಿಮಾ ಅನ್ನು ಎಡಿಟರ್ ಮೀಡಿಯಂ ಎಂದು ಕರೆಯಲಾಗುತ್ತದೆ. ಸಿನಿಮಾಕ್ಕೆ ನಿರ್ದೇಶಕನಕ್ಕೆ ಎಡಿಟರ್ ಸಹ ಅತ್ಯಂತ ಮುಖ್ಯ. ‘ಟಾಕ್ಸಿಕ್’ ಸಿನಿಮಾನಲ್ಲಿ ಉಜ್ವಲ್ ಕುಲಕರ್ಣಿ ಅವರು ಎಡಿಟರ್ ಆಗಿದ್ದಾರೆ. ‘ಕೆಜಿಎಫ್ 2’ ಇವರ ಮೊದಲ ಸಿನಿಮಾ. ಆ ಬಳಿಕ ‘ಸಲಾರ್’ ಸಿನಿಮಾಕ್ಕೂ ಕೆಲಸ ಮಾಡಿದ್ದಾರೆ. ಇದೀಗ ‘ಟಾಕ್ಸಿಕ್’ ಸಿನಿಮಾನಲ್ಲಿ ಕೆಲಸ ಮಾಡುತ್ತಿದ್ದಾರೆ. ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ಗೂ ಇವರೇ ಎಡಿಟರ್.
ನೃತ್ಯ ನಿರ್ದೇಶಕರಾಗಿ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಕೆಲಸ ಮಾಡುತ್ತಿದ್ದಾರೆ. ಅವರ ಜೊತೆಗೆ ಕನ್ನಡದ ಇಮ್ರಾನ್ ಸರ್ದಾರಿಯಾ ಮತ್ತು ಹರ್ಷ ಸಹ ಇದ್ದಾರೆ. ಯಶ್ ಅವರ ವಸ್ತ್ರ ವಿನ್ಯಾಸ ಮಾಡುತ್ತಿರುವುದು ಸಾನಿಯಾ ಸರ್ದಾರಿಯಾ, ಇತರೆ ಪಾತ್ರಗಳಿಗೆ ನೇಹಾ ಬಜಾಜ್. ಸೌಂಡ್ ಡಿಸೈನ್ ಮಾಡಿರುವುದು ಕುನಾಲ್ ಶರ್ಮಾ ಇವರು ಸಹ ಬಹಳ ಜನಪ್ರಿಯ ಶಬ್ದ ವಿನ್ಯಾಸಕರಾಗಿದ್ದಾರೆ. ಇನ್ನೂ ಹತ್ತು ಹಲವು ಪ್ರತಿಭಾವಂತ ತಂತ್ರಜ್ಞರು ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




