ಪ್ರಶಾಂತ್ ನೀಲ್ ಸಿನಿಮಾ ಪ್ರಾರಂಭಿಸಲಿರುವ ಜೂ ಎನ್​ಟಿಆರ್, ಮುಗಿಯುವುದು ಯಾವಾಗ?

Prashanth Neel: ಜೂ ಎನ್​ಟಿಆರ್ ಇತ್ತೀಚೆಗಷ್ಟೆ ‘ವಾರ್ 2’ ಸಿನಿಮಾದ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದಾರೆ. ಹೃತಿಕ್ ರೋಷನ್​ ಗಾಯಗೊಂಡಿರುವ ಕಾರಣ ಜೂ ಎನ್​ಟಿಆರ್​ಗೆ ತುಸು ಬಿಡುವಿನ ಸಮಯ ದೊರೆತಿದ್ದು, ಕುಟುಂಬದ ಜೊತೆಗೆ ಪ್ರವಾಸ ಹೋಗಿ ಬಂದ ಜೂ ಎನ್​ಟಿಆರ್ ಇದೀಗ ಪ್ರಶಾಂತ್ ನೀಲ್ ಸಿನಿಮಾ ಸೇರಿಕೊಂಡಿದ್ದಾರೆ.

ಪ್ರಶಾಂತ್ ನೀಲ್ ಸಿನಿಮಾ ಪ್ರಾರಂಭಿಸಲಿರುವ ಜೂ ಎನ್​ಟಿಆರ್, ಮುಗಿಯುವುದು ಯಾವಾಗ?
Jr Ntr

Updated on: Apr 20, 2025 | 5:11 PM

ಜೂ ಎನ್​ಟಿಆರ್ (Jr NTR) ಒಂದರ ಹಿಂದೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಆರ್​​ಆರ್​​ಆರ್’ ಸಿನಿಮಾ ಮೂಲಕ ಪ್ಯಾನ್ ವರ್ಲ್ಡ್ ನಟ ಎನಿಸಿಕೊಂಡಿರುವ ಜೂ ಎನ್​ಟಿಆರ್ ಆ ಬಳಿಕ ನಟಿಸಿದ ‘ದೇವರ’ ಸಿನಿಮಾ ಅನ್ನೂ ಸಹ ಹಿಟ್ ಮಾಡಿಕೊಂಡರು. ಕೊರಟಾಲ ಶಿವ ನಿರ್ದೇಶನದ ‘ದೇವರ’ ಸಿನಿಮಾ ಭಾರತದಲ್ಲಿ ಮಾತ್ರವೇ ಅಲ್ಲದೆ ಜಪಾನ್​ನಲ್ಲಿ ಸಹ ಸೂಪರ್ ಹಿಟ್ ಆಯ್ತು. ಅದಾದ ಬಳಿಕ ಸ್ಟಾರ್ ನಟ ಹೃತಿಕ್ ರೋಷನ್ ಜೊತೆಗೆ ‘ವಾರ್ 2’ ಸಿನಿಮಾನಲ್ಲಿ ಜೂ ಎನ್​ಟಿಆರ್ ನಟಿಸಿದ್ದಾರೆ. ಇದೀಗ ಅವರು ಬಹು ನಿರೀಕ್ಷಿತ ಪ್ರಶಾಂತ್ ನೀಲ್ ಸಿನಿಮಾ ಸೆಟ್​ಗೆ ಎಂಟ್ರಿ ನೀಡಿದ್ದಾರೆ.

ಪ್ರಶಾಂತ್ ನೀಲ್ ಹಾಗೂ ಜೂ ಎನ್​ಟಿಆರ್ ಜೊತೆಗೆ ಸಿನಿಮಾ ಮಾಡುವುದಾಗಿ ಘೋಷಿಸಿ ಎರಡು ವರ್ಷವಾಗುತ್ತಾ ಬಂದಿದೆ. ಸಿನಿಮಾದ ಮುಹೂರ್ತ ನಡೆದು ಹಲವು ವಾರಗಳೇ ಕಳೆದಿವೆ. ಆದರೆ ಅನಿವಾರ್ಯ ಕಾರಣಗಳಿಂದಾಗಿ ಸಿನಿಮಾ ತಡವಾಗುತ್ತಲೇ ಬಂದಿತ್ತು. ಆದರೆ ಕೆಲ ವಾರಗಳ ಹಿಂದಷ್ಟೆ ಪ್ರಶಾಂತ್ ನೀಲ್, ಸಿನಿಮಾ ಶೂಟಿಂಗ್ ಪ್ರಾರಂಭ ಮಾಡಿದ್ದಾರೆ. ಆದರೆ ಜೂ ಎನ್​ಟಿಆರ್ ತುಸು ತಡವಾಗಿ ಸೆಟ್ ಸೇರಿಕೊಳ್ಳುತ್ತಿದ್ದಾರೆ.

‘ವಾರ್ 2’ ಸಿನಿಮಾದ ಚಿತ್ರೀಕರಣವನ್ನು ಜೂ ಎನ್​ಟಿಆರ್ ಮುಗಿಸಿದ್ದು, ಹೃತಿಕ್ ರೋಷನ್​ಗೆ ಗಾಯ ಆಗಿರುವ ಕಾರಣದಿಂದಾಗಿ ಸಿನಿಮಾದ ಪ್ರಚಾರ ಮತ್ತು ಸಿನಿಮಾದ ಒಂದು ಹಾಡಿನ ಚಿತ್ರೀಕರಣ ತುಸು ತಡವಾಗಿದೆ. ಹಾಗಾಗಿ ಜೂ ಎನ್​ಟಿಆರ್​ಗೆ ತುಸು ಬಿಡುವಿನ ಸಮಯ ದೊರೆತಿದ್ದು, ಜೂ ಎನ್​ಟಿಆರ್ ಕುಟುಂಬದ ಜೊತೆಗೆ ದುಬೈಗೆ ಹೋಗಿ ಕಾಲ ಕಳೆದು ಬಂದಿದ್ದಾರೆ. ಬಂದ ಕೂಡಲೇ ಈಗ ಪ್ರಶಾಂತ್ ನೀಲ್ ಸಿನಿಮಾ ಸೆಟ್​ಗೆ ಭೇಟಿ ನೀಡಿದ್ದು, ಏಪ್ರಿಲ್ 22 ರಿಂದ ಜೂ ಎನ್​ಟಿಆರ್ ನಟನೆಯ ಭಾಗಗಳ ಚಿತ್ರೀಕರಣ ಪ್ರಾರಂಭ ಆಗಲಿದೆ.

ಇದನ್ನೂ ಓದಿ:‘RRR’ ಚಿತ್ರದ ರೀತಿ ‘ವಾರ್ 2’ನಲ್ಲೂ ಇರಲಿದೆ ಭರ್ಜರಿ ಡ್ಯಾನ್ಸ್; ಮತ್ತೊಂದು ಆಸ್ಕರ್ ಮೇಲೆ ಕಣ್ಣು?

ಜೂ ಎನ್​ಟಿಆರ್, ಸೆಟ್​ಗೆ ಬರುವ ಒಂದು ತಿಂಗಳು ಮುಂಚಿತವಾಗಿಯೇ ಸಿನಿಮಾ ಚಿತ್ರೀಕರಣವನ್ನು ಪ್ರಶಾಂತ್ ನೀಲ್ ಪ್ರಾರಂಭ ಮಾಡಿದ್ದಾರೆ. ಇತರೆ ಕೆಲ ಪಾತ್ರಗಳನ್ನು, ನಟರನ್ನು ಇರಿಸಿಕೊಂಡು ಒಂದು ತಿಂಗಳಿನಿಂದಲೂ ಚಿತ್ರೀಕರಣ ಮಾಡುತ್ತಿದ್ದಾರೆ. ಜೊತೆಗೆ ಸಿನಿಮಾದ ಮಾಸ್ ಸೀನ್​ಗಳು, ಲಿಂಕ್ ಅಪ್ ಸೀನ್​ಗಳು, ವೈಡ್ ಶಾಟ್​ಗಳ ಚಿತ್ರೀಕರಣವನ್ನು ಸಹ ಪ್ರಶಾಂತ್ ನೀಲ್ ಈಗಾಗಲೇ ಮಾಡಿಕೊಂಡಿದ್ದಾರೆ.

ಜೂ ಎನ್​ಟಿಆರ್ ಈಗಷ್ಟೆ ‘ವಾರ್ 2’ ಸಿನಿಮಾ ಮುಗಿಸಿ ಬಂದಿದ್ದಾರೆ. ಈಗ ಪ್ರಶಾಂತ್ ನೀಲ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅದಾದ ಬಳಿಕ ‘ದೇವರ 2’ ಸಿನಿಮಾನಲ್ಲಿ ನಟಿಸಲಿದ್ದಾರೆ. ಈ ಸಿನಿಮಾ ಅನ್ನು ಕೊರಟಾಲ ಶಿವ ಅವರೇ ನಿರ್ದೇಶನ ಮಾಡಲಿದ್ದಾರೆ. ನಿರ್ಮಾಣ ಮಾಡಲಿರುವುದು ಜೂ ಎನ್​ಟಿಆರ್ ಸಹೋದರ ಕಲ್ಯಾಣ್ ರಾಮ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ