ನಟ ಜೂನಿಯರ್ ಎನ್ಟಿಆರ್ (Jr NTR) ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ‘ಆರ್ಆರ್ಆರ್’ ಸಿನಿಮಾ ಗೆದ್ದ ಬಳಿಕ ಅವರ ಖ್ಯಾತಿ ದುಪ್ಪಟ್ಟಾಗಿದೆ. ‘ದೇವರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರೋ ಅವರು, ‘ವಾರ್ 2’ ಸಿನಿಮಾ ಕೆಲಸಗಳಲ್ಲೂ ತೊಡಗಿಕೊಳ್ಳಬೇಕಿದೆ. ಆ ಬಳಿಕ ಅವರು ಪ್ರಶಾಂತ್ ನೀಲ್ ಸಿನಿಮಾ ಮಾಡಬೇಕಿದೆ. ಇಷ್ಟೆಲ್ಲ ಬ್ಯುಸಿ ಇರೋ ಅವರ ಕಾಲ್ಶೀಟ್ ಪಡೆಯಬೇಕು ಎಂದರೆ ಅದು ಸುಲಭದ ಮಾತಲ್ಲ. ಈಗ ಜೂನಿಯರ್ ಎನ್ಟಿಆರ್ ಅವರ ಕಾಲ್ಶೀಟ್ ಪಡೆಯಲು ನಿರ್ಮಾಪಕ, ನಿರ್ದೇಶಕ ಕೋನ ವೆಂಕಟ್ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.
2010ರಲ್ಲಿ ರಿಲೀಸ್ ಆದ ‘ಅದುರ್ಸ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ವಿವಿ ವಿನಾಯಕ್ ಅವರು ನಿರ್ದೇಶನ ಮಾಡಿದ್ದರು. ಕೋನ ವೆಂಕಟ್ ಅವರು ಕಥೆ ಬರೆದಿದ್ದರು. ನಯನತಾರಾ, ಶೀಲಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಗೆಲುವು ಕಂಡಿತ್ತು. ಜೂನಿಯರ್ ಎನ್ಟಿಆರ್ ಅವರು ದ್ವಿಪಾತ್ರದಲ್ಲಿ ಮಿಂಚಿದ್ದರು. ಈ ಚಿತ್ರಕ್ಕೆ ಸೀಕ್ವೆಲ್ ಮಾಡುವ ಪ್ರಸ್ತಾಪ ಬಂದಿದೆ.
ಒಳ್ಳೆಯ ಕಥೆ ಸಿಕ್ಕರೆ ಜೂನಿಯರ್ ಎನ್ಟಿಆರ್ ಅವರು ‘ಅದುರ್ಸ್ 2’ ಮಾಡುತ್ತಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿತ್ತು. ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದ್ದ ‘ಅದುರ್ಸ್’ ಚಿತ್ರದ ಸೀಕ್ವೆಲ್ ಬಗ್ಗೆ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗ ಕೋನ ವೆಂಕಟ್ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ‘ಪ್ರಶಾಂತ್ ನೀಲ್ ಒತ್ತಾಯಕ್ಕೆ ನಾನು ಆ ಸಿನಿಮಾ ಮಾಡಿದೆ’; ಒಪ್ಪಿಕೊಂಡ ಪೃಥ್ವಿರಾಜ್
ಕೋನ ವೆಂಕಟ್ ಅವರು ‘ಗೀತಾಂಜಲಿ ಮಲ್ಲಿ ವಚ್ಚಿಂದಿ’ ಮೂಲಕ ನಿರ್ಮಾಪಕ ಮತ್ತು ಕಥೆಗಾರನಾಗಿ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾ ಪ್ರಚಾರದಲ್ಲಿ ಅವರು ಭಾಗಿ ಆಗಿದ್ದಾರೆ. ಈ ವೇಳೆ ಅವರಿಗೆ ‘ಅದುರ್ಸ್ 2’ ಬಗ್ಗೆ ಪ್ರಶ್ನೆ ಎದುರಾಗಿದೆ. ‘ಅದುರ್ಸ್ ಸಿನಿಮಾಗೆ ಸೀಕ್ವೆಲ್ ಬರಲಿದೆ. ಆ ಸಿನಿಮಾ ಮಾಡಲು ಜೂನಿಯರ್ ಎನ್ಟಿಆರ್ ಅವರನ್ನು ಒಪ್ಪಿಸುತ್ತೇನೆ. ಒಪ್ಪದಿದ್ದರೆ ಮನೆ ಮುಂದೆ ಟೆಂಟ್ ಹಾಕಿ ಉಪವಾಸ ಸತ್ಯಾಗ್ರಹ ಮಾಡುತ್ತೇನೆ’ ಎಂದಿದ್ದಾರೆ ಅವರು. ಈ ವಿಚಾರ ಅಚ್ಚರಿ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ