‘ಕಲ್ಕಿ 2898 ಎಡಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ. ಈಗಾಗಲೇ ಸಿನಿಮಾದ ಗಳಿಕೆ 1200 ಕೋಟಿ ರೂಪಾಯಿ ಸಮೀಪಿಸಿದೆ. ಈಗ ಸಿನಿಮಾ ತಂಡದ ಕಲೆಕ್ಷನ್ ಹೆಚ್ಚಿಸಲು ದೊಡ್ಡ ಆಫರ್ ಘೋಷಣೆ ಮಾಡಿದೆ. ಈ ಚಿತ್ರದ ಟಿಕೆಟ್ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಈ ವಿಚಾರ ಪ್ರಭಾಸ್ ಫ್ಯಾನ್ಸ್ಗೆ ಖುಷಿ ನೀಡಿದೆ. ದುಬಾರಿ ಟಿಕೆಟ್ ಎನ್ನುವ ಕಾರಣಕ್ಕೆ ಥಿಯೇಟರ್ಗೆ ಹೋಗದೆ ಇದ್ದವರು, ‘ಕಲ್ಕಿ 2898 ಎಡಿ’ ಸಿನಿಮಾ ವೀಕ್ಷಣೆಗೆ ಈಗ ತೆರಳಬಹುದು.
‘ಕಲ್ಕಿ 2898 ಎಡಿ’ ಟಿಕೆಟ್ ದರವನ್ನು 100 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಈ ಆಫರ್ ಆಗಸ್ಟ್ 2ರಿಂದ 9ರವರೆಗೆ ಇರಲಿದೆ. 100 ರೂಪಾಯಿ ಟಿಕೆಟ್ ದರದ ಜೊತೆಗೆ ಟ್ಯಾಕ್ಸ್ ಹಾಗೂ ಷರತ್ತುಗಳು ಅನ್ವಯ ಆಗುತ್ತವೆ ಎಂದು ತಂಡ ಹೇಳಿಕೊಂಡಿದೆ.
ಈಗಾಗಲೇ ಸಿನಿಮಾ ರಿಲೀಸ್ ಆಗಿ ಒಂದು ತಿಂಗಳ ಮೇಲಾಗಿದೆ. ‘ಕಲ್ಕಿ 2898 ಎಡಿ’ ರಿಲೀಸ್ ಆದ ಬಳಿಕ ಹಲವು ಸಿನಿಮಾಗಳು ತೆರೆಗೆ ಅಪ್ಪಳಿಸಿವೆ. ಈ ಎಲ್ಲಾ ಕಾರಣದಿಂದ ಸಿನಿಮಾ ವೀಕ್ಷಣೆಗೆ ತೆರಳುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಇದರ ಜೊತೆಗೆ ಶೋಗಳ ಸಂಖ್ಯೆ ಕೂಡ ಕಡಿಮೆ ಇರುತ್ತದೆ. ಆದರೆ, 100 ರೂಪಾಯಿ ಟಿಕೆಟ್ ದರ ಫಿಕ್ಸ್ ಮಾಡಿದರೆ ಜನರು ಹೆಚ್ಚೆಚ್ಚು ಥಿಯೇಟರ್ನತ್ತ ಮುಖ ಮಾಡುತ್ತಾರೆ ಅನ್ನೋದು ಇವರ ಆಲೋಚನೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಲ್ಕಿ ಬುಜ್ಜಿ ಮೇನಿಯಾ; ಏಳು ಕೋಟಿ ವೆಚ್ಚದ ಬುಜ್ಜಿ ವಿಶೇಷತೆಗಳೇನು?
ಆದರೆ, ಈ ಆಫರ್ ಸಂಪೂರ್ಣವಾಗಿ ಅನ್ವಯ ಆಗುವ ರೀತಿ ಕಾಣುತ್ತಿಲ್ಲ. ವೀಕೆಂಡ್ ಎನ್ನುವ ಕಾರಣಕ್ಕೋ ಏನೋ ಬೆಂಗಳೂರಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾದ ಟಿಕೆಟ್ ದರಗಳು 150-200 ರೂಪಾಯಿಗೆ ಮಾರಾಟ ಆಗುತ್ತಿವೆ. ಹೀಗಿರುವಾಗ ಆಫರ್ ಎಂದು ಹೇಳೋದು ಏಕೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ.
‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮೊದಲಾದವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.