‘ಕಣ್ಣಪ್ಪ’ ಶೂಟಿಂಗ್​ ಸೆಟ್​ಗೆ ಬಂದ ಪ್ರಭಾಸ್​; ಪೋಸ್ಟರ್​ ಮೂಲಕ ಗುಡ್​ ನ್ಯೂಸ್​

ಪ್ರೇಕ್ಷಕರಿಗೆ ‘ಕಣ್ಣಪ್ಪ’ ಸಿನಿಮಾ ಬಗ್ಗೆ ಇರುವ ಕ್ರೇಜ್​ ಜಾಸ್ತಿ ಆಗಿದೆ. ಅದಕ್ಕೆ ಕಾರಣ ಆಗಿರುವುದು ಪ್ರಭಾಸ್​ ಅವರ ಎಂಟ್ರಿ. ಹೌದು, ಈ ಬಹುನಿರೀಕ್ಷಿತ ಸಿನಿಮಾದ ಚಿತ್ರೀಕರಣದಲ್ಲಿ ಪ್ರಭಾಸ್​ ಈಗ ಭಾಗಿ ಆಗಿದ್ದಾರೆ. ಅವರ ಆಗಮನವನ್ನು ಖಚಿತಪಡಿಸಲು ಚಿತ್ರತಂಡದವರು ಹೊಸ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ. ಪ್ರಭಾಸ್​ ಅವರ ಅಭಿಮಾನಿಗಳ ವಲಯದಲ್ಲಿ ಈ ಪೋಸ್ಟರ್​ ವೈರಲ್​ ಆಗಿದೆ.

‘ಕಣ್ಣಪ್ಪ’ ಶೂಟಿಂಗ್​ ಸೆಟ್​ಗೆ ಬಂದ ಪ್ರಭಾಸ್​; ಪೋಸ್ಟರ್​ ಮೂಲಕ ಗುಡ್​ ನ್ಯೂಸ್​
ಪ್ರಭಾಸ್​

Updated on: May 09, 2024 | 7:52 PM

ನಟ ಪ್ರಭಾಸ್​ (Prabhas) ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಬಿಡುವಿಲ್ಲದೇ ಅವರು ಕೆಲಸ ಮಾಡುತ್ತಿದ್ದಾರೆ. ‘ಕಲ್ಕಿ 2898 ಎಡಿ’, ‘ದಿ ರಾಜಾ ಸಾಬ್​’, ‘ಸಲಾರ್ 2’ ಮುಂತಾದ ಸಿನಿಮಾಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಈ ನಡುವೆ ಇನ್ನೊಂದು ಗುಡ್​ ನ್ಯೂಸ್​ ಸಿಕ್ಕಿದೆ. ಪ್ರಭಾಸ್​ ಅವರು ‘ಕಣ್ಣಪ್ಪ’ (Kannappa) ಚಿತ್ರತಂಡಕ್ಕೆ ಅಧಿಕೃತವಾಗಿ ಎಂಟ್ರಿ ನೀಡಿದ್ದಾರೆ. ಈಗಾಗಲೇ ಪಾತ್ರವರ್ಗದ ಕಾರಣದಿಂದ ಸಾಕಷ್ಟು ಸುದ್ದಿಯಲ್ಲಿರುವ ಪ್ಯಾನ್‌ ಇಂಡಿಯಾ ಸಿನಿಮಾ ಇದು. ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿರುವ ‘ಕಣ್ಣಪ್ಪ’ ಸಿನಿಮಾದ ಶೂಟಿಂಗ್​ನಲ್ಲಿ ಈಗ ಪ್ರಭಾಸ್ ಅವರು ಭಾಗಿ ಆಗಿದ್ದಾರೆ.‌

ವಿಷ್ಣು ಮಂಚು ಅವರು ‘ಕಣ್ಣಪ್ಪ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರು ಜೊತೆ ಅಕ್ಷಯ್‌ ಕುಮಾರ್‌, ಮೋಹನ್‌ ಲಾಲ್‌, ಮೋಹನ್‌ ಬಾಬು, ಶರತ್‌ಕುಮಾರ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿ ಇದ್ದಾರೆ. ಈಗ ಪ್ಯಾನ್​ ಇಂಡಿಯಾ ಸ್ಟಾರ್‌ ನಟ ಪ್ರಭಾಸ್‌ ಅವರು ಕೂಡ ಸೇರ್ಪಡೆ ಆಗಿರುವುದರಿಂದ ಚಿತ್ರತಂಡದ ಮೆರುಗು ಹೆಚ್ಚಾಗಿದೆ. ಸಿನಿಪ್ರಿಯರು ಈ ಚಿತ್ರದ ಮೇಲೆ ಇನ್ನಷ್ಟು ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ.

‘ಕಣ್ಣಪ್ಪ ಸಿನಿಮಾಗೆ ಮುಖೇಷ್‌ ಕುಮಾರ್‌ ಸಿಂಗ್‌ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ತೆಲುಗಿನಲ್ಲಿ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ತಯಾರಾಗುತ್ತಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಅದ್ದೂರಿಯಾಗಿ ನಿರ್ಮಾಣ ಆಗುತ್ತಿದೆ. ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ಶಿವನ ಪರಮ ಭಕ್ತ ಕಣ್ಣಪ್ಪನ ಪಾತ್ರದಲ್ಲಿ ವಿಷ್ಣು ಮಂಚು ಹೇಗೆ ಕಾಣಿಸಲಿದ್ದಾರೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ: 35 ಲಕ್ಷ ರೂಪಾಯಿ ದೇಣಿಗೆ ನೀಡಿದ ನಟ ಪ್ರಭಾಸ್​; ಯಾರಿಗೆ ಸಿಕ್ಕಿದೆ ಈ ಹಣ?

ವಿಶೇಷ ಏನೆಂದರೆ, ಕಳೆದ 7 ವರ್ಷಗಳಿಂದ ಈ ಸಿನಿಮಾದ ಸಲುವಾಗಿ ವಿಷ್ಣು ಮಂಚು ಅವರು ಶ್ರಮಿಸುತ್ತಿದ್ದಾರೆ. ಅವರ ಪಾಲಿಗೆ ಇದು ಮಹತ್ವಾಕಾಂಕ್ಷಿ ಪ್ರಾಜೆಕ್ಟ್​ ಆಗಿದೆ. ಬಜೆಟ್​ನಲ್ಲಿ ಮಾತ್ರ ಅಲ್ಲದೇ ತಾರಾಗಣದ ವಿಚಾರದಲ್ಲೂ ಈ ಸಿನಿಮಾ ಅದ್ದೂರಿಯಾಗಿ ಮೂಡಿಬರುತ್ತಿದೆ. ಎಲ್ಲ ಭಾಷೆಯ ಹೆಸರಾಂತ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಲಿವುಡ್‌ನಿಂದ ಬಂದ ಶೆಲ್ಡೋನ್‌ ಚಾವ್‌ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕೇಚ ಖಂಫಕದೀ ಅವರು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್​ ಅವರು ಶೂಟಿಂಗ್​ ಶುರುಮಾಡಿದ್ದಾರೆ ಎಂಬುದನ್ನು ತಿಳಿಸಲು ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:50 pm, Thu, 9 May 24

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us