
ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ (Salaar Movie) ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ 650 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಖುಷಿಯಲ್ಲಿರುವ ಅಭಿಮಾನಿಗಳಿಗೆ ಮತ್ತೊಂದು ಗುಡ್ನ್ಯೂಸ್ ಸಿಕ್ಕಿದೆ. ‘ಕಲ್ಕಿ 2898 ಎಡಿ’ ಚಿತ್ರದ ರಿಲೀಸ್ ದಿನಾಂಕವನ್ನು ತಂಡ ಘೋಷಿಸಿದೆ. ಈ ಚಿತ್ರ ಮುಂಬರುವ ಮೇ 9ರಂದು ಬಿಡುಗಡೆ ಆಗಲಿದೆ. ಇದನ್ನು ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ಚಿತ್ರದಿಂದ ಪ್ರಭಾಸ್ ಮತ್ತೊಂದು ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ.
‘ಕಲ್ಕಿ 2898 ಎಡಿ’ ಚಿತ್ರಕ್ಕೆ ನಾಗ್ ಅಶ್ವಿನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಟೀಸರ್ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಪ್ರಭಾಸ್ ಅವರು ಕಲ್ಕಿ ಅವತಾರ ತಾಳಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಇಂದು (ಜನವರಿ 12) ಸಿನಿಮಾದ ರಿಲೀಸ್ ದಿನಾಂಕ ತಿಳಿಸಲಾಗಿದೆ. ಇನ್ನು ನಾಲ್ಕು ತಿಂಗಳಲ್ಲಿ ಚಿತ್ರ ಪ್ರೇಕ್ಷಕರ ಎದುರು ಬರಲಿದೆ. ಇದಕ್ಕೆ ಈಗಲೇ ಪ್ರಚಾರ ಕಾರ್ಯ ಆರಂಭಿಸಲಾಗಿದೆ.
ವಾರಣಾಸಿ, ಮುಂಬೈ, ದೆಹಲಿ, ಚಂಡೀಗಢ, ಚೆನ್ನೈ, ಮದುರೈ, ಹೈದರಾಬಾದ್, ವಿಶಾಖಪಟ್ಟಣ, ಗುಂಟೂರು, ಕಾಶ್ಮೀರ ಹಾಗೂ ವಿಜಯವಾಡದಲ್ಲಿ ರೈಡರ್ಸ್ ರಿಲೀಸ್ ಡೇಟ್ನ ಅನೌನ್ಸ್ ಮಾಡಿದ್ದಾರೆ. ಭಿನ್ನ ರೀತಿಯಲ್ಲಿ ಈ ಕಾರ್ಯಕ್ರಮ ನಡೆದಿದೆ. ‘ವೈಜಯಂತಿ ಮೂವೀಸ್’ ಮೂಲಕ ಸಿ. ಅಶ್ವಿನಿ ದತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ನಿರ್ಮಾಣ ಸಂಸ್ಥೆಗೆ 50 ವರ್ಷಗಳ ಸಂಭ್ರಮ. ಮೇ 9ರಂದು ವೈಜಯಂತಿ ಮೂವೀಸ್ ಆರಂಭ ಆಗಿ 5 ದಶಕ ತುಂಬಲಿದೆ. ಹೀಗಾಗಿ, ಈ ದಿನಾಂಕ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮೊದಲು ವೈಜಯಂತಿ ಮೂವೀಸ್ ನಿರ್ಮಾಣ ಮಾಡಿದ ‘ಜಗದೇಕ ವೀರುಡು ಅತಿಲೋಕ ಸುಂದರಿ’, ‘ಮಹಾನಟಿ’ ಮೊದಲಾದ ಸಿನಿಮಾಗಳು ಮೇ 9ರಂದು ರಿಲೀಸ್ ಆಗಿದ್ದವು. ಈಗ ಈ ಸಾಲಿ ‘ಕಲ್ಕಿ 2898’ ಸೇರ್ಪಡೆ ಆಗುತ್ತಿದೆ.
ಇದನ್ನೂ ಓದಿ: ‘ಸಲಾರ್’ ಗೆಲುವಿನ ಬೆನ್ನಲ್ಲೇ ಪ್ರಭಾಸ್ ಅಭಿಮಾನಿಗಳಿಗೆ ‘ಕಲ್ಕಿ 2898 ಎಡಿ’ ಚಿತ್ರದಿಂದ ಸಿಹಿ ಸುದ್ದಿ
‘ಕಲ್ಕಿ 2898 ಎಡಿ’ ಚಿತ್ರದಲ್ಲಿ ದೊಡ್ಡ ತಾರಾ ಬಳಗ ಇದೆ. ಅಮಿತಾಭ್ ಬಚ್ಚನ್, ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರದ ಮೂಲಕ ಪ್ರಭಾಸ್ ಮತ್ತೊಂದು ಗೆಲುವು ಕಾಣಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಸಿನಿಮಾದ ಕಥೆ ಬಗ್ಗೆ ಕುತೂಹಲ ಮೂಡಿದೆ. ಮೈಥಾಲಜಿ-ಸೈನ್ಸ್ ಫಿಕ್ಷನ್ ಶೈಲಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಕಮಲ್ ಹಾಸನ್ ಅವರು ಇತ್ತೀಚೆಗೆ ತಂಡ ಸೇರಿದ್ದಾರೆ. ಈ ಚಿತ್ರದ ಮೂಲಕ ದೀಪಿಕಾ ಮತ್ತೆ ದಕ್ಷಿಣದತ್ತ ಮುಖ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:07 pm, Fri, 12 January 24