ಜೂ ಎನ್ಟಿಆರ್ (Jr NTR) ತೆಲುಗು ಚಿತ್ರರಂಗದ ಸ್ಟಾರ್ ನಟ, ಅವರ ಹಿರಿಯ ಸಹೋದರ ನಂದಮೂರಿ ಕಲ್ಯಾಣ್ರಾಮ್ ಸಹ ತೆಲುಗಿನ ಜನಪ್ರಿಯ ನಟ, ಜೂ ಎನ್ಟಿಆರ್ಗಿಂತಲೂ ಮೊದಲೇ ಬಾಲನಟನಾಗಿ ಸಿನಿಮಾಗಳಲ್ಲಿ ನಟಿಸಿದ್ದ ಕಲ್ಯಾಣ್ ರಾಮ್, ಜೂ ಎನ್ಟಿಆರ್ ನಾಯಕನಾಗಿ ಎಂಟ್ರಿ ಕೊಟ್ಟ ಎರಡು ವರ್ಷಗಳ ಬಳಿಕ ತಾವೂ ಸಹ ನಾಯಕ ನಟನಾಗಿ ಎಂಟ್ರಿ ಕೊಟ್ಟರು. ಆದರೆ ಜೂ ಎನ್ಟಿಆರ್ಗೆ ದೊರಕಿದ ಭಾರಿ ಯಶಸ್ಸು ಕಲ್ಯಾಣ್ಗೆ ದೊರಕಲಿಲ್ಲ, ಹಾಗೆಂದು ವಿಫಲ ನಟನೂ ಅಲ್ಲ. ಸಾಕಷ್ಟು ಒಳ್ಳೆಯ ಸಿನಿಮಾಗಳನ್ನು ಕಲ್ಯಾಣ್ ರಾಮ್ ನೀಡಿದ್ದಾರೆ. ಇದೀಗ ಅವರ ನಟನೆಯ ‘ಡೆವಿಲ್’ ಹೆಸರಿನ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆದರೆ ವಿವಾದವೊಂದು ಸಿನಿಮಾಕ್ಕೆ ಬೆನ್ನು ಬಿದ್ದಿದೆ.
ಸ್ವಾತಂತ್ರ್ಯ ಪೂರ್ವದ ಕತೆಯುಳ್ಳ ಈ ಸಿನಿಮಾ 2021ರಲ್ಲಿ ಸೆಟ್ಟೇರಿದ್ದು ಎರಡು ವರ್ಷಗಳ ನಂತರ ಈಗ ಬಿಡುಗಡೆ ಹಂತ ತಲುಪಿದೆ. ಸಿನಿಮಾ ಬಿಡುಗಡೆಗೆ ಬರುವ ಹಂತದಲ್ಲಿ ನಿರ್ದೇಶಕನ ಹೆಸರೇ ಬದಲಾಗಿದೆ. ಸಿನಿಮಾಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕ ಅಭಿಷೇಕ್ ನಮಾ, ‘ಡೆವಿಲ್’ ಸಿನಿಮಾದ ನಿರ್ದೇಶಕ ತಾವೇ ಎಂದು ಹೆಸರು ಹಾಕಿಕೊಂಡಿದ್ದಾರೆ. ಸಿನಿಮಾ ಆರಂಭವಾದಾಗ ನವೀನ್ ಮೆದರಮ್ ನಿರ್ದೇಶಕರಾಗಿದ್ದರು.
ತಮ್ಮ ಹೆಸರನ್ನು ತೆಗೆದು ಹಾಕಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನವೀನ್ ಮೆದರಮ್, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡಿದ್ದಾರೆ. ‘‘ನನ್ನ ಜೀವನದ ಮೂರು ವರ್ಷಗಳನ್ನು ನಾನು ‘ಡೆವಿಲ್’ ಸಿನಿಮಾಕ್ಕಾಗಿ ಮೀಸಲಿಟ್ಟಿದ್ದೇನೆ. ಸಿನಿಮಾವನ್ನು 105 ದಿನಗಳ ಕಾಲ ನಾನು ಚಿತ್ರೀಕರಣ ಮಾಡಿದ್ದೇನೆ, ಕೇವಲ ಪ್ಯಾಚ್ ವರ್ಕ್ ಶೂಟ್ನಲ್ಲಿ ಮಾತ್ರವೇ ನಾನು ಭಾಗಿ ಆಗಿಲ್ಲ. ‘ಡೆವಿಲ್’ ನನ್ನ ಪಾಲಿಗೆ ಸಿನಿಮಾ ಮಾತ್ರವಲ್ಲ, ಅದು ನನ್ನ ಮಗು, ಯಾರು ಏನಾದರೂ ಹೇಳಿಕೊಳ್ಳಲಿ, ‘ಡೆವಿಲ್’ ಸಿನಿಮಾದ ನಿರ್ದೇಶಕ ನಾನೇ ನವೀನ್ ಮೆದರಮ್’’ ಎಂದಿದ್ದಾರೆ.
ಇದನ್ನೂ ಓದಿ:ಜೂ ಎನ್ಟಿಆರ್ ಜೊತೆಗೆ ಸಿನಿಮಾ ಗುಟ್ಟು ಬಿಟ್ಟುಕೊಟ್ಟ ಪ್ರಶಾಂತ್ ನೀಲ್
‘‘ಕೆಲವರು ಹೇಳುತ್ತಿರುವಂತೆ ಸಿನಿಮಾ ಚಿತ್ರೀಕರಣ ಮಾಡುವಾಗ ನಾನು ಯಾವುದೇ ನಿಯಮ ಉಲ್ಲಂಘಿಸಿಲ್ಲ, ಮೋಸ, ಅನ್ಯಾಯಗಳನ್ನು ಮಾಡಿಲ್ಲ. ಈಗ ಸೃಷ್ಟಿಯಾಗಿರುವ ವಿವಾದಕ್ಕೆ ವೈಯಕ್ತಿಕ ಅಹಂನಿ ಅಷ್ಟೇ ಕಾರಣ. ಕೆಲವು ವರದಿಗಳಲ್ಲಿ ಹೇಳುತ್ತಿರುವಂತೆ ನಾನು ಯಾವುದೇ ವ್ಯಕ್ತಿ ಅಥವಾ ಸಿನಿಮಾದ ವಿರುದ್ಧ ಪ್ರಕರಣ ದಾಖಲಿಸಿಲ್ಲ’’ ಎಂದಿದ್ದಾರೆ.
‘‘ನನ್ನದೇ ಸಿನಿಮಾದಿಂದ ನನ್ನ ಹೆಸರನ್ನು ಕೈಬಿಟ್ಟಿರುವ ಬಗ್ಗೆ ನನಗೆ ತೀವ್ರ ಬೇಸರ ಇದೆ. ಆದರೆ ಈ ಸಿನಿಮಾ ನನಗೆ ನೀಡಿರುವ ಅಮೂಲ್ಯ ಅನುಭವ ನನ್ನಲ್ಲಿ ಉಳಿಯಲಿದೆ. ನನ್ನ ವೃತ್ತಿಯಲ್ಲಿ ನಾನು ಸದಾ ಗಮನ ಕೇಂದ್ರೀಕರಿಸಿ ನಡೆಯುವ ವ್ಯಕ್ತಿ, ಯಾವುದೇ ಅಡೆ-ತಡೆಗಳಿಗೆ ಬಗ್ಗುವವನಲ್ಲ, ಹಾಗಾಗಿ ಮತ್ತೆ ನಾನು ಗಟ್ಟಿಯಾಗಿ ಕಮ್ಬ್ಯಾಕ್ ಮಾಡುವ ವಿಶ್ವಾಸ ನನಗೆ ಇದೆ’’ ಎಂದಿದ್ದಾರೆ.
ಸಿನಿಮಾದ ನಾಯಕ ಕಲ್ಯಾಣ್ ರಾಮ್ ಬಗ್ಗೆಯೂ ಬರೆದಿರುವ ನವೀನ್, ‘‘ಕಲ್ಯಾಣ್ ರಾಮ್ ಅವರು ಈ ಸಿನಿಮಾಕ್ಕಾಗಿ ತಮ್ಮ 100% ಶ್ರಮ ಹಾಕಿ ಕೆಲಸ ಮಾಡಿದ್ದಾರೆ. ಈ ಸಿನಿಮಾ ದೊಡ್ಡ ಹಿಟ್ ಆಗಲಿ ಎಂದು ನಾನು ಹಾರೈಸುತ್ತೇನೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿ’’ ಎಂದು ಮನವಿ ಮಾಡಿದ್ದಾರೆ. ‘ಡೆವಿಲ್’ ಸಿನಿಮಾ ಡಿಸೆಂಬರ್ 29ಕ್ಕೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ