ಭಾಷೆಯ ಬಗ್ಗೆ ಮಾತನಾಡುವ ಅರ್ಹತೆ ನನಗಿಲ್ಲ: ವಿವಾದದ ಬಗ್ಗೆ ಕಮಲ್ ಹಾಸನ್ ಸ್ಪಷ್ಟನೆ

Kamal Haasan: ನಟ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಆಡಿದ್ದ ಮಾತು ವಿವಾದವಾಗಿದೆ. ತಮಿಳಿನಿಂದ ಕನ್ನಡ ಜನಿಸಿದೆ ಎಂದು ಕಮಲ್ ಹೇಳಿದ್ದರು. ಕಮಲ್ ಹೇಳಿಕೆಗೆ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದೀಗ ‘ಥಗ್ ಲೈಫ್’ ಸಿನಿಮಾದ ಪ್ರಚಾರಕ್ಕಾಗಿ ಕೇರಳಕ್ಕೆ ಹೋಗಿದ್ದ ಕಮಲ್ ಹಾಸನ್, ಅಲ್ಲಿ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಭಾಷೆಯ ಬಗ್ಗೆ ಮಾತನಾಡುವ ಅರ್ಹತೆ ನನಗಿಲ್ಲ: ವಿವಾದದ ಬಗ್ಗೆ ಕಮಲ್ ಹಾಸನ್ ಸ್ಪಷ್ಟನೆ
Kamal Haasan

Updated on: May 28, 2025 | 6:52 PM

ನಟ ಕಮಲ್ ಹಾಸನ್ (Kamal Haasan) ಇತ್ತೀಚೆಗಷ್ಟೆ ನಡೆದ ಅವರ ನಟನೆಯ ‘ಥಗ್ ಲೈಫ್’ ಸಿನಿಮಾದ ಆಡಿಯೋ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಮಿಳಿನಿಂದ ಕನ್ನಡ ಜನಿಸಿದೆ ಎಂದಿದ್ದರು. ಕಮಲ್ ಅವರ ಈ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹಲವಾರು ಕನ್ನಡಪರ ಸಂಘಟನೆಗಳು ಕಮಲ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿವೆ. ಕಮಲ್ ಅವರ ‘ಥಗ್ ಲೈಫ್’ ಸಿನಿಮಾ ನಿಷೇಧಕ್ಕೂ ಒತ್ತಾಯ ಕೇಳಿ ಬಂದಿದೆ. ಇದೆಲ್ಲದರ ನಡುವೆ ಕಮಲ್ ಹಾಸನ್ ತಮ್ಮ ಹೇಳಿಕೆಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಕೇರಳದಲ್ಲಿ ‘ಥಗ್ ಲೈಫ್’ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಕಮಲ್ ಹಾಸನ್ ಅವರಿಗೆ ಕನ್ನಡದ ಬಗ್ಗೆ ನೀಡಿದ್ದ ಹೇಳಿಕೆಯ ಬಗ್ಗೆ ಪ್ರಶ್ನೆ ಎದುರಾಗಿದೆ. ಆಗ ಮಾತನಾಡಿದ ಕಮಲ್ ಹಾಸನ್, ಕನ್ನಡಿಗರ ಪ್ರೀತಿಯನ್ನು, ತಮಿಳುನಾಡಿನ ವಿಶೇಷತೆಯನ್ನು ಕೊಂಡಾಡಿದರು. ‘ನನ್ನ ಹೇಳಿಕೆಯ ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ. ನಾನು ಸಾಕಷ್ಟು ಪ್ರೀತಿಯಿಂದಲೇ ಆ ಮಾತನ್ನು ಹೇಳಿದ್ದೆ. ಜೊತೆಗೆ ಸಾಕಷ್ಟು ಇತಿಹಾಸಜ್ಞರು ಭಾಷೆಯ ಬಗ್ಗೆ ನನಗೆ ಕಲಿಸಿಕೊಟ್ಟಿದ್ದಾರೆ. ಅದರ ಹೊರತಾಗಿ ಇನ್ಯಾವುದೇ ಉದ್ದೇಶದಿಂದ ನಾನು ಆ ಮಾತನ್ನು ಹೇಳಿಲ್ಲ’ ಎಂದಿದ್ದಾರೆ.

ಮುಂದುವರೆದು, ‘ತಮಿಳುನಾಡು ಬಹಳ ವಿಶೇಷವಾದ ರಾಜ್ಯ. ಇಲ್ಲಿ ಒಬ್ಬ ಮೆನನ್ ಸಿಎಂ ಆಗಿದ್ದಾರೆ. ಒಬ್ಬ ರೆಡ್ಡಿ ಸಿಎಂ ಆಗಿದ್ದಾರೆ. ಕರ್ನಾಟಕದ ಮಂಡ್ಯದ ಕನ್ನಡಿಗ ಐಯ್ಯಂಗಾರ್ ಒಬ್ಬರು ಸಿಎಂ ಆಗಿದ್ದಾರೆ. ಒಮ್ಮೆ ಚೆನ್ನೈನನಲ್ಲಿ ನನಗೆ ಅದೇ ಕರ್ನಾಟಕದ ಸಿಎಂ ಇಂದ ಸಮಸ್ಯೆ ಆಗಿದ್ದಾಗ ಕನ್ನಡಿಗರೇ ನನಗೆ ಆಶ್ರಯ ಕೊಡುವ ಭರವಸೆ ಕೊಟ್ಟಿದ್ದರು. ನೀವು ಕರ್ನಾಟಕಕ್ಕೆ ಬನ್ನಿ ಇಲ್ಲಿ ನಿಮಗೆ ಮನೆ ಮಾಡಿಕೊಡುತ್ತೀವಿ ನೀವು ಎಲ್ಲಿಗೂ ಹೋಗಬೇಡಿ ಎಂದಿದ್ದರು’ ಎಂದು ಕಮಲ್ ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಕರ್ನಾಟಕದಲ್ಲಿ ಬ್ಯಾನ್ ಆಗಲಿದೆಯೇ ಕಮಲ್ ಹಾಸನ್​ರ ‘ಥಗ್ ಲೈಫ್’ ಸಿನಿಮಾ?

‘ಕನ್ನಡಿಗರೇ ಆಗ ನನಗೆ ಬೆಂಬಲ ನೀಡಿದ್ದರು. ಹಾಗಾಗಿ ಆ ಜನ ನನ್ನನ್ನು, ನನ್ನ ಸಿನಿಮಾವನ್ನು ಕ್ಷೇಮವಾಗಿ ನೋಡಿಕೊಳ್ಳುತ್ತಾರೆ. ನನ್ನನ್ನೂ ಸೇರಿದಂತೆ ರಾಜಕಾರಣಿಗಳಿಗೆ ಭಾಷೆಯ ಬಗ್ಗೆ ಮಾತನಾಡುವ ಅರ್ಹತೆ, ಪಾಂಡಿತ್ಯ ಇಲ್ಲ. ಹಾಗಾಗಿ ಈ ಭಾಷೆಯ ಆಳವಾದ ಚರ್ಚೆಯನ್ನು ಇತಿಹಾಸಜ್ಞರಿಗೆ, ಭಾಷಾ ಪಂಡಿತರಿಗೆ, ಪುರಾತತ್ತ್ವಜ್ಞರಿಗೆ ಬಿಟ್ಟು ಬಿಡೋಣ’ ಎಂದಿದ್ದಾರೆ.

‘ಶಿವಣ್ಣ ಅವರ ತಂದೆ ರಾಜ್​ಕುಮಾರ್ ನನಗೆ ತಂದೆ, ಸಹೋದರ ಸಮಾನರು. ಪ್ರೀತಿ ಪೂರ್ವಕವಾಗಿ ನಾನು ನೀಡಿದ ಹೇಳಿಕೆಯನ್ನು ಟೀಕೆ ಮಾಡಲಾಗಿದೆ. ಅವರ ಕೋನದಿಂದ ನೋಡಿದರೆ ಅವರು ಹೇಳಿದ್ದು ಸರಿ ಎನಿಸಬಹುದು, ನನ್ನ ದೃಷ್ಟಿಕೋನದಿಂದ ನೋಡಿದರೆ ನಾನು ಹೇಳಿದ್ದು ಸರಿ ಎನಿಸಬಹುದು. ಆದರೆ ಇದಕ್ಕೆ ಮೂರನೇ ಕೋನವೊಂದಿದೆ. ಇತಿಹಾಸತಜ್ಞರು, ಭಾಷಾ ಪಂಡಿತರು ಎರಡರಲ್ಲಿ ಯಾವುದು ಸರಿ ಎಂದು ಹೇಳಬೇಕು. ಈಗ ಎಲ್ಲರೂ ನಿರ್ಣಯ ಮಾಡಬೇಕಿದೆ, ನಾವು ಯಾರ ಜೊತೆಗೆ ಇರಬೇಕು, ಕುಟುಂಬದ ಜೊತೆಗೋ ಅಥವಾ ಉತ್ತರದಿಂದ ಬಂದ ಭಾಷೆಯ ಜೊತೆಗಿರಬೇಕೊ ಎಂದು. ಇದು ಪ್ರಜಾಪ್ರಭುತ್ವ ರಾಷ್ಟ್ರ. ಈಗ ನಾನು ನೀಡಿರುವುದು ಸ್ಪಷ್ಟನೆ, ಕ್ಷಮೆ ಅಲ್ಲ, ಏಕೆಂದರೆ ಪ್ರೀತಿ ಎಂದಿಗೂ ಕ್ಷಮೆ ಕೇಳುವುದಿಲ್ಲ’ ಎಂದಿದ್ದಾರೆ ಕಮಲ್ ಹಾಸನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Wed, 28 May 25