
ಅರ್ಧ ಶತಮಾನಕ್ಕೂ ಹೆಚ್ಚು ಸಮಯದಿಂದಲೂ ಕಮಲ್ ಹಾಸನ್ (Kamal Haasan) ಬೆಳ್ಳಿ ಪರದೆಯ ಮೇಲೆ ಮಿಂಚುತ್ತಾ ಬರುತ್ತಿದ್ದಾರೆ. ಕಮಲ್ ಹಾಸನ್ ಅತ್ಯದ್ಭುತ ನಟರಷ್ಟೆ ಅಲ್ಲ, ನಿರ್ದೇಶಕ, ನಿರ್ಮಾಪಕ, ಕತೆಗಾರ, ಗೀತ ಸಾಹಿತಿ, ಮೇಕಪ್ ಕಲಾವಿದ ಎಲ್ಲವೂ ಆಗಿದ್ದಾರೆ. ತೆಲುಗಿನ ನಟ ನಾನಿ ಒಮ್ಮೆ ಹೇಳಿದ್ದಂತೆ, ‘ಸಿನಿಮಾದ ಯಾವುದೇ ವಿಭಾಗದ ಬಗ್ಗೆ ಆ ವಿಭಾಗದ ಅತ್ಯುತ್ತಮ ವ್ಯಕ್ತಿಗೂ ಇರದಷ್ಟು ಜ್ಞಾನ ಕಮಲ್ ಹಾಸನ್ ಅವರಿಗಿದೆ’ ಎಂದಿದ್ದರು. ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದ, ಚಿಂತನೆಗೆ ಹಚ್ಚಿದ್ದ ಕಮಲ್ ಹಾಸನ್ ಇದೀಗ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ.
ತಮಿಳಿನ ನಟ ದಳಪತಿ ವಿಜಯ್ ಇತ್ತೀಚೆಗಷ್ಟೆ ತಮ್ಮ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆದರೆ ಅವರು ನಿವೃತ್ತಿ ಘೋಷಿಸಿದ್ದ ಉದ್ದೇಶ ಬೇರೆ. ಮತ್ತೊಂದೆಡೆ, ಕಮಲ್ ಹಾಸನ್ ಅವರ ಸಮಕಾಲೀನರಾದ ರಜನೀಕಾಂತ್ ನಿವೃತ್ತಿಯ ಬಗ್ಗೆ ಚಿಂತೆಯನ್ನೇ ಮಾಡದೆ ಸಿನಿಮಾಗಳ ಮೇಲೆ ಸಿನಿಮಾಗಳನ್ನು ಮಾಡುತ್ತಲೇ ಹೋಗುತ್ತಿದ್ದಾರೆ. ಆದರೆ ಕಮಲ್ ಹಾಸನ್ ಮಾತ್ರ ನಿವೃತ್ತಿಯ ಬಗ್ಗೆ ಮಾತನಾಡಿರುವುದು ಸಿನಿ ಪ್ರೇಮಿಗಳಿಗೆ ಆಶ್ಚರ್ಯ ಮೂಡಿಸಿದೆ.
ಇತ್ತೀಚೆಗಷ್ಟೆ ಕಮಲ್ ಹಾಸನ್ ಅವರು ಕಲಾ ಪ್ರದರ್ಶನವೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಕಾರ್ಯಕ್ರಮದ ನಿರೂಪಕರು ಕಮಲ್ ಅವರೊಟ್ಟಿಗೆ ಸಂವಾದ ಮಾಡುತ್ತಾ, ‘ಈಗಿನ ಹೊಸ ತಲೆಮಾರಿನ ಯುವಕರು ಬೇಗ ಹೊಸ ಮುಖಗಳೊಟ್ಟಿಗೆ ಸಂಪರ್ಕ ಸಾಧಿಸಿಕೊಳ್ಳುತ್ತಿದ್ದಾರೆ. ಹಳಬರನ್ನು ಮರೆಯುತ್ತಿದ್ದಾರೆ. ಹಾಗಾಗಿ ನೀವು ನಿವೃತ್ತರಾಗಲು ಇದು ಸರಿಯಾದ ಸಮಯ ಎನಿಸುತ್ತಿದ್ದಿಯೇ?’ ಎಂದು ನೇರ ಪ್ರಶ್ನೆ ಕೇಳಿದರು.
ಇದನ್ನೂ ಓದಿ:ಕಮಲ್ ಹಾಸನ್ ಹಳೆ ಸಿನಿಮಾ ಮರು ಬಿಡುಗಡೆಗೂ ವಿರೋಧ, ಪ್ರತಿಭಟನೆ
ಪ್ರಶ್ನೆಗೆ ಸಮಾಧಾನದಿಂದ ಉತ್ತರಿಸಿದ ಕಮಲ್ ಹಾಸನ್, ‘ಸಿನಿಮಾ ರಂಗಕ್ಕೆ ಹೊಸಬರು ಬರುತ್ತಲೇ ಇರಬೇಕು, ಆಗ ಮಾತ್ರವೇ ಹೊಸದು ಸೃಷ್ಟಿಯಾಗಲು ಸಾಧ್ಯ. ಆದರೆ ಹಳಬರು ನಿವೃತ್ತರಾಗಬೇಕು ಎಂಬುದನ್ನು ನಿಮ್ಮಂಥವರು ನೆನಪಿಸಬೇಕು ಅಥವಾ ನಿಮ್ಮಂಥವರ ಆಸೆ ಆಗಿರುತ್ತದೆ’ ಎಂದು ತಮಾಷೆ ಮಾಡಿದರು.
ಮುಂದುವರೆದು ಮಾತನಾಡಿ, ‘ಯಾರು ಸಹ ನನ್ನನ್ನು ನಿವೃತ್ತಿಯಾಗು ಎಂದು ಹೇಳಿಲ್ಲ. ಆದರೆ ನನಗೆ ನಾನೇ ಕೇಳಿಕೊಂಡಿದ್ದೇನೆ. ಅದರಲ್ಲೂ ಕೆಟ್ಟ ಸಿನಿಮಾ ಮಾಡಿದಾಗ ನನ್ನನ್ನು ನಾನು ಖಂಡಿತ ಈ ಬಗ್ಗೆ ಕೇಳಿಕೊಂಡಿದ್ದೇನೆ. ಆದರೆ ಹಾಗಾದಾಗೆಲ್ಲ ನನ್ನ ಹಿತೈಶಿಗಳು ಸ್ನೇಹಿತರು, ‘ಒಳ್ಳೆಯ ಸಿನಿಮಾ ಮಾಡು, ಕೆಟ್ಟ ಸಿನಿಮಾಕ್ಕೆ ನಿಲ್ಲಿಸಬೇಡ’ ಎಂದು ಹೇಳುತ್ತಾರೆ. ಆದರೆ ಆ ಒಂದು ಒಳ್ಳೆಯ ಸಿನಿಮಾಕ್ಕಾಗಿ ನಾನೂ ಸಹ ಕಾಯುತ್ತಿದ್ದೇನೆ’ ಎಂದಿದ್ದಾರೆ ಕಮಲ್ ಹಾಸನ್. ಆ ಮೂಲಕ ಒಂದು ಒಳ್ಳೆಯ ಸಿನಿಮಾ ಬಳಿಕ ನಿವೃತ್ತಿಯ ಆಲೋಚನೆ ಇದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ ಕಮಲ್ ಹಾಸನ್.
ಕಮಲ್ ಹಾಸನ್ ಅವರು ಪ್ರಸ್ತುತ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದರ ಹೊರತಾಗಿ ಅನ್ಬರಿವ್ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ರಜನೀಕಾಂತ್ ಅವರಿಗಾಗಿ ಸಿನಿಮಾ ಒಂದನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ