ಕಮಲ್ ಹಾಸನ್ ಹಳೆ ಸಿನಿಮಾ ಮರು ಬಿಡುಗಡೆಗೂ ವಿರೋಧ, ಪ್ರತಿಭಟನೆ
Kamal Haasan movie: ಕನ್ನಡದ ಬಗ್ಗೆ ಲಘು ಹೇಳಿಕೆ ನೀಡಿದ್ದ ಕಮಲ್ ಹಾಸನ್ ಅವರಿಗೆ ಈ ಹಿಂದೆಯೇ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯ ರುಚಿ ತೋರಿಸಿದ್ದಾಗಿದೆ. ಆದರೆ ಇಂದು ಮತ್ತೆ ಕನ್ನಡಪರ ಸಂಘಟನೆ ಸದಸ್ಯರು ಕಮಲ್ ಹಾಸನ್ ವಿರುದ್ಧ ಪ್ರತಿಭಟಿಸಿ ಘೋಷಣೆ ಕೂಗಿದರು. ಇಂದು ಅವರ ನಟನೆಯ ಹಳೆಯ ಸಿನಿಮಾ ‘ನಾಯಗನ್’ ಮರು ಬಿಡುಗಡೆ.

ಕಮಲ್ ಹಾಸನ್ ಈ ಹಿಂದೆ ಕನ್ನಡ ಭಾಷೆಯ ಬಗ್ಗೆ ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ವೇಳೆ ಕಮಲ್ ಹಾಸನ್ ಕನ್ನಡದ ಬಗ್ಗೆ ಮಾತನಾಡಿ, ‘ಕನ್ನಡ ತಮಿಳು ಭಾಷೆಯಿಂದಲೇ ಜನ್ಮಿಸಿದೆ’ ಎಂಬರ್ಥದ ಮಾತುಗಳನ್ನು ಆಡಿದ್ದರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದರು. ಸಿನಿಮಾ ಬಿಡುಗಡೆಗೆ ಅವಕಾಶ ನೀಡಿರಲಿಲ್ಲ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದರೂ ಸಹ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಆಗಲಿಲ್ಲ.
‘ಥಗ್ ಲೈಫ್’ ಸಿನಿಮಾ ಫ್ಲಾಪ್ ಆಯ್ತು, ಇದೀಗ ಕಮಲ್ ಹಾಸನ್ ನಟನೆಯ ಹಳೆಯ ಸಿನಿಮಾ ಒಂದು ಮರು ಬಿಡುಗಡೆ ಆಗುತ್ತಿದ್ದು, ಆ ಸಿನಿಮಾಕ್ಕೂ ಕನ್ನಡಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ನಟನೆಯ ಕಲ್ಟ್ ಸಿನಿಮಾ ಎಂದೇ ಖ್ಯಾತವಾಗಿರುವ ‘ನಾಯಗನ್’ ಸಿನಿಮಾ ಇಂದು ಭಾರತದ ಹಲವು ರಾಜ್ಯಗಳ ಪ್ರಮುಖ ನಗರಗಳಲ್ಲಿ ಮರು ಬಿಡುಗಡೆ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಸಿನಿಮಾದ ಮರು ಬಿಡುಗಡೆಗೆ ವಿರೋಧ ವ್ಯಕ್ತವಾಗಿದೆ.
ಇಂದು (ನವೆಂಬರ್ 07) ಕಮಲ್ ಹಾಸನ್ ಹುಟ್ಟುಹಬ್ಬವಿದ್ದು, ಇದೇ ದಿನ ‘ನಾಯಗನ್’ ಸಿನಿಮಾ ಚೆನ್ನೈ, ಹೈದರಾಬಾದ್ ಸೇರಿದಂತೆ ಇನ್ನೂ ಹಲವು ನಗರಗಳಲ್ಲಿ ಮರು ಬಿಡುಗಡೆ ಆಗಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಸಿನಿಮಾದ ಒಂದು ಶೋ ಸಹ ಪ್ರದರ್ಶನ ಕಾಣುತ್ತಿಲ್ಲ. ಅಸಲಿಗೆ ನಗರದ ಒರಾಯಿನ್ ಮಾಲ್ನಲ್ಲಿ ಸಿನಿಮಾದ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತಂತೆ. ಆದರೆ ಕನ್ನಡಪರ ಹೋರಾಟಗಾರರು ಒರಾಯಿನ್ ಮಾಲ್ ಮುಂದೆ ಪ್ರತಿಭಟನೆ ನಡೆಸಿದ್ದು, ಸಿನಿಮಾ ಬಿಡುಗಡೆಯನ್ನು ತಡೆದಿದ್ದಾರೆ.
ಇದನ್ನೂ ಓದಿ:71ನೇ ವಯಸ್ಸಿನಲ್ಲೂ ಸಖತ್ ಫಿಟ್ ಆಗಿದ್ದಾರೆ ಕಮಲ್ ಹಾಸನ್; ಆರೋಗ್ಯದ ಗುಟ್ಟೇನು?
ವಾಟಾಳ್ ನಾಗರಾಜ್, ಸಾರಾ ಗೋವಿಂದು, ಕರವೇ ಶಿವರಾಮೇ ಗೌಡ ಇನ್ನೂ ಹಲವರು ಒರಾಯಿನ್ ಮಾಲ್ನ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಕಮಲ್ ಹಾಸನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ಕಮಲ್ ಹಾಸನ್ ಕ್ಷಮೆ ಕೇಳುವವರೆಗೆ ನಾವು ಬಿಡುವುದಿಲ್ಲ. ‘ನಾಯಗನ್’ ಸಿನಿಮಾವನ್ನು ರಾಜ್ಯದ ಚಿತ್ರಮಂದಿರಗಳು, ಮಾಲ್ನವರು ಬಿಡುಗಡೆ ಮಾಡಿಲ್ಲ. ಅವರ ಈ ನಿರ್ಧಾರವನ್ನು ನಾವು ಅಭಿನಂದಿಸುತ್ತೇವೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವಂಥಹಾ ಹೇಳಿಕೆಗಳನ್ನು ಕಮಲ್ ಹಾಸನ್ ನೀಡಿದ್ದಾರೆ. ನಾವು ಇದನ್ನು ಸಹಿಸುವುದಿಲ್ಲ’ ಎಂದಿದ್ದಾರೆ ಹೋರಾಟಗಾರರು.
ಈ ಹಿಂದೆ ‘ಥಗ್ ಲೈಫ್’ ಸಿನಿಮಾ ಬಿಡುಡಗೆ ವೇಳೆಯಲ್ಲಿಯೂ ಸಹ ಕನ್ನಡಪರ ಹೋರಾಟಗಾರರು, ಫಿಲಂ ಚೇಂಬರ್ನವರು ಸಿನಿಮಾದ ವಿರುದ್ಧ ತೀವ್ರವಾದ ಹೋರಾಟ ಮಾಡಿದ್ದರು. ಕಮಲ್ ಹಾಸನ್ ಅವರು ತಮ್ಮ ಸಿನಿಮಾದ ಬಿಡುಗಡೆಗಾಗಿ ನ್ಯಾಯಾಲಯದ ಮೆಟ್ಟಿಲೇರಿದರು. ಸಿನಿಮಾ ಬಿಡುಗಡೆಗೆ ರಾಜ್ಯ ಸರ್ಕಾರ ಸೂಕ್ತ ಭದ್ರತೆ ನೀಡುವಂತೆ ಸೂಚಿಸಿತ್ತು. ಸರ್ಕಾರ ಸಹ ಒಪ್ಪಿತ್ತು, ಆದರೆ ಕರ್ನಾಟಕದ ಯಾವೊಂದು ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ಗಳು ಸಹ ಸಿನಿಮಾವನ್ನು ಬಿಡುಗಡೆ ಮಾಡಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




