ತಮಿಳಿನ ಸ್ಟಾರ್ ನಟ ಸೂರ್ಯ ನಟನೆಯ ‘ಕಂಗುವ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಭಾರಿ ನಿರೀಕ್ಷೆಗಳನ್ನು ಈ ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಬಿಡುಗಡೆ ಆದ ಬಳಿಕ ಸಾಕಷ್ಟು ಟೀಕೆಗಳನ್ನು, ವಿಮರ್ಶೆಗಳನ್ನು ಸಿನಿಮಾ ಎದುರಿಸುತ್ತಿದೆ. ಸಿನಿಮಾದ ಸೌಂಡ್ ಡಿಸೈನ್, ಸಿನಿಮಾದ ಉದ್ದ ಇನ್ನೂ ಕೆಲವು ಕಾರಣಗಳಿಗೆ ಸಿನಿಮಾ ಟೀಕೆಗೆ ಗುರಿಯಾಗಿದೆ. ಇದೇ ಕಾರಣಕ್ಕೆ ಈಗ ಚಿತ್ರತಂಡ ‘ಕಂಗುವ’ ಸಿನಿಮಾಕ್ಕೆ ಕೆಲ ಬದಲಾವಣೆಗಳನ್ನು ಮಾಡಲು ಮುಂದಾಗಿದ್ದು, ಕೆಲವು ದೃಶ್ಯಗಳನ್ನು ಕತ್ತರಿಸುವ ಜೊತೆಗೆ ಕೆಲವು ತಾಂತ್ರಿಕ ಬದಲಾವಣೆಗಳನ್ನು ಸಹ ಮಾಡಲಿದೆ.
ಸಿನಿಮಾವನ್ನು ಸುಮಾರು 12 ನಿಮಿಷಗಳ ಕಾಲ ಕಿರಿದು ಮಾಡಲಾಗುತ್ತಿದೆ. ‘ಕಂಗುವ’ ಸಿನಿಮಾದಲ್ಲಿ ಎರಡು ಭಾಗದ ಕತೆ ಇದೆ. ಒಂದು ಶತಮಾನಗಳಷ್ಟು ಹಿಂದಿನ ಕತೆ ಹಾಗೂ ಪ್ರಸ್ತುತ ಕಾಲದಲ್ಲಿ ನಡೆಯುವ ಕತೆ. ಈಗ ಪ್ರಸ್ತುತ ಕಾಲದ ಕತೆಯ 12 ನಿಮಿಷದ ದೃಶ್ಯಗಳನ್ನು ಕತ್ತರಿಸಲಾಗುತ್ತಿದೆ. ಇದರಿಂದ ಸಿನಿಮಾದ ರನ್ಟೈಂ ಕಡಿಮೆ ಆಗಲಿದ್ದು, ಕತೆಯ ವೇಗ ಹೆಚ್ಚಲಿದೆ. ಕತೆಯ ಆರಂಭದ ಕೆಲ ದೃಶ್ಯಗಳು ಅನವಶ್ಯಕವಾಗಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದವು, ಹಾಗಾಗಿ ಈ ನಿರ್ಣಯವನ್ನು ಚಿತ್ರತಂಡ ತೆಗೆದುಕೊಂಡಿದೆ.
ದಿಶಾ ಪಟಾನಿಯ ಪಾತ್ರಕ್ಕೆ ಬಹುತೇಕ ಕತ್ತರಿ ಬೀಳಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿನಿಮಾದ ನಿರ್ಮಾಪಕ ಜ್ಞಾನವೇಲು ಅವರ ಪತ್ನಿ, ‘ದಿಶಾ ಪಟಾನಿಯ ಪಾತ್ರ ‘ಕಂಗುವ’ ಮೇಲೆ ಪರಿಣಾಮ ಬೀರುವ ಪಾತ್ರವಲ್ಲ. ಆಕೆಯ ಪಾತ್ರ ಇರುವುದು ಕೇವಲ ಸುಂದರವಾಗಿ ಕಾಣಲು ಅಷ್ಟೆ’ ಎಂದಿದ್ದರು. ದಿಶಾ ಪಾತ್ರಕ್ಕೆ ಕತ್ತರಿ ಹಾಕುವ ನಿರ್ಣಯವನ್ನು ಹೀಗೆ ಸಮರ್ಥಿಸಿಕೊಂಡಿದ್ದರು. ಇದು ಟೀಕೆಗೆ ಸಹ ಗುರಿಯಾಗಿತ್ತು. ನಟಿ ಜ್ಯೋತಿಕಾ ಸಹ ಇನ್ಸ್ಟಾಗ್ರಾಂನಲ್ಲಿ ‘ಕಂಗುವ’ ಸಿನಿಮಾದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ‘ಸಿನಿಮಾ ತಾಂತ್ರಿಕವಾಗಿ ಬಹಳ ರಿಚ್ ಆಗಿದೆ, ಸೂರ್ಯ ಅದ್ಭುತವಾಗಿ ನಟಿಸಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ: ‘ಸಿನಿಮಾ ಸೌಂಡ್ ಕಡಿಮೆ ಮಾಡಿ’; ಥಿಯೇಟರ್ ಮಾಲೀಕರ ಬಳಿ ‘ಕಂಗುವ’ ನಿರ್ಮಾಪಕನ ಮನವಿ
ದೃಶ್ಯಗಳಿಗೆ ಕತ್ತರಿ ಹಾಕುವುದು ಮಾತ್ರವೇ ಅಲ್ಲದೆ, ಸಿನಿಮಾದ ಶಬ್ದವನ್ನು ಅಲ್ಲಲ್ಲಿ ಬದಲಾಯಿಸಲಾಗಿದೆ. ಸಿನಿಮಾದ ಹಿನ್ನೆಲೆ ಸಂಗೀತ ಬಹಳ ಲೌಡ್ ಆಗಿದೆ ಎಂದು ಪ್ರೇಕ್ಷಕರು ಟೀಕಿಸಿದ್ದರು. ಸ್ವತಃ ನಿರ್ಮಾಪಕರು ಸಹ ಚಿತ್ರಮಂದಿರಗಳ ಮಾಲೀಕರು ಸೌಂಡ್ ಕಡಿಮೆ ಇಟ್ಟು ಸಿನಿಮಾ ಪ್ರದರ್ಶಿಸಿ ಎಂದು ಮನವಿ ಮಾಡಿದ್ದರು. ಇದೀಗ ಚಿತ್ರತಂಡವೇ ಸಿನಿಮಾದ ಸೌಂಡ್ ಕಡಿಮೆ ಮಾಡಲಿದೆ. ಸಿನಿಮಾದ ರೀ ಎಡಿಟ್ ಮಾಡುತ್ತಿರುವ ಕಾರಣ ಇದೀಗ ಸಿನಿಮಾವನ್ನು ಮರು ಸೆನ್ಸಾರ್ ಸಹ ಮಾಡಿಸಲಾಗುತ್ತಿದೆ.
‘ಕಂಗುವ’ ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ದಿಶಾ ಪಟಾನಿ ನಾಯಕಿ. ವಿಲನ್ ಆಗಿ ಬಾಬಿ ಡಿಯೋಲ್ ನಟಿಸಿದ್ದಾರೆ. ಸಂಗೀತ ನೀಡಿರುವುದು ದೇವಿ ಶ್ರೀ ಪ್ರಸಾದ್. ಸಿನಿಮಾಕ್ಕೆ 300 ಕೋಟಿಗೂ ಹೆಚ್ಚು ಬಜೆಟ್ ಹೂಡಿಕೆ ಮಾಡಲಾಗಿದೆ. ಸಿನಿಮಾ ಬಿಡುಗಡೆ ಆದ ಮೊದಲ ವಾರದಲ್ಲಿ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸುಮಾರು 100 ಕೋಟಿಗೂ ಹೆಚ್ಚಿನ ಗಳಿಕೆ ಮಾಡಿದೆ. ಈಗ ಎಡಿಟ್ ಬಳಿಕ ಸಿನಿಮಾದ ಪ್ರದರ್ಶನ ಉತ್ತಮಗೊಳ್ಳಲಿದೆಯೇ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ