
‘ಕಾಂತಾರ’ (Kantara Movie) ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆಗಿದೆ. ಸಣ್ಣ ಬಜೆಟ್ನಲ್ಲಿ ಸಿದ್ಧವಾದ ಸಿನಿಮಾ 400 ಕೋಟಿ ರೂಪಾಯಿ ಬಾಚಿಕೊಡಿದೆ. ರಿಷಬ್ ಶೆಟ್ಟಿ ಅವರ ಈ ಚಿತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ‘ಕಾಂತಾರ’ ಬಾಲಿವುಡ್ ಬಾಕ್ಸ್ ಆಫೀಸ್ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಸಿನಿಮಾಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಸಿಗಲು ಹೊಂಬಾಳೆ ಫಿಲ್ಮ್ಸ್ ಕೂಡ ಕಾರಣ ಎಂದು ರಿಷಬ್ ಶೆಟ್ಟಿ (Rishab Shetty) ಹೇಳಿದ್ದಾರೆ. ಅವರ ಮಾತನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ.
ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಉದ್ಘಾಟನೆಗೊಂಡಿದೆ. ಸಿನಿಮಾ ಪತ್ರಕರ್ತರ ಜೊತೆ ರಿಷಬ್ ಶೆಟ್ಟಿ ಅವರ ಮೊದಲ ಮುಖಾಮುಖಿ ನಡೆದಿದೆ. ಈ ವೇಳೆ ಅವರು ‘ಕಾಂತಾರ’ ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಕಥೆ ಹುಟ್ಟಿದ್ದು, ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡ ವಿಚಾರಗಳ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
‘ಈ ಚಿತ್ರದ ಕಥೆ ಹುಟ್ಟಿದ್ದು 2021ರ ಏಪ್ರಿಲ್ ತಿಂಗಳಲ್ಲಿ. ಲಾಕ್ಡೌನ್ನಲ್ಲಿ ನಾನು ಊರಿನಲ್ಲಿದ್ದೆ. ಆಗ ‘ಕಾಂತಾರ’ ಸಿನಿಮಾದ ಕಥೆ ಹುಟ್ಟಿತ್ತು. ನಾನು ಸಾವಯವ ಕೃಷಿ ಮಾಡುವ ಆಲೋಚನೆಯಲ್ಲಿದ್ದೆ. ಇದಕ್ಕಾಗಿ ಮಾಹಿತಿ ಪಡೆಯಲು ಹೋಗಿದ್ದೆ. ಅಲ್ಲಿ ಕಾಡು ಪ್ರಾಣಿ ಹೊಡೆಯುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಫಾರೆಸ್ಟ್ ಇಲಾಖೆಯವರು ಅಲ್ಲಿ ರೈಡ್ ಮಾಡಿದರು. ಇದರಿಂದ ‘ಕಾಂತಾರ’ ಚಿತ್ರದ ಕಥೆ ಹುಟ್ಟಿತು’ ಎಂದಿದ್ದಾರೆ ರಿಷಬ್ ಶೆಟ್ಟಿ.
‘ಕೆಜಿಎಫ್ 2’ ಚಿತ್ರವನ್ನು ನಿರ್ಮಾಣ ಮಾಡಿದ್ದು ಹೊಂಬಾಳೆ ಫಿಲ್ಮ್ಸ್. ಈ ಚಿತ್ರ ಯಶಸ್ಸು ಕಂಡಿದ್ದರಿಂದ ಹೊಂಬಾಳೆ ಫಿಲ್ಮ್ಸ್ ಖ್ಯಾತಿ ರಾಷ್ಟ್ರ ಮಟ್ಟದಲ್ಲಿ ಹಬ್ಬಿತು. ಇದು ‘ಕಾಂತಾರ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಾಣಲು ಸಹಕಾರಿ ಆಯಿತು. ‘ಕಾಂತಾರ’ ಚಿತ್ರ ಕನ್ನಡದಲ್ಲಿ ಯಶಸ್ಸು ಕಂಡ ನಂತರ ಅದನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂಗೆ ರಿಮೇಕ್ ಮಾಡಲಾಯಿತು. ಹೊಂಬಾಳೆ ಫಿಲ್ಮ್ಸ್ ಹೆಸರು ಚಾಲ್ತಿಯಲ್ಲಿ ಇದ್ದಿದ್ದರಿಂದ ‘ಕಾಂತಾರ’ ಚಿತ್ರಕ್ಕೆ ಬೂಸ್ಟ್ ಸಿಕ್ಕಿತು. ಇದೇ ಮಾತನ್ನು ರಿಷಬ್ ಕೂಡ ಹೇಳಿದ್ದಾರೆ.
‘ನಾವು ಸಿನಿಮಾ ರಿಲೀಸ್ಗೆ ಮುಂಚೆ ಹೆಚ್ಚು ಪ್ರಚಾರ ಮಾಡಿರಲಿಲ್ಲ. ಆದಾಗ್ಯೂ ದೊಡ್ಡ ಯಶಸ್ಸು ಸಿಕ್ಕಿದೆ. ಬಾಯಿಮಾತಿನ ಪ್ರಚಾರ ಚಿತ್ರಕ್ಕೆ ಸಹಕಾರಿ ಆಯಿತು. ಕಾಂತಾರ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತದೆ ಎಂದುಕೊಂಡಿರಲಿಲ್ಲ. ನಮ್ಮ ಚಿತ್ರ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಲು ವಿಜಯ್ ಕಿರಂಗದೂರು ಕೂಡ ಕಾರಣ. ಅವರಿಗೆ ನಮ್ಮ ಸಿನಿಮಾನ ಹೇಗೆ ತಲುಪಿಸಬೇಕು ಎನ್ನುವ ಕ್ಲ್ಯಾರಿಟಿ ಇತ್ತು. ಈ ಕ್ಲ್ಯಾರಿಟಿ ಇದ್ದಿದ್ದರಿಂದಲೇ ಯಶಸ್ಸು ಸಿಕ್ಕಿತು’ ಎಂದಿದ್ದಾರೆ ರಿಷಬ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ