‘ಕಾಂತಾರ’ ಚಿತ್ರಕ್ಕೆ ಬಿಗ್ ರಿಲೀಫ್ ನೀಡಿದ ಸುಪ್ರೀಂಕೋರ್ಟ್; ನಿಟ್ಟುಸಿರು ಬಿಟ್ಟ ತಂಡ
‘ಕಾಂತಾರ’ ಚಿತ್ರದ ‘ವರಾಹ ರೂಪಂ..’ ಹಾಡಿನ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ.
‘ಕಾಂತಾರ’ ಚಿತ್ರದ (Kantara Movie) ‘ವರಾಹರೂಪಂ..’ ಹಾಡಿನ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಈ ಚಿತ್ರದ ಹಾಡಿಗೆ ಕೃತಿಚೌರ್ಯದ ಆರೋಪ ಕೇಳಿ ಬಂದಿದ್ದು, ಈ ಕುರಿತಂತೆ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ನಲ್ಲಿ ಕೇಸ್ಗಳು ನಡೆಯುತ್ತಿವೆ. ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ. ‘ವರಾಹರೂಪಂ..’ ಹಾಡನ್ನು ತೆಗೆಯಬೇಕು ಎಂಬ ಕೇರಳ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಕೇರಳ ಹೈಕೋರ್ಟ್ನ ನ್ಯಾಯಮೂರ್ತಿ ಎ. ಬದ್ರುದೀನ್ ಅವರು ರಿಷಬ್ ಹಾಗೂ ವಿಜಯ್ಗೆ ನಿರೀಕ್ಷಣಾ ಜಾಮೀನು ನೀಡಿದ್ದರು. ‘ಕಾಪಿರೈಟ್ ಪ್ರಕರಣದಲ್ಲಿ ಸಿವಿಲ್ ಕೋರ್ಟ್ನಿಂದ ಮಧ್ಯಂತರ ಅಥವಾ ಅಂತಿಮ ಆದೇಶ ಬರೋವರೆಗೆ ಕಾಂತಾರ ಸಿನಿಮಾದಲ್ಲಿ ‘ವರಾಹ ರೂಪಂ..’ ಹಾಡನ್ನು ಬಳಕೆ ಮಾಡುವಂತಿಲ್ಲ. ಈ ಪ್ರಕರಣದ ಮರುವಿಚಾರಣೆಗೆ ಕೋರಲು ಅರ್ಜಿದಾರರಿಗೆ ಅವಕಾಶ ಇದೆ’ ಎಂದು ಬದ್ರುದೀನ್ ಹೇಳಿದ್ದರು. ಈಗ ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೊಸ ಆದೇಶ ನೀಡಿದೆ.
ಕೇರಳ ಹೈಕೋರ್ಟ್ ವಿಧಿಸಿದ್ದ ಷರತ್ತನ್ನು ಸುಪ್ರೀಂಕೋರ್ಟ್ ಸಡಿಲಿಸಿದೆ. ‘ಸಿನಿಮಾ ತಂಡದವರು ಹಾಡನ್ನು ಬಳಕೆ ಮಾಡಬಹುದು. ವಿಚಾರಣೆಗೆ ಹಾಜರಾದಾಗ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಪೊಲೀಸರು ಪ್ರಶ್ನೆ ಕೇಳಬಹುದೇ ಹೊರತು ಅರೆಸ್ಟ್ ಮಾಡುವಂತಿಲ್ಲ’ ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.
ಇದನ್ನೂ ಓದಿ: ‘ಕಾಂತಾರ’ ಹಾಡಿನ ವಿವಾದ; ವಿಜಯ್ ಕಿರಗಂದೂರು, ರಿಷಬ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು
‘ಕಾಂತಾರ ತಂಡದವರು ಕೃತಿಚೌರ್ಯ ಮಾಡಿದ್ದಾರೆ ಎಂದು ಕೇರಳ ಹೈಕೋರ್ಟ್ಗೆ ಅನಿಸಿದೆ. ಹಾಗೆಂದು ಈ ರೀತಿಯ ನಿಯಮಗಳನ್ನು ಹೇರಲು ಸಾಧ್ಯವಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ‘ಫೆಬ್ರವರಿ 12 ಮತ್ತು 13 ರಂದು ಅರ್ಜಿದಾರರು ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕು. ಅವರನ್ನು ಬಂಧಿಸಿದ್ದರೆ ಜಾಮೀನಿನ ಮೇಲೆ ಬಿಟ್ಟು ಕಳುಹಿಸಬೇಕು. ಹಾಡನ್ನು ತೆಗೆದು ಹಾಕಬೇಕು ಎಂಬ ಆದೇಶಕ್ಕೆ ತಡೆ ನೀಡುತ್ತಿದ್ದೇವೆ’ ಎಂದು ಕೋರ್ಟ್ ಆದೇಶಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:59 pm, Fri, 10 February 23