‘ತಗಡು’, ‘ಗುಮ್ಮಿಸ್ಕೋತೀಯ’ ಹೇಳಿಕೆ: ದರ್ಶನ್ ವಿರುದ್ಧ ದೂರು

|

Updated on: Feb 21, 2024 | 6:09 PM

Darshan-Umapathy: ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧ ಕಠು ಪದಗಳನ್ನು ಬಳಸಿರುವ ದರ್ಶನ್ ವಿರುದ್ಧ ಫಿಲಂ ಛೇಂಬರ್​ಗೆ ದೂರು ನೀಡಲಾಗಿದೆ.

‘ತಗಡು’, ‘ಗುಮ್ಮಿಸ್ಕೋತೀಯ’ ಹೇಳಿಕೆ: ದರ್ಶನ್ ವಿರುದ್ಧ ದೂರು
Follow us on

ದರ್ಶನ್ ತೂಗುದೀಪ (Darshan) ಹಾಗೂ ಉಮಾಪತಿ ಶ್ರೀನಿವಾಸ್ (Umapathy Srinivas) ನಡುವೆ ಫೈಟ್ ತುಸು ಜೋರಾಗಿಯೇ ಸಾಗುತ್ತಿದೆ. ‘ಕಾಟೇರ’ ಸಿನಿಮಾದ 50 ದಿನದ ಕಾರ್ಯಕ್ರಮದಲ್ಲಿ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧ ತುಸು ಖಡಕ್ ಆಗಿ ಕಿಡಿ ಕಾರಿದ್ದರು. ‘ಕಾಟೇರ’ ಸಿನಿಮಾದ ಕತೆಯನ್ನು ತಾವು ಮಾಡಿಸಿದ್ದು ಎಂದು ಉಮಾಪತಿ ಶ್ರೀಣಿವಾಸ್ ಹೇಳಿಕೊಂಡಿದ್ದರು. ಇದು ದರ್ಶನ್ ಸಿಟ್ಟಿಗೆ ಕಾರಣವಾಗಿತ್ತು, ನಿನ್ನೆ (ಫೆಬ್ರವರಿ 20) ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್, ‘ತಗಡು’, ‘ಪ್ರತಿ ಬಾರಿ ಯಾಕೆ ನಮ್ಮಿಂದ ಗುಮ್ಮಿಸ್ಕೊಳ್ತೀಯ’ ಎಂದು ಎಚ್ಚರಿಕೆ ನೀಡುವ ದನಿಯಲ್ಲಿ ಮಾತನಾಡಿದ್ದರು. ಇದೇ ಕಾರಣಕ್ಕೆ ಸಂಘಟನೆಯೊಂದು ದರ್ಶನ್ ವಿರುದ್ಧ ಫಿಲಂ ಚೇಂಬರ್​ಗೆ ದೂರು ನೀಡಿದೆ.

ದರ್ಶನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಪ್ರಜಾ ಪರವೇದಿಕೆ ಸಂಘಟನೆಯು ‘ಚಿತ್ರನಟ ದರ್ಶನ್, ವೇದಿಕೆ ಮೇಲೆ ಗುಮ್ಮಿಸ್ಕೋತೀಯ ಎಂದು ಬೆದರಿಕೆ ಹಾಕಿದ್ದು ಇದು ಕಾನೂನು ಬಾಹಿರವಾಗಿದ್ದು, ಈ ಕೂಡಲೇ ನಟ ದರ್ಶನ್ ಅವರು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಬಳಿ ಕ್ಷಮೆ ಕೇಳಬೇಕು. ಇಲ್ಲವಾದರೆ ಕರ್ನಾಟಕ ಪ್ರಜಾಪರ ವೇದಿಕೆ ಮತ್ತು ನೂರಾರು ಕನ್ನಡಪರ ಸಂಘಟನೆಗಳುಳ್ಳ ಕನ್ನಡಿಗರ ಒಕ್ಕೂಟದಿಂದ ದರ್ಶನ್ ಮನೆಯ ಮುಂದೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದ್ದಾರೆ.

ದರ್ಶನ್, ತಮ್ಮ ವಿರುದ್ಧ ಮಾಡಿರುವ ಪದ ಬಳಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸಹ ದರ್ಶನ್​ರ ಹೇಳಿಕೆಗೆ ಖಾರವಾಗಿಯೇ ಸ್ಪಂದಿಸಿದ್ದು, ವೇದಿಕೆ ಸಿಕ್ಕಿದೆಯೆಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇಂಥಹಾ ಬೆದರಿಕೆಗಳನ್ನು, ಎಚ್ಚರಿಕೆಗಳನ್ನು ಸಾಕಷ್ಟು ನೋಡಿದ್ದೆನೆ, ಅದೇನು ಮಾಡುತ್ತಾರೋ ಮಾಡಲಿ ನೋಡಿಕೊಳ್ತೀನಿ, ಸಮಯ ಬಂದಾಗ ನಾನೂ ಸಹ ತಕ್ಕ ಉತ್ತರವನ್ನೇ ನೀಡುತ್ತೀನಿ’ ಎಂದು ಸವಾಲು ಎಸೆದಿದ್ದಾರೆ. ಅಲ್ಲದೆ, ಉಮಾಪತಿ ಶ್ರೀನಿವಾಸ್ ಸಹ ಕಾನೂನು ಸಮರಕ್ಕೆ ಮುಂದಾಗುವ ಆಲೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಕಾಟೇರ’ ಹೆಸರು ದರ್ಶನ್ ಸೂಚಿಸಿದ್ದಕ್ಕೆ ಕಾರಣ ಬೇರೆಯೇ ಇದೆ: ಮಹೇಶ್

‘ಕಾಟೇರ’ ಸಿನಿಮಾದ ಕತೆಯನ್ನು ತಾವು ಮಾಡಿಸಿದ್ದಾಗಿ ಉಮಾಪತಿ ಶ್ರೀನಿವಾಸ್ ಹೇಳಿದ್ದರು. ಆ ಟೈಟಲ್ ಸಹ ತಮ್ಮ ಬಳಿಯೇ ಇತ್ತೆಂದು ಉಮಾಪತಿ ಶ್ರೀನಿವಾಸ್ ಹೇಳಿಕೊಂಡಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ನಟ ದರ್ಶನ್, ‘ರಾಬರ್ಟ್’ ಕತೆ ಕೊಟ್ಟಿದ್ದೇ ನಾವು, ಕೊಟ್ಟಿದ್ದನ್ನು ಹೇಳಿಕೊಳ್ಳಬಾರದು. ಅಯ್ಯೋ ತಗಡು ‘ಕಾಟೇರ’ ಟೈಟಲ್ ಕೊಟ್ಟಿದ್ದು ನಾನು, ‘ಕಾಟೇರ’ ಕತೆ ನೀನು ಮಾಡಿಸಿದ್ದಾಗಿದ್ದರೆ ನೀನು ಯಾಕೆ ಸಿನಿಮಾ ಮಾಡಲಿಲ್ಲ, ಅಷ್ಟು ಚೆನ್ನಾಗಿದೆ ನಿನ್ನ ಜಡ್ಜ್​ಮೆಂಟ್. ಹಿಂದೆ ಏನೋ ಮಾಡೋಕೆ ಹೋಗಿ ಸಿಕ್ಕಿ ಹಾಕಿಕೊಂಡು ಬೈಸಿಕೊಂಡಿದ್ದೀಯ. ಪದೇ ಪದೇ ಯಾಕೆ ನಮ್ಮ ಕೈಲಿ ಗುಮ್ಮಿಸ್ಕೋತೀಯ’ ಎಂದಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Wed, 21 February 24