‘ನನ್ನ ಕಣ್ಮುಂದೆ ನಡೆದಿದ್ದು ಮಾತ್ರ ಹೇಳ್ತೀನಿ: ‘ಕಾಟೇರ’ ವಿವಾದಕ್ಕೆ ತರುಣ್ ಸುಧೀರ್ ಪ್ರತಿಕ್ರಿಯೆ
ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಜೊತೆ ತರುಣ್ ಸುಧೀರ್ ಕೆಲಸ ಮಾಡಿದ್ದಾರೆ. ಈಗ ಅವರಿಬ್ಬರ ನಡುವೆ ಮನಸ್ತಾಪ ಹೆಚ್ಚಾಗಿದೆ. ಆ ಬಗ್ಗೆ ತರುಣ್ ಸುಧೀರ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ‘ನಾವು 50ನೇ ದಿನದ ಹುಮ್ಮಸ್ಸಿನಲ್ಲಿ ಇದ್ದೆವು. ಅದಕ್ಕಿಂತಲೂ ಹೆಚ್ಚಾಗಿ ಬೇರೆ ವಿಚಾರ ಹೈಲೈಟ್ ಆಗಿದ್ದಕ್ಕೆ ಬೇಸರ ಇದೆ’ ಎಂದು ಅವರು ಹೇಳಿದ್ದಾರೆ.
ಸೂಪರ್ ಹಿಟ್ ಆಗಿರುವ ‘ಕಾಟೇರ’ ಸಿನಿಮಾದ ಕಥೆ ಮತ್ತು ಶೀರ್ಷಿಕೆಗೆ ಸಂಬಂಧಿಸಿದಂತೆ ಒಂದಷ್ಟು ವಿವಾದಗಳು ಭುಗಿಲೆದ್ದಿವೆ. ನಟ ದರ್ಶನ್ ಅವರು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ಅವರ ವಿರುದ್ಧ ಗುಡುಗಿದ್ದಾರೆ. ಅತ್ತ, ಉಮಾಪತಿ ಕೂಡ ದರ್ಶನ್ ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ. ಅವರಿಬ್ಬರು ಜೊತೆಯಾಗಿ ‘ರಾಬರ್ಟ್’ ಸಿನಿಮಾ ಮಾಡಿದ್ದರು. ಆದರೆ ‘ಕಾಟೇರ ಟೈಟಲ್ ಕೊಟ್ಟಿದ್ದು ಮತ್ತು ಕಥೆ ಮಾಡಿಸಿದ್ದು ನಾನೇ’ ಎಂದು ಉಮಾಪತಿ ಹೇಳಿರುವುದನ್ನು ದರ್ಶನ್ (Darshan) ಖಂಡಿಸಿದ್ದಾರೆ. ಅದಕ್ಕೆ ಉಮಾಪತಿ ತಿರುಗೇಟು ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ದರ್ಶನ್ ಸರ್ ಮತ್ತು ಉಮಾಪತಿ ಸರ್ ಇಬ್ಬರೂ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇದ್ದಾರೆ. ತಪ್ಪು ಯಾವುದು, ಸರಿ ಯಾವುದು ಎಂಬುದನ್ನು ವಿಶ್ಲೇಷಿಸುವ ಶಕ್ತಿ ಅವರಿಗೆ ಇದೆ. ತಮ್ಮ ತಮ್ಮ ದೃಷ್ಟಿಕೋನದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಅದರ ಬಗ್ಗೆ ನಾನು ಮಾತನಾಡಲು ಆಗದೇ ಇದ್ದರೂ ನನ್ನ ಕಣ್ಮುಂದೆ ಏನು ನಡೆಯಿತು ಎಂಬುದನ್ನು ಮಾತ್ರ ಹೇಳಬಹುದು’ ಎಂದು ತರುಣ್ ಸುಧೀರ್ (Tharun Sudhir) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ