
ಲೋಕೇಶ್ ಕನಗರಾಜ್, ತಮಿಳು ಚಿತ್ರರಂಗದ ಸ್ಟಾರ್ ನಿರ್ದೇಶಕ. ‘ವಿಕ್ರಂ’, ‘ಖೈದಿ’, ‘ಮಾಸ್ಟರ್’, ‘ಕೂಲಿ’ ಇನ್ನೂ ಕೆಲ ದೊಡ್ಡ ಸಿನಿಮಾಗಳನ್ನು ನಿರ್ದೇಶಿಸಿರುವ ಲೋಕೇಶ್, ತಮ್ಮದೇ ಆದ ‘ಎಲ್ಸಿಯು’ (ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್) ಸೃಷ್ಟಿಸಿದ್ದು, ಹಲವು ಸಿನಿಮಾಗಳನ್ನು ಈಗಾಗಲೇ ಘೋಷಣೆ ಮಾಡಿದ್ದಾರೆ. ಆದರೆ ಅದ್ಯಾವ ಸಿನಿಮಾವನ್ನೂ ಪ್ರಾರಂಭಿಸದೆ ಇತ್ತೀಚೆಗಷ್ಟೆ ತಾವೇ ನಾಯಕನಾಗಿ ಚಿತ್ರರಂಗ ಎಂಟ್ರಿ ಕೊಟ್ಟಿದ್ದು ಮಾತ್ರವೇ ಅಲ್ಲದೆ, ಮೊದಲ ಸಿನಿಮಾನಲ್ಲೇ ಸೂಪರ್ ಹಿಟ್ ಸಹ ನೀಡಿದ್ದಾರೆ. ಆದರೆ ಲೋಕೇಶ್ ಅವರ ಈ ‘ಬೇಜವಬ್ದಾರಿ’ಯನ್ನು ಇದೀಗ ಮತ್ತೊಬ್ಬ ಸ್ಟಾರ್ ಹೀರೋ ಟೀಕೆ ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ನಿವಿನ್ ಪೌಲಿ ಅವರು ಲೋಕೇಶ್ ಕನಗರಾಜ್ ಅವರ ಸೋಮಾರಿತನವನ್ನು ಟೀಕೆ ಮಾಡಿದ್ದರು. ಲೋಕೇಶ್ ಘೋಷಿಸಿದ್ದ ‘ಬೆಂಜ್’ ಸಿನಿಮಾನಲ್ಲಿ ನಿವಿನ್ ಪೌಲಿ ವಿಲನ್ ಆಗಿ ನಟಿಸಬೇಕಿತ್ತು. ಆದರೆ ಆ ಸಿನಿಮಾ ಘೋಷಣೆಯಾಗಿ ವರ್ಷವಾದರೂ ಸಿನಿಮಾ ಸೆಟ್ಟೇರಿಲ್ಲ, ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನಿವಿನ್ ಪೌಲಿ, ‘ಅವರಿಗೆ ಕಾಲ್ ಮಾಡಿ ಮಾಡಿ ಸಾಕಾಗಿದೆ’ ಎಂದಿದ್ದರು. ಇದೀಗ ತಮಿಳಿನ ಸ್ಟಾರ್ ನಟರೇ ಒಬ್ಬರು ಲೋಕೇಶ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೋಕೇಶ್ ಕನಗರಾಜ್ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದು ‘ಖೈದಿ’ ಸಿನಿಮಾ ಮೂಲಕ. ಆ ಸಿನಿಮಾದ ಮೂಲಕವೇ ಲೋಕೇಶ್ ‘ಎಲ್ಸಿಯು’ ಪ್ರಾರಂಭಿಸಿದ್ದರು. ಆ ಸಿನಿಮಾದ ನಾಯಕ ಕಾರ್ತಿ. 2019 ರಲ್ಲಿ ‘ಖೈದಿ’ ಸಿನಿಮಾ ರಿಲೀಸ್ ಆಗಿತ್ತು. ಆಗಲೇ ಸಿನಿಮಾದ ಎರಡನೇ ಭಾಗ ಘೋಷಣೆಯಾಗಿತ್ತು. ಆದರೆ ಈ ವರೆಗೆ ‘ಖೈದಿ 2’ ಸಿನಿಮಾದ ಕೆಲಸವನ್ನು ಲೋಕೇಶ್ ಕನಗರಾಜ್ ಆರಂಭ ಮಾಡಿಲ್ಲ. ಅದರ ಜೊತೆಗೆ ಇನ್ನೂ ಕೆಲವು ಹೊಸ ಸಿನಿಮಾಗಳನ್ನು ನಿರ್ದೇಶಿಸಿ ಅವುಗಳಿಗೂ ಸೀಕ್ವೆಲ್ಗಳನ್ನು ಘೋಷಿಸಿಬಿಟ್ಟಿದ್ದಾರೆ.
ಇದನ್ನೂ ಓದಿ:‘ಬೃಂದಾವಿಹಾರಿ’ ಸಿನಿಮಾ ಕತೆ ಬಗ್ಗೆ ರಂಗಾಯಣ ರಘು ಹೇಳಿದ್ದೇನು?
ಇದೀಗ ಕಾರ್ತಿ ನಟನೆಯ ‘ಸರ್ದಾರ್ 2’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಕಾರ್ತಿ ಅವರನ್ನು ‘ಖೈದಿ 2’ ಸಿನಿಮಾದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯ್ತು. ಪ್ರಶ್ನೆಗಳಿಗೆ ಉತ್ತರಿಸಿದ ಕಾರ್ತಿ, “ನಾವು ಅದನ್ನು (ಖೈದಿ 2) ಮಾಡೇ ಮಾಡುತ್ತೇವೆ. ಮೊದಲು ನಾವು ‘ಸರ್ದಾರ್ 2’ ಬಿಡುಗಡೆ ಮಾಡುತ್ತಿದ್ದೇವೆ, ಅದನ್ನು ನೋಡಿ. ನಂತರ ನಾವು ‘ಖೈದಿ 2’ ಕೈಗೆತ್ತಿಕೊಳ್ಳುತ್ತೇವೆ. ನಿಮ್ಮ ಈ ಪ್ರೀತಿಗೆ ನಾನು ಧನ್ಯವಾದ ಹೇಳುತ್ತೇನೆ” ಎಂದರು. ಅಭಿಮಾನಿಗಳ ಕೇಕೆ ಮತ್ತು ಹರ್ಷೋದ್ಗಾರ ಹೆಚ್ಚಾದಾಗ, “ನಾನು ಲೋಕೇಶ್ ಜೊತೆ ಮಾತನಾಡುತ್ತೇನೆ. ಅವರು ಈಗ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ ಮತ್ತು ಸುತ್ತಾಡುತ್ತಿದ್ದಾರೆ’ ಎಂದು ತಮಾಷೆ ಮಾಡಿದರು. ಆದರೆ ಅವರ ಈ ತಮಾಷೆಯ ಹಿಂದೆ ಸಣ್ಣ ಅಸಮಾಧಾನವೂ ಇತ್ತು.
2019ರಲ್ಲಿ ಬಿಡುಗಡೆಯಾದ ‘ಖೈದಿ’ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹106 ಕೋಟಿ ಗಳಿಸಿತು. ಚಿತ್ರಕ್ಕೆ ಅತ್ಯುತ್ತಮ ವಿಮರ್ಶೆಗಳು ವ್ಯಕ್ತವಾಗಿದ್ದವು. ಚಿತ್ರ ಬಿಡುಗಡೆಯಾದ ನಂತರ ನಟ ಕಾರ್ತಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “’ಖೈದಿ 2′ ಮುಗಿಸಲು ಲೋಕೇಶ್ ನನ್ನ ಕೇವಲ 30 ದಿನಗಳ ಕಾಲಶೀಟ್ ಕೇಳಿದ್ದಾರೆ. ಆದ್ದರಿಂದ, ನಮ್ಮಿಂದ ನೀವು ಶೀಘ್ರದಲ್ಲೇ ಸೀಕ್ವೆಲ್ ನಿರೀಕ್ಷಿಸಬಹುದು” ಎಂದಿದ್ದರು. ಲೋಕೇಶ್ ಕನಕರಾಜ್ ಕೂಡ ಟ್ವಿಟ್ಟರ್ನಲ್ಲಿ ವೇದಿಕೆಯಲ್ಲಿ ‘ದಿಲ್ಲಿ ವಾಪಸ್ ಬರಲಿದ್ದಾರೆ’ ಎಂದು ಸುಳಿವು ನೀಡಿ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದರು. ಆದರೆ ಸಿನಿಮಾದ ಕೆಲಸಗಳು ಇನ್ನೂ ಶುರುವಾಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Thu, 3 September 26