
ನಟ ಹಾಗೂ ರಾಜಕಾರಣಿ ವಿಜಯ್ ಅವರ ರ‍್ಯಾಲಿಯಲ್ಲಿ ಉಂಟಾದ ಕಾಲ್ತುಳಿತದಿಂದ 41 ಜನರು ನಿಧನ ಹೊಂದಿದರು. ತಮಿಳುನಾಡಿನ ಕರೂರ್ನಲ್ಲಿ ಈ ಘಟನೆ ನಡೆದಿತ್ತು. ವಿಜಯ್ ಅವರೇ ಇದಕ್ಕೆ ನೇರ ಕಾರಣ ಎಂದು ಅನೇಕರು ಹೇಳಿದ್ದರು. ಆದಾಗ್ಯೂ ಕೆಲವರು ವಿಜಯ್ ಅವರನ್ನು ಬೆಂಬಲಿಸಿ ಮಾತನಾಡಿದ್ದರು. ವಿಶೇಷ ಎಂದರೆ ವಿಜಯ್ ಅವರನ್ನು ಅಜಿತ್ ಬೆಂಬಲಿಸಿದ್ದಾರೆ.
ಅಜಿತ್ ಹಾಗೂ ವಿಜಯ್ ಅಭಿಮಾನಿಗಳ ಮಧ್ಯೆ ಯಾವಾಗಲೂ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಆದರೆ, ನಿಜಕ್ಕೂ ಇವರ ಮಧ್ಯೆ ವೈಮನಸ್ಸು ಇದೆಯೇ? ಈಗ ಅಜಿತ್ ಕೊಟ್ಟ ಉತ್ತರ ನೋಡಿದರೆ ಒಬ್ಬರ ಮೇಲೆ ಒಬ್ಬರಿಗೆ ಒಳ್ಳೆಯ ಭಾವನೆ ಇದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ.
‘ನಾನು ಈ ವಿಷಯವನ್ನು ಸರಿಯಾದ ಮನೋಭಾವದಿಂದ ತೆಗೆದುಕೊಳ್ಳಲು ಬಯಸುತ್ತೇನೆ. ನಾನು ಯಾರನ್ನೂ ಕೀಳಾಗಿ ಕಾಣಲು ಬಯಸುವುದಿಲ್ಲ. ಇಂದು ತಮಿಳುನಾಡಿನಲ್ಲಿ ಸಾಕಷ್ಟು ಘಟನೆಗಳು ನಡೆಯುತ್ತಿವೆ. ಕರೂರ್ ಅಲ್ಲಿ ಕಾಲ್ತುಳಿತ ಸಂಭವಿಸಿದೆ. ಆ ವ್ಯಕ್ತಿ (ವಿಜಯ್) ಅದಕ್ಕೆ ಜವಾಬ್ದಾರನಲ್ಲ. ನಾವೆಲ್ಲರೂ ಜವಾಬ್ದಾರರು. ಇದರಲ್ಲಿ ಮಾಧ್ಯಮಗಳ ಪಾತ್ರವೂ ಇದೆ’ ಎಂದಿದ್ದಾರೆ ಅಜಿತ್.
‘ಜನರನ್ನು ಒಂದೆಡೆ ಸೇರಿಸಬೇಕು ಎಂಬ ಗೀಳು ಬಂದಿದೆ. ಇದೆಲ್ಲವೂ ಕೊನೆಗೊಳ್ಳಬೇಕು. ನನ್ನ ಪ್ರಕಾರ, ಕ್ರಿಕೆಟ್ ಪಂದ್ಯಗಳಿಗೂ ಜನರು ಹೋಗುತ್ತಾರೆ. ಆದರೆ, ಇದು ಯಾರ ಗಮನಕ್ಕೂ ಬರುತ್ತಿಲ್ಲ. ಇದು ಸೆಲೆಬ್ರಿಟಿಗಳಿಗೆ ಮಾತ್ರ ಆಗುತ್ತಿದೆ. ಸಿನಿಮಾ ಸೆಲೆಬ್ರಿಟಿಗಳು ಮಾತ್ರ ಏಕೆ ಕಾಣುತ್ತಾರೆ? ಇದು ಇಡೀ ಚಲನಚಿತ್ರೋದ್ಯಮವನ್ನು ಕೆಟ್ಟದಾಗಿ ತೋರಿಸುತ್ತದೆ’ ಎಂದಿದ್ದಾರೆ ಅಜಿತ್.
ಇದನ್ನೂ ಓದಿ: ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ತೆಗೆದುಹಾಕಿದ ನೆಟ್ಫ್ಲಿಕ್ಸ್
‘ನಾವು ಈ ರೀತಿ ಆಗಲಿ ಎಂದು ಯಾವಾಗಲೂ ಬಯಸುವುದಿಲ್ಲ. ನಮಗೆ ಆ ಪ್ರೀತಿ ಬೇಕು. ಇದಕ್ಕಾಗಿಯೇ ನಾವು ಕೆಲಸ ಮಾಡುತ್ತೇವೆ. ಕುಟುಂಬದಿಂದ ದೂರವಿರುವುದು, ಸೆಟ್‌ಗಳಲ್ಲಿ ದೀರ್ಘಕಾಲ ಕೆಲಸ ಮಾಡುವುದು ಜನರ ಪ್ರೀತಿಗಾಗಿ. ಶೂಟ್ ಮಾಡುವಾಗ ಗಾಯ ಆಗುತ್ತದೆ, ನಿದ್ದೆ ಇಲ್ಲದಂತೆ ಆಗುತ್ತದೆ. ಇದೆಲ್ಲ ಮಾಡೋದು ಯಾವುದಕ್ಕಾಗಿ? ಜನರ ಪ್ರೀತಿಗಾಗಿ. ಆದರೆ ಆ ಪ್ರೀತಿಯನ್ನು ತೋರಿಸಲು ಒಂದು ಮಾರ್ಗವಿದೆ’ ಎಂದು ಅಜಿತ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.