ಹೊಂಬಾಳೆ (Hombale) ಕಡಿಮೆ ಅವಧಿಯಲ್ಲಿ ಭಾರತದ ಟಾಪ್ ನಿರ್ಮಾಣ ಸಂಸ್ಥೆಗಳಲ್ಲಿ ಒಂದೆಂಬ ಹೆಸರು ಗಳಿಸಿದೆ. ಹೊಂಬಾಳೆ ನಿರ್ಮಿಸುತ್ತಿರುವ ಸಿನಿಮಾಗಳ ಪ್ರಮಾಣ, ‘ಗಾತ್ರ’ದಲ್ಲಿ ಭಾರತದ ಇನ್ಯಾವುದೇ ನಿರ್ಮಾಣ ಸಂಸ್ಥೆ ಸದ್ಯಕ್ಕಂತೂ ಸಿನಿಮಾಗಳನ್ನು ನಿರ್ಮಿಸುತ್ತಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗಗಳಲ್ಲಿ ಅಲ್ಲಿನ ಸ್ಟಾರ್ ನಟ-ನಟಿಯರೊಟ್ಟಿಗೆ ಸಿನಿಮಾ ನಿರ್ಮಾಣವನ್ನು ಹೊಂಬಾಳೆ ಮಾಡುತ್ತಿದೆ. ಇದೀಗ ತಮ್ಮ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣಗೊಂಡಿರುವ ಈ ವರೆಗಿನ ಅತಿ ದೊಡ್ಡ ಬಜೆಟ್ನ ಸಿನಿಮಾ ‘ಸಲಾರ್’ನ ಬಿಡುಗಡೆಯಲ್ಲಿ ಬ್ಯುಸಿಯಾಗಿದೆ ಹೊಂಬಾಳೆ. ಅದರ ನಡುವೆ ತಮ್ಮ ಹೊಸ ಸಿನಿಮಾದ ಪ್ರೋಮೋ ಬಿಡುಗಡೆ ಮಾಡಿದೆ.
ಹೊಂಬಾಳೆ ನಿರ್ಮಾಣ ಮಾಡುತ್ತಿರುವ ಮೊದಲ ತಮಿಳು ಸಿನಿಮಾದ ಪ್ರೋಮೋ ಇದೀಗ ಬಿಡುಗಡೆ ಆಗಿದೆ. ತಮಿಳಿನಲ್ಲಿ ‘ರಘುತಾತ’ ಹೆಸರಿನ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಈ ಸಿನಿಮಾವು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಪ್ರೋಮೋ ಇದೀಗ ಬಿಡುಗಡೆ ಆಗಿದ್ದು ಗಮನ ಸೆಳೆಯುತ್ತಿದೆ.
ಪ್ರೋಮೋನಲ್ಲಿ, ಕೀರ್ತಿ ಸುರೇಶ್ರ ಪೋಸ್ಟರ್ ಅನ್ನು ಅಂಟಿಸಿಕೊಂಡಿರುವ ಆಟೋ ಒಂದು ಯಾವುದೋ ಹಳ್ಳಿಯೊಂದರಲ್ಲಿ ಹೋಗುತ್ತಿದೆ. ‘ಹೊಂಬಾಳೆ ನಿರ್ಮಿಸಿರುವ ‘ರಘು ತಾತ’ ಸಿನಿಮಾ ಬಿಡುಗಡೆ ಆಗುತ್ತಿದೆ ಮರೆಯಬೇಡಿ, ಮರೆತು ನಿರಾಶರಾಗಬೇಡಿ’ ಎಂಬ ಹಳೆಯ ಕಾಲದ ಮಾದರಿಯಲ್ಲಿ ಮೈಕ್ನಲ್ಲಿ ಕೂಗಿಕೊಂಡು ಆಟೋ ಹೋಗುತ್ತಿದೆ. ಲಂಗಾ ದಾವಣಿ ತೊಟ್ಟ ಕೀರ್ತಿ ಸುರೇಶ್ರ ಪೋಸ್ಟರ್ ಸಹ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ:ಕರ್ನಾಟಕದಲ್ಲಿ ‘ಸಲಾರ್’ ಅಡ್ವಾನ್ಸ್ ಬುಕಿಂಗ್ ಬಗ್ಗೆ ಮಾಹಿತಿ ಕೊಟ್ಟ ಹೊಂಬಾಳೆ
ಈ ಮೊದಲು ಬಿಡುಗಡೆ ಆಗಿದ್ದ ‘ರಘುತಾತ’ ಸಿನಿಮಾದ ಪೋಸ್ಟರ್, ಇದೊಂದು ಹೋರಾಟದ ಕತೆ ಎಂಬುದನ್ನು ಸ್ಪಷ್ಟವಾಗಿ ಹೇಳಿತ್ತು, ಲಭ್ಯವಿರುವ ಮಾಹತಿಯಂತೆ, ತನಗೆ ಸೇರಬೇಕಾದ ಭೂಮಿಗಾಗಿ ಯುವತಿ ನಡೆಸುವ ದಿಟ್ಟ ಹೋರಾಟದ ಕತೆಯನ್ನು ‘ರಘುತಾತ’ ಹೊಂದಿದೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಹಾಸ್ಯ, ಭಾವುಕ ಸನ್ನಿವೇಶಗಳ ಜೊತೆಗೆ ಹೋರಾಟದ ಕತೆಯೂ ಇರಲಿದೆ.
ಈ ಸಿನಿಮಾವನ್ನು ಹೆಸರಾಂತ ಯುವಬರಹಗಾರ ಸುಮನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಹಿಂದಿಯ ಜನಪ್ರಿಯ ಶೋಗಳಾಗಿರುವ ‘ದಿ ಫ್ಯಾಮಿಲಿ ಮ್ಯಾನ್’, ‘ಗನ್ಸ್ ಆಂಡ್ ಗುಲಾಬ್ಸ್’, ‘ಗೇಮ್ ಓವರ್’, ‘ಫರ್ಜಿ’ ಬರಹಗಾರರ ತಂಡದ ಸದಸ್ಯರಾಗಿದ್ದಾರೆ ಸುಮನ್. ಇದೀಗ ‘ರಘುತಾತ’ ಸಿನಿಮಾದ ಚಿತ್ರಕತೆಯನ್ನು ತಾವೇ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ.
ಹೊಂಬಾಳೆ ಪ್ರಸ್ತುತ ಹಲವು ಸಿನಿಮಾಗಳ ಮೇಲೆ ಬಂಡವಾಳ ಹೂಡಿದೆ. ‘ಸಲಾರ್’ ಸಿನಿಮಾದ ಮೊದಲ ಭಾಗ ಬಿಡುಗಡೆ ಆಗಲಿದೆ. ಎರಡನೇ ಭಾಗ ಕೆಲವು ತಿಂಗಳ ಬಳಿಕ ಬಿಡುಗಡೆ ಆಗುತ್ತದೆ. ಕನ್ನಡದಲ್ಲಿ ಶ್ರೀಮುರಳಿ ನಟನೆಯ ‘ಬಘೀರ’, ಯುವ ರಾಜ್ಕುಮಾರ್ ನಟನೆಯ ‘ಯುವ’, ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ‘ಕಾಂತಾರ’, ರಕ್ಷಿತ್ ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿರುವ ‘ರಿಚರ್ಡ್ ಆಂಟೊನಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ತಮಿಳಿನಲ್ಲಿ ‘ರಘುತಾತ’ ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಮೈಖಲ್’ ಹೆಸರಿನ ಸಿನಿಮಾಕ್ಕೆ ಬಂಡವಾಳ ಹೂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ