ಹಿರಿಯ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರಿಗೆ ಕೊರೊನಾ ಸೋಂಕು ತಗುಲಿರುವುದರಿಂದ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ. 92 ವರ್ಷದ ಅವರಿಗೆ ನ್ಯುಮೋನಿಯಾ ಕೂಡ ದೃಢಪಟ್ಟಿತ್ತು. ಕೊವಿಡ್ ಪಾಸಿಟಿವ್ ಆಗಿದ್ದ ಸಿಬ್ಬಂದಿಯೋರ್ವರಿಂದ ಲತಾ ಅವರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಅವರು ಆಸ್ಪತ್ರೆಗೆ ದಾಖಲಾದ ನಂತರ ಇಡೀ ದೇಶವೇ ಅವರ ಆರೋಗ್ಯಕ್ಕೆ ಪ್ರಾರ್ಥಿಸುತ್ತಿದೆ. ಕುಟುಂಬ ಮೂಲಗಳು ಹಾಗೂ ಲತಾ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಗಾಯಕಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಮಾಧಾನ ತಂದಿದೆ. ಗಾಯಕಿ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಲು ಕುಟುಂಬಸ್ಥರು ಸೇರಿದಂತೆ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಲತಾ ಅವರ ಸಹೋದರಿ ಹಾಗೂ ಹಿರಿಯ ಗಾಯಕಿ ಆಶಾ ಭೋಸ್ಲೆ (Asha Bosle) ಮಾಹಿತಿ ನೀಡಿ, ಲತಾ ಅವರ ಆರೋಗ್ಯ ಸುಧಾರಣೆಗೆ ಅವರ ಮನೆಯಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇಟೈಮ್ಸ್ ಜತೆ ಮಾತನಾಡಿರುವ ಆಶಾ ಭೋಸ್ಲೆ, ‘‘ಆರೋಗ್ಯ ಸುಧಾರಣೆಗೆ ಲತಾ ಅವರ ಮನೆಯಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಶಿವ ರುದ್ರರನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ’’ ಎಂದಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಮಾತನಾಡಿ, ಲತಾ ಅವರ ಆರೋಗ್ಯ ಸುಧಾರಣೆಯಾಗುತ್ತಿದೆ ಎಂದು ಮಾಹಿತಿ ನೀಡಿದ್ದರು. ಅಲ್ಲದೇ ಆಸ್ಪತ್ರೆಯವರಿಗೆ ಲತಾ ಅವರ ಆರೋಗ್ಯದ ಕುರಿತು ಆಗಾಗ ಮಾಹಿತಿ ನೀಡುತ್ತಿರುವಂತೆ ಸೂಚಿಸಿದ್ದ ಸಚಿವರು, ಅಭಿಮಾನಿಗಳು ಅವರ ಆರೋಗ್ಯ ಚೇತರಿಕೆಯ ಸುದ್ದಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿಸಿದ್ದರು.
ಲತಾ ಅವರ ಆರೋಗ್ಯದ ಕುರಿತು ಹಬ್ಬಿದೆ ಸುಳ್ಳು ಸುದ್ದಿ; ಕುಟುಂಬದವರ ಸ್ಪಷ್ಟನೆ:
ಲತಾ ಮಂಗೇಶ್ಕರ್ ಅವರ ಆರೋಗ್ಯ ಹದಗೆಡುತ್ತಿದೆ ಎಂಬ ಸುಳ್ಳುಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಲತಾ ಅವರ ವಕ್ತಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಲತಾ ಅವರ ಆರೋಗ್ಯ ಹದಗೆಡುತ್ತಿದೆ ಎಂಬ ಸುದ್ದಿ ನಿಜಕ್ಕೂ ಬೇಸರ ತರಿಸುವಂಥದ್ದು. ಯಾಕೆಂದರೆ ಅದು ನಿಜವಲ್ಲ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಆದಷ್ಟು ಬೇಗ ಅವರು ಗುಣಮುಖರಾಗಿ ಮನೆಗೆ ಮರಳಲಿ ಅಂತ ಎಲ್ಲರೂ ಪ್ರಾರ್ಥಿಸಿ’ ಎಂದು ವಕ್ತಾರರು ಹೇಳಿದ್ದಾರೆ. ಲತಾ ಬೇಗ ಚೇತರಿಸಿಕೊಳ್ಳಲಿ ಎಂದು ಅನೇಕ ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಇದನ್ನೂ ಓದಿ:
ಲತಾ ಮಂಗೇಶ್ಕರ್ ಆರೋಗ್ಯದ ಬಗ್ಗೆ ಹಬ್ಬಿದೆ ಸುಳ್ಳು ಸುದ್ದಿ; ಐಸಿಯುನಲ್ಲಿರುವ ಅವರ ಸ್ಥಿತಿ ನಿಜಕ್ಕೂ ಹೇಗಿದೆ?