
ಖ್ಯಾತ ಹಿರಿಯ ನಟ ಪ್ರದೀಪ್ ರಾವತ್ (Pradeep Rawat) ಅಗಲಿಕೆಯ ನಂತರ ಇಡೀ ಚಿತ್ರರಂಗ ಹಾಗೂ ಕುಟುಂಬ ನೋವಿನಲ್ಲಿ ಇದೆ. ಈ ಮಧ್ಯೆ ಅವರ ಮನೆಗೆ ಪಾಪರಾಜಿಗಳು ಆಗಮಿಸುತ್ತಿದ್ದಾರೆ. ಈ ವೇಳೆ ಅವರ ಪುತ್ರ ವಿಕ್ರಮಾದಿತ್ಯ ರಾವತ್ ಕಾಣಿಸಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಕ್ಯಾಮೆರಾಗಳ ಮುಂದೆ ಸಣ್ಣದಾಗಿ ನಕ್ಕಂತೆ ಕಾಣಿಸಿಕೊಂಡ ವಿಕ್ರಮಾದಿತ್ಯ ಅವರ ನಡೆಗೆ ನೆಟ್ಟಿಗರು ಕಠೋರ ಕಾಮೆಂಟ್ಗಳ ಮೂಲಕ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.
ಮತ್ತೊಂದು ವಿಡಿಯೋದಲ್ಲಿ ತಂದೆಯ ಅಂತಿಮ ಸಂಸ್ಕಾರ ನೆರವೇರಿಸುವಾಗ ವಿಕ್ರಮಾದಿತ್ಯ ಅವರು ಕಣ್ಣೀರಿಟ್ಟು ಕಂಗಾಲಾಗಿದ್ದು ಕಂಡುಬಂದಿದೆ. ಕ್ಯಾಮೆರಾಗಳ ಸಮ್ಮುಖದಲ್ಲಿದ್ದಾಗ ಉಂಟಾದ ನರ್ವಸ್ನೆಸ್ ಹಾಗೂ ಏನು ಮಾಡಬೇಕೆಂದು ತಿಳಿಯದ ಸಂದರ್ಭದಲ್ಲಿ ಹೊರಬಂದ ಪ್ರತಿಕ್ರಿಯೆಯನ್ನು ಇಟ್ಟುಕೊಂಡು, ಒಬ್ಬ ವ್ಯಕ್ತಿಯ ದುಃಖ ಮತ್ತು ಭಾವನೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನಿರ್ಧರಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಮೂಡಿವೆ. ದುಃಖದ ವಾತಾವರಣದಲ್ಲಿದ್ದಾಗ ಪ್ರತಿಯೊಬ್ಬ ವ್ಯಕ್ತಿಯು ಒಂದೇ ರೀತಿಯಾಗಿ ಪ್ರತಿಕ್ರಿಯಿಸುವುದಿಲ್ಲ ಎಂಬ ಕನಿಷ್ಠ ಮಾನವೀಯತೆಯನ್ನು ಅರ್ಥೈಸಿಕೊಳ್ಳಬೇಕು ಎಂದು ಹಲವರು ಅವರ ಬೆಂಬಲಕ್ಕೆ ನಿಂತಿದ್ದಾರೆ.
‘ಗಜನಿ’, ‘ಲಗಾನ್’ ಹಾಗೂ ಮಹಾಭಾರತ ಧಾರಾವಾಹಿಯ ಅಶ್ವತ್ಥಾಮ ಪಾತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ಹಿರಿಯ ನಟ ಪ್ರದೀಪ್ ರಾವತ್ (74) ಅವರು ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಇತ್ತೀಚೆಗೆ ಚಿಕಿತ್ಸೆ ಫಲಕಾರಿಯಾಗದೆ ಮುಂಬೈನಲ್ಲಿ ಕೊನೆಯುಸಿರೆಳೆದರು. ತಮ್ಮ ವಿಶಿಷ್ಟ ಖಳನಟನೆಯಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಮನೆಯಲ್ಲಿ ಐಷಾರಾಮಿ ಜೀವನ ನಡೆಸಿದ್ದ ಪ್ರದೀಪ್ ರಾವತ್; ಹೊರ ಬಂದಿದ್ದೇಕೆ??
ಕನ್ನಡದಲ್ಲಿ ದರ್ಶನ್ ಹಾಗೂ ಸುದೀಪ್ ನಟನೆಯ ಸಿನಿಮಾಗಳಲ್ಲಿ ಪ್ರದೀಪ್ ರಾವತ್ ನಟಿಸಿದ್ದರು. ಬಾಲಿವುಡ್ನಲ್ಲಿ ಸಲ್ಮಾನ್ ಖಾನ್, ಆಮಿರ್ ಖಾನ್ಗೆ ಅವರು ಆಪ್ತರಾಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.