ಕೊಲೆಗಾರನಿಗೆ ನಾಯಕನ ಪಟ್ಟ: ‘ಲಾರೆನ್ಸ್ ಆಫ್ ಪಂಜಾಬ್’ ಸಾಕ್ಷ್ಯಚಿತ್ರ ನಿಷೇಧ

Lawrence of Punjab: ನಿಜ ಜೀವನದಲ್ಲಿ ರೌಡಿ, ಭೂಗತ ಪಾತಕಿ, ಕೊಲೆಗಾರರ ಆಗಿರುವವನನ್ನು ‘ನಾಯಕ’ನನ್ನಾಗಿಸಲಾಗುತ್ತಿದೆ. ಇಂಥಹದೇ ಥೀಮ್​​ನ ಒಂದು ಡಾಕ್ಯು ಸೀರೀಸ್ ಒಂದು ಬಿಡುಗಡೆ ಆಗಲಿದ್ದು, ಅದರ ಹೆಸರು ‘ಲಾರೆನ್ಸ್ ಆಫ್ ಪಂಜಾಬ್’ (Lawrence of Punjab) ಇದರ ನಿಷೇಧಕ್ಕೆ ಈಗ ಒತ್ತಾಯ ಕೇಳಿಬಂದಿತ್ತು. ಅದರಂತೆ ಸರ್ಕಾರ ಇದೀಗ ಡಾಕ್ಯು ಸೀರೀಸ್ ಬಿಡುಗಡೆಗೆ ನಿಷೇಧ ಹೇರಿದೆ.

ಕೊಲೆಗಾರನಿಗೆ ನಾಯಕನ ಪಟ್ಟ: ‘ಲಾರೆನ್ಸ್ ಆಫ್ ಪಂಜಾಬ್’ ಸಾಕ್ಷ್ಯಚಿತ್ರ ನಿಷೇಧ
Lawrence Bishnoi

Updated on: Apr 24, 2026 | 1:33 PM

‘ನಾಯಕ’ ಎಂದರೆ ಒಳ್ಳೆಯವ, ಮಹಿಳೆಯರ ಘನತೆ ಕಾಪಾಡುವವ, ಶಿಷ್ಟರ ರಕ್ಷಣೆ ಮಾಡುವಾತ, ಸುಳ್ಳು ಹೇಳದವ, ಅನ್ಯಾಯದ ವಿರದ್ಧ ಹೋರಾಡುವವ, ಹಣಕ್ಕಾಗಿ ತನ್ನ ಆದರ್ಶ ತ್ಯಜಿಸದವ, ಹಿಂಸೆಯ ವಿರುದ್ಧ ನಿಲ್ಲುವವ. ಆದರೆ ಇತ್ತೀಚೆಗಿನ ಸಿನಿಮಾಗಳಲ್ಲಿ ‘ನಾಯಕ’ ಎಂದರೆ ರೌಡಿ, ಮಹಿಳಾ ಪೀಡಕ, ಹಿಂಸೆಯನ್ನು ಎಂಜಾಯ್ ಮಾಡುವವ ಎಂದಾಗಿದೆ. ಆದರೆ ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ನಿಜ ಜೀವನದಲ್ಲಿ ರೌಡಿ, ಭೂಗತ ಪಾತಕಿ, ಕೊಲೆಗಾರರ ಆಗಿರುವವನನ್ನು ‘ನಾಯಕ’ನನ್ನಾಗಿಸಲಾಗುತ್ತಿದೆ. ಇಂಥಹದೇ ಥೀಮ್​​ನ ಒಂದು ಡಾಕ್ಯು ಸೀರೀಸ್ ಒಂದು ಬಿಡುಗಡೆ ಆಗಲಿದ್ದು, ಅದರ ಹೆಸರು ‘ಲಾರೆನ್ಸ್ ಆಫ್ ಪಂಜಾಬ್’ (Lawrence of Punjab) ಇದರ ನಿಷೇಧಕ್ಕೆ ಈಗ ಒತ್ತಾಯ ಕೇಳಿಬಂದಿತ್ತು. ಅದರಂತೆ ಸರ್ಕಾರ ಇದೀಗ ಡಾಕ್ಯು ಸೀರೀಸ್ ಬಿಡುಗಡೆಗೆ ನಿಷೇಧ ಹೇರಿದೆ.

‘ಲಾರೆನ್ಸ್ ಆಫ್ ಪಂಜಾಬ್’ ಡಾಕ್ಯು ಸೀರೀಸ್ (ಸಾಕ್ಷ್ಯ ಸರಣಿ) ಕುಖ್ಯಾತ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಕುರಿತಾಗಿದ್ದಾಗಿದೆ. ಸಾಕ್ಷ್ಯ ಸರಣಿ ಆಗಿದ್ದು, ನಿಜ ವ್ಯಕ್ತಿ, ದೃಶ್ಯಗಳು, ವಿಡಿಯೋಗಳ ಜೊತೆಗೆ ಚಿತ್ರೀಕರಿಸಿದ ದೃಶ್ಯಗಳನ್ನು ಸಹ ಒಳಗೊಂಡಿತ್ತು. ಈ ಸಾಕ್ಷ್ಯ ಸರಣಿಯಲ್ಲಿ ಲಾರೆನ್ಸ್ ಬಿಷ್ಣೋಯಿಯನ್ನು ‘ಹೀರೋ’ ಎಂಬಂತೆ ಬಿಂಬಿಸಲಾಗಿದೆ ಎಂಬ ಆರೋಪವಿತ್ತು. ಇಲ್ಲಿ ತಿಳಿಯಬೇಕಾದ ವಿಷಯವೆಂದರೆ ಲಾರೆನ್ಸ್ ಬಿಷ್ಣೊಯಿ ಪಾತಕಿ ಆಗಿದ್ದು, ಆತನ ಮೇಲೆ 80ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಬಹುತೇಕ ಕ್ರಿಮಿನಲ್ ಪ್ರಕರಣಗಳು. ಕೊಲೆ, ಅತ್ಯಾಚಾರ, ವಂಚನೆ, ಬೆದರಿಕೆ, ವಸೂಲಿ, ಸುಲಿಗೆ ಇನ್ನೂ ಹಲವು. ಆರು ಗಂಭೀರ ಪ್ರಕರಣಗಳಲ್ಲಿ ಲಾರೆನ್ಸ್ ಅಪರಾಧಿ ಎಂದು ಈಗಾಗಲೇ ಘೋಷಣೆ ಸಹ ಆಗಿದೆ. ಇಂಥಹಾ ವ್ಯಕ್ತಿಯ ಬಗ್ಗೆ ಇದೀಗ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ.

‘ಲಾರೆನ್ಸ್ ಆಫ್ ಪಂಜಾಬ್’ ಡಾಕ್ಯುಸೀರಿಸ್ ಬಿಡುಗಡೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಈ ಕುರಿತು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಹ ಸಲ್ಲಿಸಲಾಗಿತ್ತು. ಸ್ವತಃ ಪಂಜಾಬ್ ಕಾಂಗ್ರೆಸ್, ಈ ಕುರಿತು ಅರ್ಜಿ ಸಲ್ಲಿಸಿ, ನಿಷೇಧಕ್ಕೆ ಒತ್ತಾಯಿಸಿತ್ತು. ಲಾರೆನ್ಸ್ ಬಿಷ್ಣೋಯಿ ಸಹೋದರ ಸಂಬಂಧಿ ಸಹ ಡಾಕ್ಯುಸೀರೀಸ್ ಬಿಡುಗಡೆಗೆ ವಿರೋಧಿಸಿದ್ದರು. ಅಲ್ಲದೆ, ಬಿಷ್ಣೋಯಿ ಗ್ಯಾಂಗ್​​ನಿಂದ ಹತ್ಯೆಯಾದ ಖ್ಯಾತ ಗಾಯಕ, ಪಂಜಾಬ್ ಕಾಂಗ್ರೆಸ್ ಯುವ ಮುಖಂಡ ಸಿಧು ಮೂಸೆವಾಲ ತಂದೆಯವರೂ ಸಹ ಈ ಡಾಕ್ಯು ಸೀರೀಸ್ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:‘ರಾಜ ಶಿವಾಜಿ’ ಸಿನಿಮಾದ ಕಲಾವಿದರಿಗೆ ಸಿಕ್ಕಿದೆ ಭಾರೀ ಸಂಭಾವನೆ

ಲಾರೆನ್ಸ್ ಬಿಷ್ಣೋಯ್ ವಿರುದ್ಧದ ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಇಂತಹ ಸಮಯದಲ್ಲಿ ಈ ಸರಣಿ ಬಿಡುಗಡೆ ಮಾಡುವುದು ಸರಿಯಲ್ಲ ಮತ್ತು ಇದು ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಬಹುದು ಎಂಬ ಆತಂಕವನ್ನು ಅವರ ಕುಟುಂಬ ಸದಸ್ಯರು ವ್ಯಕ್ತಪಡಿಸಿದ್ದರು, ಪಂಜಾಬ್ ಪೊಲೀಸರು ಕೂಡ ಈ ಸಾಕ್ಷ್ಯಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಈ ಸರಣಿಯು ಸಮಾಜದಲ್ಲಿ ಅಪರಾಧಗಳನ್ನು ವೈಭವೀಕರಿಸಬಹುದು ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಹುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದು ಇದನ್ನು ನಿರ್ಬಂಧಿಸುವಂತೆ ಕೋರಿತ್ತು.

ಅದರಂತೆ, ‘ಲಾರೆನ್ಸ್ ಆಫ್ ಬಿಷ್ಣೋಯಿ’ ಸಾಕ್ಷ್ಯ ಚಿತ್ರ ನಿಷೇಧಕ್ಕೆ ಒತ್ತಾಯಿಸಿ ಹಾಕಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಈ ಡಾಕ್ಯುಸರಣಿಯನ್ನು ನಿಷೇಧ ಮಾಡುವುದಾಗಿ ಹರಯಾಣ ಹೈಕೋರ್ಟ್ ಗೆ ಮಾಹಿತಿ ನೀಡಿದೆ. ‘ಲಾರೆನ್ಸ್ ಆಫ್ ಬಿಷ್ಣೋಯಿ’ ಡಾಕ್ಯು ಸೀರೀಸ್ ಏಪ್ರಿಲ್ 27ರಂದು ಬಿಡುಗಡೆ ಆಗಬೇಕಿತ್ತು. ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ತೋರಿಸಿರುವಂತೆ ಕೆಲವು ಪೊಲೀಸ್ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಪಂಜಾಬ್​ನ ಭೂತಕ ಗ್ಯಾಂಗ್​​ಗಳು ಹಾಗೂ ಲಾರೆನ್ಸ್ ಬಿಷ್ಣೋಯಿ ಬಗ್ಗೆ ಮಾತನಾಡಿದ್ದಾರೆ. ಬಿಷ್ಣೋಯಿಯನ್ನು ಅದ್ಧೂರಿ ಹಿನ್ನೆಲೆ ಸಂಗೀತದೊಂದಿಗೆ ‘ಹೀರೋ’ ರೀತಿ ತೋರಿಸಿರುವ ದೃಶ್ಯಗಳು ಸಹ ಟ್ರೈಲರ್​​ನಲ್ಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us