ಮಹೇಶ್ ಬಾಬು ಸಿನಿಮಾ ವಿರುದ್ಧ ಕತೆ ಕದ್ದ ಆರೋಪ, ಸಂಕಷ್ಟದಲ್ಲಿ ನಿರ್ದೇಶಕ

|

Updated on: Feb 01, 2024 | 11:53 PM

Mahesh Babu: ಮಹೇಶ್ ಬಾಬು ನಟನೆಯ 2015ರ ಸಿನಿಮಾ ‘ಶ್ರೀಮಂತುಡು’ ವಿವಾದದಲ್ಲಿ ಸಿಲುಕಿದೆ. ಸಿನಿಮಾದ ನಿರ್ದೇಶಕ ಕೊರಟಾಲ ಶಿವ ಕಾನೂನು ಕ್ರಮ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಹೇಶ್ ಬಾಬು ಸಿನಿಮಾ ವಿರುದ್ಧ ಕತೆ ಕದ್ದ ಆರೋಪ, ಸಂಕಷ್ಟದಲ್ಲಿ ನಿರ್ದೇಶಕ
Follow us on

ಮಹೇಶ್ ಬಾಬು (Mahesh Babu) ನಟನೆಯ ‘ಶ್ರೀಮಂತುಡು’ ಸಿನಿಮಾ 2015ರಲ್ಲಿ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿತ್ತು. ಆದರೆ ಈಗ ಮತ್ತೆ ಈ ಸಿನಿಮಾ ಮುನ್ನೆಲೆಗೆ ಬಂದಿದೆ. ‘ಶ್ರೀಮಂತುಡು’ ಸಿನಿಮಾವನ್ನು ನಿರ್ದೇಶಕ ಕೊರಟಾಲ ಶಿವ ನಿರ್ದೇಶನ ಮಾಡಿದ್ದರು. ಆದರೆ ಈ ಸಿನಿಮಾದ ಕತೆಯನ್ನು ಅವರು ಬೇರೊಂದು ಕತೆಯಿಂದ ಕದ್ದಿದ್ದಾರೆಂದು ಆರೋಪಿಸಲಾಗಿದ್ದು, ಇದೀಗ ಕಾನೂನು ಕ್ರಮ ಎದುರಿಸುವ ಪರಿಸ್ಥಿತಿ ನಿರ್ದೇಶಕ ಕೊರಟಾಲ ಶಿವಗೆ ಎದುರಾಗಿದೆ. ಇದೇ ಪ್ರಕರಣದಲ್ಲಿ ಆರೋಪಿ ಆಗಿದ್ದ ಮಹೇಶ್ ಬಾಬುಗೆ ನಿರಾಳತೆಯನ್ನು ನ್ಯಾಯಾಲಯ ನೀಡಿದೆ.

2015ರಲ್ಲಿ ಈ ಸಿನಿಮಾ ಬಿಡುಗಡೆ ಆದ ಎಂಟು ತಿಂಗಳ ಬಳಿಕ ಕತೆಗಾರ ಡಬ್ಲುಬಿ ವಿಲಿಯಮ್ಸ್ (ಶರತ್ ಚಂದ್ರ) ಎಂಬುವರು, ‘ಶ್ರೀಮಂತುಡು’ ಸಿನಿಮಾದ ಕತೆ ತಾವು ಸ್ವಾತಿ ಮ್ಯಾಗಜೀನ್​ಗಾಗಿ ಬರೆದಿದ್ದ ‘ಚಚ್ಚೆಂತ ಪ್ರೇಮ’ ಕತೆಯಿಂದ ಕದಿಯಲಾಗಿದೆ. ಆದರೆ ಇದಕ್ಕೆ ತಮ್ಮಿಂದ ಯಾವುದೇ ಅನುಮತಿಯನ್ನು ನಿರ್ದೇಶಕ ಕೊರಟಾಲ ಶಿವ ಪಡೆದಿಲ್ಲ ಎಂದು ಆರೋಪಿಸಿ, ನ್ಯಾಮಿಪಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ದೂರಿನಲ್ಲಿ ನಿರ್ಮಾಪಕರಾದ ನವೀನ್ ಹಾಗೂ ಮಹೇಶ್ ಬಾಬು ಹೆಸರು ಸಹ ಉಲ್ಲೇಖಿತವಾಗಿತ್ತು.

ಇದನ್ನೂ ಓದಿ:ವೈರಲ್ ಆಗಿದ್ದ ‘ಕುರ್ಚಿ ತಾತ’ ಬಂಧನ, ಮಹೇಶ್ ಬಾಬುನೇ ಕಾರಣ?

ಪ್ರಕರಣ ಆಲಿಸಿದ ನ್ಯಾಮಪಲ್ಲಿ ನ್ಯಾಯಾಲಯ ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಘನೆ ಆಗಿದೆ ಎಂದಿತ್ತು. ಬಳಿಕ ಕೊರಟಾಲ ಶಿವ ಈ ಪ್ರಕರಣವನ್ನು ಹೈಕೋರ್ಟ್​ಗೆ ಕೊಂಡೊಯ್ದರು. ಅಲ್ಲಿ ನಿರ್ಮಾಪಕರಾದ ಮಹೇಶ್ ಬಾಬು ಹಾಗೂ ನವೀನ್ ಅವರನ್ನು ಪ್ರಕರಣದಿಂದ ಕೈಬಿಟ್ಟಿದ್ದ ನ್ಯಾಯಾಲಯ ಕೊರಟಾಲ ಶಿವ ಅವರನ್ನು ಆರೋಪಿ ಸ್ಥಾನದಲ್ಲಿ ಉಳಿಸಿಕೊಂಡಿತ್ತು. ಬಳಿಕ ಕೊರಟಾಲ ಶಿವ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಅಲ್ಲಿಯೂ ಸಹ ಅವರಿಗೆ ಹಿನ್ನಡೆ ಆಗಿದ್ದು, ನ್ಯಾಮಪಲ್ಲಿ ನ್ಯಾಯಾಲಯ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಅಲ್ಲದೆ ನಿರ್ದೇಶಕ ಕೊರಟಾಲ ಶಿವ ಕಾನೂನು ಕ್ರಮ ಎದುರಿಸಬೇಕು ಎಂದಿದೆ.

‘ಶ್ರೀಮಂತುಡು’ ಸಿನಿಮಾ ನಿರ್ಮಾಣ ಮಾಡಿದ್ದ ಮೈತ್ರಿ ಮೂವಿ ಮೇಕರ್ಸ್ ಇದೀಗ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ‘ಶ್ರೀಮಂತುಡು’ ಸಿನಿಮಾ ಹಾಗೂ ‘ಚಚ್ಚೆಂತ ಪ್ರೇಮ’ ಕತೆ ಎರಡೂ ಸಹ ಸಾರ್ವಜನಿಕವಾಗಿ ಲಭ್ಯವಿವೆ. ಎರಡೂ ಕೃತಿಗಳು ಯಾವುದೇ ಅತಿಕ್ರಮಣವಿಲ್ಲದೆ ವಿಭಿನ್ನ ನಿರೂಪಣೆಗಳನ್ನು ಒಳಗೊಂಡಿವೆ. ಪುಸ್ತಕ ಮತ್ತು ಚಲನಚಿತ್ರವನ್ನು ಪರಿಶೀಲಿಸುವವರು ಇದನ್ನು ಸುಲಭವಾಗಿ ಗ್ರಹಿಸಬಹುದು. ಈ ಪ್ರಕರಣವು ಪ್ರಸ್ತುತ ಕಾನೂನು ಪರಿಶೀಲನೆಯಲ್ಲಿದೆ, ಪ್ರಕರಣದಲ್ಲಿ ಈವರೆಗೆ ಯಾವುದೇ ತೀರ್ಪುಗಳು ಬಂದಿಲ್ಲ. ಅಕಾಲಿಕ ತೀರ್ಮಾನಗಳಿಂದ ದೂರವಿರಲು ನಾವು ಮಾಧ್ಯಮಗಳ ಬಳಿ ಮನವಿ ಮಾಡುತ್ತೇವೆ. ‘ಶ್ರೀಮಂತುಡು’ ಚಿತ್ರದ ವಿಭಿನ್ನತೆ ಮತ್ತು ಗ್ರಾಮವನ್ನು ದತ್ತು ತೆಗೆದುಕೊಳ್ಳುವ ನಮ್ಮ ಮೂಲ ಕಲ್ಪನೆಗೆ ನಾವು ದೃಢವಾಗಿ ನಿಲ್ಲುತ್ತೇವೆ ಮತ್ತು ಎರಡು ಕೃತಿಗಳನ್ನು ವೈಯಕ್ತಿಕವಾಗಿ ಮೌಲ್ಯಮಾಪನ ಮಾಡಲು ಆಸಕ್ತಿ ಹೊಂದಿರುವವರನ್ನು ಪ್ರೋತ್ಸಾಹಿಸುತ್ತೇವೆ. ನ್ಯಾಯಸಮ್ಮತತೆ ಮತ್ತು ಸಮಗ್ರತೆಯ ತತ್ವಗಳನ್ನು ಗೌರವಿಸುವ, ಕಾನೂನು ಪ್ರಕ್ರಿಯೆಯಲ್ಲಿ ತಾಳ್ಮೆ ಮತ್ತು ನಂಬಿಕೆ ಇಡಬೇಕೆಂಬುದು ನಮ್ಮ ಮನವಿಯಾಗಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ