ಬೆಂಗಳೂರಿನ ಐಕಾನಿಕ್ ಚಿತ್ರಮಂದಿರ ಇದ್ದ ಜಾಗದಲ್ಲೇ ಹೊಸ ಚಿತ್ರಮಂದಿರ ನಿರ್ಮಿಸಿದ ಮಹೇಶ್ ಬಾಬು

Mahesh Babu in Bengaluru: ಮಹೇಶ್ ಬಾಬು ತೆಲುಗು ಚಿತ್ರರಂಗದ ಸ್ಟಾರ್ ನಟರಾಗಿರುವ ಜೊತೆಗೆ ಉದ್ಯಮಿ ಸಹ ಹೌದು. ಇದೀಗ ಅವರು ತಮ್ಮ ಉದ್ಯಮವನ್ನು ಬೆಂಗಳೂರಿಗೂ ವಿಸ್ತರಿಸುತ್ತಿದ್ದಾರೆ. ಮಹೇಶ್ ಬಾಬು ಅವರು ಎಎಂಬಿ ಸಿನಿಮಾಸ್ ಹೆಸರಿನ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಉದ್ಯಮವನ್ನು ಹೊಂದಿದ್ದು, ಇದೀಗ ಎಎಂಬಿ ಸಿನಿಮಾಸ್ ಅನ್ನು ಬೆಂಗಳೂರಿನಲ್ಲೂ ಪ್ರಾರಂಭ ಮಾಡುತ್ತಿದ್ದಾರೆ.

ಬೆಂಗಳೂರಿನ ಐಕಾನಿಕ್ ಚಿತ್ರಮಂದಿರ ಇದ್ದ ಜಾಗದಲ್ಲೇ ಹೊಸ ಚಿತ್ರಮಂದಿರ ನಿರ್ಮಿಸಿದ ಮಹೇಶ್ ಬಾಬು
Mahesh Babu

Updated on: Dec 11, 2025 | 5:09 PM

ಮಹೇಶ್ ಬಾಬು (Mahesh Babu) ತೆಲುಗು ಚಿತ್ರರಂಗದ ಸ್ಟಾರ್ ನಟ. ಇದೀಗ ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ವಾರಣಾಸಿ’ ಸಿನಿಮಾ ಮೂಲಕ ಪ್ಯಾನ್ ವರ್ಲ್ಡ್ ಸಹ ಆಗಲಿದ್ದಾರೆ ಮಹೇಶ್ ಬಾಬು. ಸಿನಿಮಾದ ಚಿತ್ರೀಕರಣ ಭರದಿಂದ ಚಾಲ್ತಿಯಲ್ಲಿದೆ. ಇತ್ತೀಚೆಗಷ್ಟೆ ಸಿನಿಮಾದ ಟೀಸರ್ ಸಹ ಬಿಡುಗಡೆ ಆಗಿದೆ. ಅಂದಹಾಗೆ ಮಹೇಶ್ ಬಾಬು ಸ್ಟಾರ್ ನಟ ಮಾತ್ರವೇ ಅಲ್ಲ, ಉದ್ಯಮಿ ಸಹ, ಹಲವು ಉದ್ಯಮಗಳಲ್ಲಿ ಮಹೇಶ್ ಬಾಬು ಹೂಡಿಕೆ ಮಾಡಿದ್ದಾರೆ. ಹಲವು ಚಿತ್ರಮಂದಿರಗಳನ್ನು ಸಹ ಮಹೇಶ್ ಬಾಬು ಹೊಂದಿದ್ದಾರೆ. ಇದೀಗ ತಮ್ಮ ಉದ್ಯಮವನ್ನು ಬೆಂಗಳೂರಿಗೂ ವಿಸ್ತರಿಸಿದ್ದಾರೆ ಮಹೇಶ್ ಬಾಬು.

ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಈಗಾಗಲೇ ಹೈದರಾಬಾದ್ ಸೇರಿದಂತೆ ಕೆಲವೆಡೆ ಅತ್ಯುತ್ತಮ ಸಿನಿಮಾ ಅನುಭವವನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್​ ಮಾದರಿಯ ಚಿತ್ರಮಂದಿರವಾಗಿದ್ದು ಸಿನಿಮಾ ಜೊತೆಗೆ ಊಟ-ಉಪಹಾರಗಳ ಸೇವೆಯನ್ನೂ ಸಹ ನೀಡುತ್ತದೆ. ಇದೀಗ ಈ ಎಎಂಬಿ ಸಿನಿಮಾಸ್ ಬೆಂಗಳೂರಿನಲ್ಲಿ ಪ್ರಾರಂಭ ಆಗುತ್ತಿದೆ. ಅದೂ ಬೆಂಗಳೂರಿನ ಐತಿಹಾಸಿಕ ಚಿತ್ರಮಂದಿರ ಇದ್ದ ಜಾಗದಲ್ಲಿಯೇ ಮಹೇಶ್ ಬಾಬು ತಮ್ಮ ಹೊಸ ಚಿತ್ರಮಂದಿರವನ್ನು ಪ್ರಾರಂಭಿಸುತ್ತಿದ್ದಾರೆ.

ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಚಿತ್ರಮಂದಿರ ಮತ್ತು ಮೊಟ್ಟ ಮೊದಲ ಸಿನೆರಾಮ್ ತಂತ್ರಜ್ಞಾನ ಹೊಂದಿದ್ದ ಚಿತ್ರಮಂದಿರವಾಗಿದ್ದ ಕಪಾಲಿ ಚಿತ್ರಮಂದಿರ ಇದ್ದ ಜಾಗದಲ್ಲಿಯೇ ಮಹೇಶ್ ಬಾಬು ಅವರ ಹೊಸ ಚಿತ್ರಮಂದಿರ ಪ್ರಾರಂಭ ಆಗುತ್ತಿದೆ. ಈಗ ಪ್ರಾರಂಭ ಆಗುತ್ತಿರುವ ಚಿತ್ರಮಂದಿರಕ್ಕೆ ‘ಎಎಂಬಿ ಸಿನಿಮಾಸ್ ಕಪಾಲಿ’ ಎಂದೇ ಹೆಸರಿಡಲಾಗಿದೆ. ಆ ಮೂಲಕ ಕಪಾಲಿ ನೆನಪನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಮಹೇಶ್ ಬಾಬು. ಡಿಸೆಂಬರ್ 16 ರಂದು ಈ ಹೊಸ ಚಿತ್ರಮಂದಿರದ ಉದ್ಘಾಟನೆ ನಡೆಯಲಿದ್ದು, ಮಹೇಶ್ ಬಾಬು ಸಹ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ:‘ಅವತಾರ್ 3’ ಸಿನಿಮಾನಲ್ಲಿ ಮಹೇಶ್ ಬಾಬು? ಇದೆಂಥ ಅಚ್ಚರಿ

ಈಗ ಪ್ರಾರಂಭವಾಗುತ್ತಿರುವ ಈ ಚಿತ್ರಮಂದಿರ ದಕ್ಷಿಣ ಭಾರತದ ಮೊಟ್ಟ ಮೊದಲ ಡಾಲ್ಬಿ ವಿಷನ್ ವಿಥ್ ಅಟ್ಮೋಸ್ ಚಿತ್ರಮಂದಿರ ಆಗಿರಲಿದೆ. ಪ್ರೇಕ್ಷಕರಿಗೆ ಅತ್ಯುತ್ತಮ ಸಿನಿಮಾ ಅನುಭವ ನೀಡುವ ಭರವಸೆಯನ್ನು ಮಹೇಶ್ ಬಾಬು ನೀಡಿದ್ದಾರೆ. 60 ಅಡಿ ಅಗಲದ ಉದ್ದನೆಯ ಒಂಬತ್ತು ಸ್ಕ್ರೀನ್​​​ಗಳನ್ನು ಎಎಂಬಿ ಸಿನಿಮಾಸ್ ಒಳಗೊಂಡಿರಲಿದೆ. ಪ್ರತಿ ಸ್ಕ್ರೀನ್​​ನಲ್ಲಿ 600 ಪ್ರೇಕ್ಷಕರು ಒಮ್ಮೆಲೆ ಸಿನಿಮಾ ನೋಡಬಹುದಾಗಿದ್ದು, ಸ್ಕ್ರೀನ್ ಗಳು ಅತ್ಯುತ್ತಮ ವಿಡಿಯೋ ಗುಣಮಟ್ಟವನ್ನು ಹೊಂದಿರಲಿದೆಯಂತೆ. ಆಂಬಿಯಂಟ್ ಲೈಟಿಂಗ್​ ಜೊತೆಗೆ ಅತ್ಯುತ್ತಮ ತಿನಿಸುಗಳನ್ನು ಸಹ ಸವಿಯಬಹುದಾಗಿದೆ.

ಮಹೇಶ್ ಬಾಬು ಅವರ ಎಎಂಬಿ ಸಿನಿಮಾಸ್ ಈಗಾಗಲೇ ಹೈದರಾಬಾದ್​​ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗಷ್ಟೆ ಇನ್ನೊಂದು ಮಲ್ಟಿಪ್ಲೆಕ್ಸ್​ ಅನ್ನು ಸಹ ಹೈದರಾಬಾದ್​​ ನ ಆರ್​​ಟಿಸಿಎಕ್ಸ್​ ರಸ್ತೆಯಲ್ಲಿ ಪ್ರಾರಂಭ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ