ಟಾಲಿವುಡ್ನ ಸ್ಟಾರ್ ನಟ ಮಹೇಶ್ ಬಾಬು ಪಕ್ಕಾ ಫ್ಯಾಮಿಲಿ ಮ್ಯಾನ್. ತಮ್ಮ ಕುಟುಂಬಕ್ಕೆ ಅವರು ಹೆಚ್ಚು ಸಮಯ ನೀಡುತ್ತಾರೆ. ಸಿನಿಮಾ ಕೆಲಸಗಳು ಇಲ್ಲದೇ ಇರುವಾಗ ಅವರು ಸಂಪೂರ್ಣವಾಗಿ ತಮ್ಮ ಕುಟುಂಬದ ಸದಸ್ಯರ ಜೊತೆ ಕಾಲ ಕಳೆಯಲು ಇಷ್ಟಪಡುತ್ತಾರೆ. ಇತ್ತೀಚೆಗೆ ಅವರು ಪ್ರತಿಷ್ಠಿತ ಮ್ಯಾಗಜಿನ್ವೊಂದಕ್ಕೆ ಸಂದರ್ಶನ ನೀಡಿದ್ದು, ತಮ್ಮ ಫ್ಯಾಮಿಲಿ ಬಗ್ಗೆ ಕೆಲವೊಂದು ವಿಚಾರಗಳನ್ನು ಮುಕ್ತವಾಗಿ ಮಾತನಾಡಿದ್ದಾರೆ. ಪತ್ನಿ ನಮ್ರತಾ ಶಿರೋಡ್ಕರ್ ಬಗ್ಗೆಯೂ ಮಹೇಶ್ ಬಾಬು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮಹೇಶ್ ಬಾಬು ಸಿನಿಮಾಗಳು ಟಾಲಿವುಡ್ನಲ್ಲಿ ದೊಡ್ಡ ಮಟ್ಟದ ಬ್ಯುಸಿನೆಸ್ ಮಾಡುತ್ತವೆ. ಅಲ್ಲದೇ ಅವರು ಸ್ವಂತ ಮಲ್ಟಿಪ್ಲೆಕ್ಸ್ ಕೂಡ ಹೊಂದಿದ್ದಾರೆ. ಅನೇಕ ಜಾಹೀರಾತುಗಳಲ್ಲಿ ನಟಿಸುವ ಮೂಲಕ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಾರೆ. ಈ ಎಲ್ಲ ವ್ಯವಹಾರಗಳಲ್ಲೂ ಅವರ ಪತ್ನಿ ಭಾಗಿ ಆಗುತ್ತಾರೆ. ಡೇಟ್ಸ್ಗಳನ್ನೂ ಅವರು ನೋಡಿಕೊಳ್ಳುತ್ತಾರೆ. ಆದರೆ ಒಂದು ವಿಚಾರದಲ್ಲಿ ಮಾತ್ರ ಪತ್ನಿಗೆ ಮಹೇಶ್ ಬಾಬು ಅಧಿಕಾರ ನೀಡಿಲ್ಲ.
ಹೌದು, ಮಹೇಶ್ ಬಾಬು ಅವರು ತಮ್ಮ ಸಿನಿಮಾದ ಕಥೆಗಳನ್ನು ಪತ್ನಿ ಬಳಿ ಚರ್ಚೆ ಮಾಡುವುದೇ ಇಲ್ಲ. ಸ್ಕ್ರಿಪ್ಟ್ ವಿಚಾರದಲ್ಲಿ ನಮ್ರತಾ ತಲೆ ಹಾಕುವಂತಿಲ್ಲ. ಅದನ್ನು ಸ್ವತಃ ಮಹೇಶ್ ಬಾಬು ಹೇಳಿಕೊಂಡಿದ್ದಾರೆ. ‘ಈ ರೀತಿ ಒಂದು ನಿಯಮ ಮಾಡಿಕೊಂಡಿದ್ದೇನೆ. ಸಿನಿಮಾ ಸ್ಕ್ರಿಪ್ಟ್ಗಳ ಬಗ್ಗೆ ನಾನು ನಮ್ರತಾ ಜೊತೆ ಚರ್ಚೆ ಮಾಡುವುದಿಲ್ಲ. ನನ್ನ ಸಿನಿಮಾಗೆ ಕಥೆಗಳನ್ನು ನಾನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಮೊದಲಿನಿಂದ ಇಂದಿನವರೆಗೆ ಇದೇ ರೀತಿ ನಡೆದುಕೊಂಡು ಬಂದಿದೆ’ ಎಂದು ಅವರು ಹೇಳಿದ್ದಾರೆ.
ಮಹೇಶ್ ಬಾಬು ಅವರ ಈ ನಿರ್ಧಾರಕ್ಕೂ ಕಾರಣ ಇದೆ. ಒಂದು ವೇಳೆ ಸ್ಕ್ರಿಪ್ಟ್ ಆಯ್ಕೆಯಲ್ಲಿ ಸೋತರೆ ಅದರ ಸಂಪೂರ್ಣ ಹೊಣೆಯನ್ನು ಮಹೇಶ್ ಬಾಬು ಅವರೇ ಹೊತ್ತುಕೊಳ್ಳುತ್ತಾರೆ. ‘ನನ್ನ ತಪ್ಪಿನಿಂದ ನಾನು ಪಾಠ ಕಲಿಯುತ್ತೇನೆ. ನಂತರ ಬೆಳವಣಿಗೆ ಹೊಂದಿದ್ದೇನೆ’ ಎನ್ನುವ ಅವರು ತಮ್ಮ ಸೋಲಿಗೆ ಬೇರೆಯವರನ್ನು ಹೊಣೆ ಮಾಡಲು ಸಿದ್ಧರಿಲ್ಲ. ಆ ಕಾರಣದಿಂದ ಕಥೆ ಆಯ್ಕೆಯಲ್ಲಿ ಭಾಗಿ ಆಗುವ ಅಧಿಕಾರವನ್ನು ಹೆಂಡತಿಗೆ ನೀಡಿಲ್ಲ.
ಸದ್ಯ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ಕೀರ್ತಿ ಸುರೇಶ್ ಅಭಿನಯಿಸಿದ್ದಾರೆ. 2022ರ ಜ.13ರಂದು ಆ ಚಿತ್ರ ಬಿಡುಗಡೆ ಆಗಲಿದೆ. ಬಳಿಕ ರಾಜಮೌಳಿ ಮತ್ತು ತ್ರಿವಿಕ್ರಮ್ ಜೊತೆ ಮಹೇಶ್ ಬಾಬು ಸಿನಿಮಾ ಮಾಡಲಿದ್ದಾರೆ.
ಇದನ್ನೂ ಓದಿ:
ದಳಪತಿ ವಿಜಯ್ ಮತ್ತು ಮಹೇಶ್ ಬಾಬು ಪತ್ನಿ ನಮ್ರತಾ ಹಳೇ ವಿಚಾರ ಎಳೆದು ತಂದ ಫ್ಯಾನ್ಸ್
ಇಂಗ್ಲಿಷ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಮಹೇಶ್ ಬಾಬು ಮಗಳು? ನಟನ ಅಚ್ಚರಿಯ ಹೇಳಿಕೆ