
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿಗೆ ಲೈಂಗಿಕ ಕಿರುಕುಳು ನೀಡಿದ ಪ್ರಕರಣದಲ್ಲಿ 6 ಪ್ರಮುಖ ಆರೋಪಿಗಳಿಗೆ ಎರ್ನಾಕುಲಮ್ ಕೋರ್ಟ್ ಶಿಕ್ಷೆ ನೀಡಿದೆ. ಎ1 ಮತ್ತು ಎ6 ವರೆಗಿನ ಅಪರಾಧಿಗಳಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ (Rigorous Imprisonment) ಹಾಗೂ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. 2017ರಲ್ಲಿ ನಟಿಯ ಮೇಲೆ ಚಲಿಸುವ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಇದೇ ಪ್ರಕರಣದಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತ ನಟ ದಿಲೀಪ್ (Malayalam Actor Dileep) ಕೂಡ ಆರೋಪಿ ಆಗಿದ್ದರು. ಆದರೆ ಅವರ ಮೇಲಿನ ಆರೋಪ ಸಾಬೀತಾಗಿಲ್ಲ. ಹಾಗಾಗಿ ದಿಲೀಪ್ ಅವರು ನಿರ್ದೋಷಿ ಎಂದು ಇತ್ತೀಚೆಗೆ ಕೋರ್ಟ್ ತೀರ್ಪು ನೀಡಿತ್ತು.
ಪಲ್ಸರ್ ಸುನಿ (37), ಮಾರ್ಟಿನ್ ಆಂಟೊನಿ (33), ಬಿ. ಮಣಿಕಂದನ್ (37), ವಿಜೇಶ್ ವಿ.ಪಿ. (38), ಸಲೀಮ್ ಹೆಚ್. (30) ಹಾಗೂ ಪ್ರದೀಪ್ (31) ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಪರಾಧಿಗಳು ಎಂದು ನ್ಯಾಯಾಲಯದ ವಿಚಾರಣೆಯಲ್ಲಿ ಸಾಬೀತಾಗಿದೆ. 2017ರ ಫೆಬ್ರವರಿಯಲ್ಲಿ ಖ್ಯಾತ ನಟಿಯನ್ನು ಅಪಹರಣ ಮಾಡಿ, ಲೈಂಗಿಕ ಕಿರುಕುಳ ನೀಡಿದ ಆರೋಪ ಈ ಆರು ಜನರ ಮೇಲಿತ್ತು.
ಇದೇ ಪ್ರಕರಣದಲ್ಲಿ ಖ್ಯಾತ ನಟ ದಿಲೀಪ್ ಅವರು ಭಾಗಿ ಆಗಿದ್ದಾರೆ ಎಂದು ಆರೋಪಿಸಲಾಗಿತ್ತು. ನಟಿಯ ಮೇಲೆ ಅತ್ಯಾಚಾರ ಮಾಡಿಸಲು ಅವರು ಸುಪಾರಿ ನೀಡಿದ್ದರು ಎಂಬ ಆರೋಪ ಎದುರಾಗಿತ್ತು. ದಿಲೀಪ್ 8ನೇ ಆರೋಪಿ ಆಗಿದ್ದಾರೆ. ಅವರನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಸುಮಾರು 8 ವರ್ಷಗಳ ಕಾಲ ಈ ಪ್ರಕರಣದ ವಿಚಾರಣೆ ನಡೆದು ಈಗ ಅಂತಿಮ ತೀರ್ಪು ಹೊರಬಂದಿದೆ.
ಶಿಕ್ಷೆಗೆ ಒಳಗಾಗಿರುವ ಪಲ್ಸರ್ ಸುನಿ, ಮಾರ್ಟಿನ್ ಆಂಟೊನಿ, ಬಿ. ಮಣಿಕಂದನ್, ವಿಜೇಶ್ ವಿ.ಪಿ., ಸಲೀಮ್ ಹೆಚ್. ಮತ್ತು ಪ್ರದೀಪ್ ವಿರುದ್ಧ ಸಾಮೂಹಿಕ ಅತ್ಯಾಚಾರ, ಅಪರಾಧ ಕೃತ್ಯಕ್ಕೆ ಸಂಚು ರೂಪಿಸಿದ್ದು, ಮಹಿಳೆಯ ಘನತೆಗೆ ಧಕ್ಕೆ ತಂದಿದ್ದು, ಪಿತೂರಿ, ಸಾಕ್ಷ್ಯ ನಾಶ, ಅಶ್ಲೀಲ ಫೋಟೋ ಹಂಚಿಕೆ ಮುಂತಾದ ಆರೋಪಗಳನ್ನು ಹೊರಿಸಲಾಗಿತ್ತು. ಅವರ ಮೇಲಿನ ಆರೋಪ ದೃಢಪಟ್ಟಿದೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ಮಲಯಾಳಂ ನಟ ದಿಲೀಪ್ ನಿರ್ದೋಷಿ; ಕೋರ್ಟ್ ತೀರ್ಪು
ನಟಿಯ ಮೇಲೆ ಅತ್ಯಾಚಾರ ಎಸಗಲು ನಟ ದಿಲೀಪ್ ಅವರು ಪ್ರಮುಖ ಆರೋಪಿಯಾದ ಪಲ್ಸರ್ ಸುನಿಯನ್ನು ನಿಯೋಜಿಸಿದ್ದರು ಎಂದು ಆರೋಪಿಸಲಾಗಿತ್ತು. ಅಲ್ಲದೇ ಅವರು ಸಾಕ್ಷ್ಯನಾಶಕ್ಕೆ ಯತ್ನಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ದಿಲೀಪ್ ಮೇಲಿನ ಯಾವುದೇ ಆರೋಪ ಸಾಬೀತಾಗಿಲ್ಲ. ತಮ್ಮ ಮೇಲೆ ಪೊಲೀಸರು ಸಂಚು ರೂಪಿಸಿದ್ದರು, ಅದರಿಂದ ತಮ್ಮ ಗೌರವಕ್ಕೆ ಹಾನಿ ಆಗಿದೆ ಎಂದು ದಿಲೀಪ್ ಅವರು ಇತ್ತೀಚೆಗೆ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:53 pm, Fri, 12 December 25