ಲೈಂಗಿಕ ದೌರ್ಜನ್ಯ ಪ್ರಕರಣ: ಮಲಯಾಳಂ ನಟ ದಿಲೀಪ್ ನಿರ್ದೋಷಿ; ಕೋರ್ಟ್ ತೀರ್ಪು
ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಲಾಗಿದೆ. ಆದರೆ ಇದೇ ಪ್ರಕರಣದ ಪ್ರಮುಖ 6 ಆರೋಪಿಗಳು ತಪ್ಪು ಮಾಡಿರುವುದು ಸಾಬೀತಾಗಿದೆ. ಡಿ.12ಕ್ಕೆ ಶಿಕ್ಷೆ ಪ್ರಕಟ ಆಗಲಿದೆ. 2017ರಿಂದ ಇಲ್ಲಿಯ ತನಕ ಒಟ್ಟು 261 ಸಾಕ್ಷಿಗಳ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ಇಂದು (ಡಿ.8) ತೀರ್ಪು ನೀಡಿದೆ.

ಖ್ಯಾತ ನಟಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ (Malayalam Actor Dileep) ನಿರ್ದೋಷಿ ಎಂದು ಕೇರಳ ಕೋರ್ಟ್ ತೀರ್ಪು ನೀಡಿದೆ. 2017ರಲ್ಲಿ ಈ ಪ್ರಕರಣ ನಡೆದಿತ್ತು. ಈ ಕೇಸ್ನಲ್ಲಿ ದಿಲೀಪ್ ಅವರು 8ನೇ ಆರೋಪಿ ಆಗಿದ್ದರು. ಅಪರಾಧ ಕೃತ್ಯಕ್ಕೆ ಸಂಚು ರೂಪಿಸಿದ್ದು ಹಾಗೂ ಸಾಕ್ಷಿ ನಾಶದ ಆರೋಪ ಅವರ ಮೇಲಿತ್ತು. ಆದರೆ ಈ ಪ್ರಕರಣದಲ್ಲಿ ದಿಲೀಪ್ (Dileep) ಅವರ ಪಾತ್ರ ಇಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದರಿಂದಾಗಿ ದಿಲೀಪ್ ಅವರು ನಿಟ್ಟುಸಿರು ಬಿಟ್ಟಿದ್ದಾರೆ. 8 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಕೋರ್ಟ್ ಈ ತೀರ್ಪು ನೀಡಿದೆ. ದಿಲೀಪ್ ಅವರನ್ನು ಖುಲಾಸೆಗೊಳಿಸಿದೆ.
ಇದೇ ಪ್ರಕರಣದಲ್ಲಿ 6 ಆರೋಪಿಗಳು ಅಪರಾಧ ಎಸಗಿರುವುದು ಸಾಬೀತಾಗಿದೆ. ಸಾಮೂಹಿಕ ಅತ್ಯಾಚಾರ, ಅಪಹರಣ, ಅಪರಾಧ ಕೃತ್ಯದ ಸಂಚು, ವಿವಸ್ತ್ರಗೊಳಿಸುವ ಯತ್ನ ಸೇರಿದಂತೆ ಹಲವು ಕೃತ್ಯಗಳಲ್ಲಿ 6 ಜನರು ಅಪರಾಧಿಗಳು ಎಂದು ಕೋರ್ಟ್ ತೀರ್ಪು ನೀಡಿದೆ. ಈ 6 ಮಂದಿಗೆ ಡಿಸೆಂಬರ್ 12ರಂದು ಶಿಕ್ಷೆ ಪ್ರಕಟ ಆಗಲಿದೆ.
ತಮ್ಮ ಮೇಲಿನ ಈ ಪ್ರಕರಣ ಖುಲಾಸೆ ಆಗಿದ್ದಕ್ಕೆ ನಟ ದಿಲೀಪ್ ಕುಮಾರ್ ಅವರು ಧನ್ಯವಾದ ತಿಳಿಸಿದ್ದಾರೆ. ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಪ್ರಮುಖ ಆರೋಪಿ ಪಲ್ಸರ್ ಸುನಿ ಹಾಗೂ ಆತನ ಸಹಚರರ ಜೊತೆ ಪೊಲೀಸರು ಸೇರಿಕೊಂಡು ನನ್ನ ವಿರುದ್ಧ ಕಥೆ ಕಟ್ಟಿದ್ದರು. ಕೆಲವು ಮಾಧ್ಯಮದವರ ಜೊತೆ ಕೈ ಜೋಡಿಸಿ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ನ್ಯಾಯಾಲಯದಲ್ಲಿ ಆ ಸುಳ್ಳು ಕಥೆ ನಿಲ್ಲಲಿಲ್ಲ. ನಿಜವಾಗಿ ಸಂಚು ನಡೆದಿದ್ದು ನನ್ನ ವಿರುದ್ಧ. ಈ 9 ವರ್ಷಗಳಲ್ಲಿ ನನ್ನ ಗೌರವ ಮತ್ತು ಜೀವನ ಹಾಳಾಗಿದೆ’ ಎಂದು ದಿಲೀಪ್ ಹೇಳಿದ್ದಾರೆ.
ಸೆಷನ್ಸ್ ಕೋರ್ಟ್ ನೀಡಿರುವ ಈ ತೀರ್ಪಿನ ವಿರುದ್ಧ ಮೇಲ್ಮವಿ ಸಲ್ಲಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಆ ಕುರಿತು ಕಾನೂನು ಸಚಿವ ಪಿ. ರಾಜೀವ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಮಾತುಕತೆ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಮೇಲ್ಮವಿ ಸಲ್ಲಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಇನ್ಸ್ಟಾದಲ್ಲಿ ಪರಿಚಯವಾದ ಗೆಳತಿ ಮೇಲೆ ಅತ್ಯಾಚಾರ; ಕಿರುತೆರೆ ನಟ ಆಶಿಶ್ ಕಪೂರ್ ಬಂಧನ
2017ರ ಫೆಬ್ರವರಿ 17ರಂದು ಚಲಿಸುವ ಕಾರಿನಲ್ಲಿ ಖ್ಯಾತ ನಟಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಸುಮಾರು 2 ಗಂಟೆಗಳ ಕಾಲ ಈ ಕೃತ್ಯ ಎಸಗಲಾಗಿತ್ತು. ಪೊಲೀಸರು 2017ರ ಏಪ್ರಿಲ್ನಲ್ಲಿ ಚಾರ್ಜ್ಶೀಟ್ ಸಲ್ಲಿಸಿದರು. ಅದೇ ವರ್ಷ ಜುಲೈನಲ್ಲಿ ದಿಲೀಪ್ ಅವರನ್ನು ಬಂಧಿಸಲಾಯಿತು. ಬಳಿಕ ಅವರು ಜಾಮೀನು ಪಡೆದುಕೊಂಡರು. ಕಳೆದ 8 ವರ್ಷಗಳಲ್ಲಿ ಒಟ್ಟು 261 ಸಾಕ್ಷಿಗಳ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ಇಂದು (ಡಿಸೆಂಬರ್ 8) ಈ ತೀರ್ಪು ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




