
ಮಲಯಾಳಂ ಚಿತ್ರರಂಗ ಒಂದರ ಹಿಂದೊಂದರಂತೆ ಉತ್ತಮ ಸಿನಿಮಾಗಳನ್ನು ಭಾರತ ಚಿತ್ರರಂಗಕ್ಕೆ ನೀಡುತ್ತಿದೆ. ಆದರೆ ಇತರೆ ಕೆಲವು ಚಿತ್ರರಂಗಗಳಂತೆ ಅಲ್ಲಿಯೂ ಸಮಸ್ಯೆಗಳಿವೆ. ಕೆಲ ವಾರಗಳ ಹಿಂದಷ್ಟೆ ಸಿನಿಮಾ ಪ್ರದರ್ಶಕರು, ರಾಜ್ಯದಾದ್ಯಂತ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇದೀಗ ಇಡೀ ಮಲಯಾಳಂ ಚಿತ್ರರಂಗ ಸಿಬಿಎಫ್ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್) ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ. ಸೋಮವಾರದಂದು ಮಲಯಾಳಂ ಚಿತ್ರರಂಗದ ಬೇರೆ ಬೇರೆ ವಿಭಾಗಗಳ ಸಂಘಟನೆಯವರು ಸಿಬಿಎಫ್ಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ಈ ವಿವಾದಕ್ಕೆ ಕಾರಣವಾಗಿರುವುದು ಒಂದು ಹೆಸರು.
ಕೇಂದ್ರ ಸಚಿವರೂ ಆಗಿರುವ ಸುರೇಶ್ ಗೋಪಿ ನಟನೆಯ ‘ಜೆಎಸ್ಕೆ’ (ಜಾನಕಿ vs ಸ್ಟೇಟ್ ಆಫ್ ಕೇರಳ) ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಪ್ರಮಾಣ ಪತ್ರಕ್ಕಾಗಿ ಸಿಬಿಎಫ್ಸಿಗೆ ಕಳಿಸಲಾಗಿತ್ತು. ಆದರೆ ಸಿಬಿಎಫ್ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ. ಸಿನಿಮಾದ ಹೆಸರು ಬದಲಾವಣೆ ಮಾಡದ ಹೊರತು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡುವುದಿಲ್ಲ ಎಂದಿದೆ.
ಸಿನಿಮಾದ ನಾಯಕಿಯ ಹೆಸರು ಜಾನಕಿ ಎಂದಿದ್ದು, ಪಾತ್ರದ ಹೆಸರನ್ನು ಬದಲಾವಣೆ ಮಾಡುವಂತೆ ಸಿಬಿಎಫ್ಸಿ ಚಿತ್ರತಂಡಕ್ಕೆ ಸೂಚಿಸಿದೆ. ಜಾನಕಿ ಹೆಸರು ದೇವಿ ಸೀತಾಮಾತೆಯ ಹೆಸರಾಗಿದ್ದು, ಆ ಕಾರಣದಿಂದಾಗಿ ಸಿನಿಮಾದ ಹೆಸರನ್ನು ಬದಲಾವಣೆ ಮಾಡುವಂತೆ ಸೂಚನೆ ನೀಡಲಾಗಿದೆ. ಇದು ಚಿತ್ರತಂಡವನ್ನು ಮಾತ್ರವಲ್ಲದೆ ಮಲಯಾಳಂ ಚಿತ್ರರಂಗವನ್ನೇ ಕೆರಳಿಸಿದೆ. ಈ ಹಿಂದೆ ಸಹ ‘ಜಾನಕಿ’ ಎಂಬ ಹೆಸರಿನ ಹಲವು ಸಿನಿಮಾಗಳು ಬಿಡುಗಡೆ ಆಗಿವೆ. ಹಲವಾರು ಸಿನಿಮಾಗಳಲ್ಲಿ ಪಾತ್ರದ ಹೆಸರು ‘ಜಾನಕಿ’ ಎಂದಿದೆ. ಹಾಗಿದ್ದ ಮೇಲೆ ಈ ಸಿನಿಮಾಕ್ಕೆ ಮಾತ್ರ ಏಕೆ ವಿರೋಧ ಎಂದು ಪ್ರಶ್ನಿಸಲಾಗಿದೆ.
ಇದನ್ನೂ ಓದಿ:ಮಲಯಾಳಂ ಚಿತ್ರರಂಗಕ್ಕೆ ವಿದಾಯ ಹೇಳಿದರೆ ಅನುಪಮ ಪರಮೇಶ್ವರನ್
‘ಜೆಎಸ್ಕೆ’ ಸಿನಿಮಾವು ಜೂನ್ 27 ಕ್ಕೆ ಬಿಡುಗಡೆ ಆಗಬೇಕಿತ್ತು, ಆದರೆ ಪ್ರಮಾಣ ಪತ್ರ ನಿರಾಕರಣೆಯಿಂದಾಗಿ ಸಿನಿಮಾ ಬಿಡುಗಡೆ ಆಗಿಲ್ಲ. ಇದೀಗ ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ನಲ್ಲಿ ವಿಚಾರಣೆ ಚಾಲ್ತಿಯಲ್ಲಿದೆ. ಇತ್ತೀಚೆಗೆ ನಡೆದ ವಿಚಾರಣೆಯಲ್ಲಿ ಸಿಬಿಎಫ್ಸಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ‘ರಾಮ್ ಲಖನ್’, ‘ಸೀತಾ ಔರ್ ಗೀತಾ’ ಇನ್ನೂ ಹಲವಾರು ಇಂಥಹಾ ಸಿನಿಮಾಗಳಿವೆ, ಅವುಗಳ ಬಗ್ಗೆ ಆಕ್ಷೇಪಣೆ ಇಲ್ಲ ಆದರೆ ಇದಕ್ಕೆ ಮಾತ್ರ ಏಕೆ? ಎಂದು ಪ್ರಶ್ನೆ ಮಾಡಿದೆ.
ಸಿಬಿಎಫ್ಸಿ ನೀಡಿರುವ ಹೇಳಿಕೆಯಂತೆ, ‘ಜೆಎಸ್ಕೆ’ ಸಿನಿಮಾವೂ ಬಹಳ ಸೂಕ್ಷ್ಮವಾದ ಸಾಮಾಜಿಕ ವಿಷಯ ಒಳಗೊಂಡಿದೆ. ಸಿನಿಮಾನಲ್ಲಿ ಅತ್ಯಾಚಾರ, ಲೈಂಗಿಕತೆ ಇನ್ನಿತರೆ ವಿಷಯಗಳು ಇವೆ. ಆ ಕಾರಣದಿಂದಾಗಿ ಸಿನಿಮಾದ ಪಾತ್ರದ ಹೆಸರು ಬದಲಾಯಿಸುವಂತೆ ಸೂಚಿಸಲಾಗಿದೆ ಎಂದಿದೆ. ಆದರೆ ಮಲಯಾಳಂ ಸಿನಿಮಾ ಸಂಘವು ಸಿಬಿಎಫ್ಸಿ ನಿರ್ಧಾರವನ್ನು ಖಂಡಿಸಿದ್ದು, ಸೋಮವಾರದಂದು ಪ್ರತಿಭಟನೆ ನಡೆಸಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ