‘ಕಣ್ಣಪ್ಪ’ ಸಿನಿಮಾ ಹಾರ್ಡ್​ಡ್ರೈವ್ ಕಳವು, ನಟನ ಮೇಲೆ ಆರೋಪ

Kannappa Movie: ತೆಲುಗಿನ ಬಹು ನಿರೀಕ್ಷಿತ ಸಿನಿಮಾ ‘ಕಣ್ಣಪ್ಪ’ದ ಹಾರ್ಡ್ರೈವ್ ಕಳುವಾಗಿರುವುದು ದೊಡ್ಡ ಸುದ್ದಿಯಾಗಿದೆ. ನೂರಾರು ಕೋಟಿ ಬಜೆಟ್ ಹಾಕಿ ನಿರ್ಮಿಸಲಾಗಿರುವ ಸಿನಿಮಾದ ಹಾರ್ಡ್ರೈವ್ ಕಳುವಾಗಿದೆ. ಇದೀಗ ಸಿನಿಮಾದ ನಾಯಕ ಮತ್ತು ನಿರ್ಮಾಪಕ ಮಂಚು ವಿಷ್ಣು ಈ ಬಗ್ಗೆ ಮಾತನಾಡಿ, ಪರೋಕ್ಷವಾಗಿ ಈ ಘಟನೆ ಹಿಂದೆ ನಟ ಮಂಚು ಮನೋಜ್ ಕೈವಾಡ ಇದೆ ಎಂದಿದ್ದಾರೆ.

‘ಕಣ್ಣಪ್ಪ’ ಸಿನಿಮಾ ಹಾರ್ಡ್​ಡ್ರೈವ್ ಕಳವು, ನಟನ ಮೇಲೆ ಆರೋಪ
Kannappa Movie

Updated on: Jun 01, 2025 | 2:55 PM

ತೆಲುಗು ಚಿತ್ರರಂಗದ (Tollywood) ಬಲು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾದ ‘ಕಣ್ಣಪ್ಪ’ ಸಿನಿಮಾದ ಹಾರ್ಡ್ರೈವ್ ಕಾಣೆ ಆಗಿದೆ. ನೂರಾರು ಕೋಟಿ ಬಂಡವಾಳ ಹೂಡಿ ಮಾಡಿರುವ ಸಿನಿಮಾದ ಪ್ರಮುಖ ವಿಎಫ್​ಎಕ್ಸ್ ದೃಶ್ಯಗಳನ್ನು ಒಳಗೊಂಡಿರುವ ಹಾರ್ಡ್ರೈವ್ ಇದೀಗ ಕಳುವಾಗಿದ್ದು, ಚಿತ್ರತಂಡ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಸಿನಿಮಾದ ನಾಯಕ ಮತ್ತು ನಿರ್ಮಾಪಕರೂ ಆಗಿರುವ ಮಂಚು ವಿಷ್ಣು ಈ ಬಗ್ಗೆ ಮಾತನಾಡಿ, ಹಾರ್ಡ್​ ಡ್ರೈವ್ ಕಳುವಿನ ಹಿಂದೆ ಅವರ ಸಹೋದರ ಮತ್ತು ತೆಲುಗು ಚಿತ್ರರಂಗದ ಜನಪ್ರಿಯ ನಟರೂ ಆಗಿರುವ ಮಂಚು ಮನೋಜ್ ಕೈವಾಡ ಇದೆ ಎಂದಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ಮಂಚು ವಿಷ್ಣು, ‘ಈಗ ಹಾರ್ಡ್​ ಡಿಸ್ಕ್ ಕಳುವು ಪ್ರಕರಣದ ಪ್ರಮುಖ ಆರೋಪಿ ಆಗಿರುವ ರಘು, ನನ್ನ ಸಹೋದರ ಮಂಚು ಮನೋಜ್ ಸೇರಿಸಿಕೊಂಡಿದ್ದ ಉದ್ಯೋಗಿ. ಈಗ ರಘು ಮೂಲಕ ಮಂಚು ಮನೋಜ್ ಕಳುವು ಮಾಡಿಸಿದ್ದಾನೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ, ಪ್ರಸ್ತುತ 70 ನಿಮಿಷಗಳ ದೃಶ್ಯಗಳನ್ನು ಒಳಗೊಂಡಿರುವ ಹಾರ್ಡ್​ ಡ್ರೈವ್ ಅನ್ನು ಕಳವು ಮಾಡಲಾಗಿದೆ. ಒಂದೊಮ್ಮೆ ಅವರು ಆ ಹಾರ್ಡ್​ ಡ್ರೈವ್​ನ ದೃಶ್ಯಗಳನ್ನು ಲೀಕ್ ಮಾಡಿದರೆ ಯಾರೂ ಅದನ್ನು ಹಂಚಿಕೊಳ್ಳಬಾರದು’ ಎಂದು ಪರೋಕ್ಷವಾಗಿ ತಮ್ಮ ಸಹೋದರ ಈ ಘಟನೆಯ ಹಿಂದಿರುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ತಿರುಪತಿಯಲ್ಲಿ ತೆಲುಗು ನಟ ಮಂಚು ಮನೋಜ್ ಪೊಲೀಸ್ ವಶಕ್ಕೆ; ಕಾರಣ ನಿಗೂಢ

ತಮ್ಮ ಸಹೋದರನ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮಂಚು ಮನೋಜ್, ‘ನಾನು ಆರೋಪಗಳ ಬಗ್ಗೆ ಮಾತನಾಡುವುದಿಲ್ಲ. ನಾನು ‘ಕಣ್ಣಪ್ಪ’ ಸಿನಿಮಾಕ್ಕೆ ಒಳಿತಾಗಲಿ ಎಂದೇ ಹಾರೈಸುತ್ತೇನೆ. ಈ ಹಿಂದೆಯೂ ಹಾರೈಸಿದ್ದೆ’ ಎಂದಿದ್ದಾರೆ. ಮನೋಜ್ ಅವರ ‘ಭೈರವ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದ್ದು, ಆ ಸಿನಿಮಾದ ಪ್ರದರ್ಶನದ ಬಗ್ಗೆ ಕೇಳಿದಾಗ, ಎಲ್ಲವೂ ನನ್ನ ತಂದೆ ಮೋಹನ್ ಬಾಬು ಅವರಿಂದ ನನಗೆ ಬಳುವಳಿಯಾಗಿ ಬಂದಿರುವ ಕಲೆ ಎಂದಿದ್ದಾರೆ.

ಮಂಚು ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಕೆಲ ತಿಂಗಳುಗಳಿಂದೂ ಜಗಳಗಳು ನಡೆಯುತ್ತಲೇ ಇವೆ. ಕಿರಿಯ ಸಹೋದರ ಮಂಚು ಮನೋಜ್ ಅನ್ನು ತಂದೆ ಮೋಹನ್​ ಬಾಬು ಹಾಗೂ ಮಂಚು ವಿಷ್ಣು ದೂರ ಇಟ್ಟಿದ್ದಾರೆ. ಮಗ ಮಂಚು ಮನೋಜ್ ಮೇಲೆ ಸ್ವಂತ ತಂದೆ ಮೋಹನ್​ಬಾಬು ದೂರು ನೀಡಿದ್ದರು. ಮಂಚು ವಿಷ್ಣು ಸಹ ಮನೋಜ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಮಂಚು ಮನೋಜ್ ಮೇಲೆ ಹಲ್ಲೆ ಸಹ ನಡೆದಿತ್ತು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ