ತೆಲುಗು ಚಿತ್ರರಂಗಕ್ಕೆ ಎಚ್ಚರಿಕೆ ಕೊಟ್ಟ ನಟ ಪವನ್ ಕಲ್ಯಾಣ್, ಕಾರಣವೇನು?
Pawan Kalyan: ಪವನ್ ಕಲ್ಯಾಣ್ ಚುನಾವಣೆ ಗೆಲ್ಲಬೇಕು ಎಂದು ಹಲವು ತೆಲುಗು ಚಿತ್ರರಂಗದ ಗಣ್ಯರು ಪ್ರಯತ್ನಿಸಿದ್ದರು. ಪವನ್ ಕಲ್ಯಾಣ್ ಗೆದ್ದು, ಡಿಸಿಎಂ ಆದಾಗ ತಾವೇ ಗೆದ್ದಂತೆ ಸಂಭ್ರಮಿಸಿದ್ದರು. ಆದರೆ ಈಗ ಅದೇ- ಪವನ್ ಕಲ್ಯಾಣ್ ತೆಲುಗು ಚಿತ್ರರಂಗದ ಕೆಲ ಸ್ಟಾರ್ ನಟರು, ನಿರ್ಮಾಪಕರು, ನಿರ್ದೇಶಕರಿಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಪವನ್ ಕಲ್ಯಾಣ್ ಮುಂದಿನ ದಿನಗಳಲ್ಲಿ ತೆಲುಗು ಚಿತ್ರರಂಗವನ್ನು ಎದುರು ಹಾಕಿಕೊಳ್ಳುವುದು ಖಾತ್ರಿ ಎಂಬ ವಾತಾವರಣ ನಿರ್ಮಾಣ ಆಗುತ್ತಿದೆ.

ನಟ ಪವನ್ ಕಲ್ಯಾಣ್ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಆಗಿದ್ದಾರೆ. ಪವನ್ ಕಲ್ಯಾಣ್ಗೆ ತೆಲುಗು ಚಿತ್ರರಂಗದ ಹಲವಾರು ಮಂದಿ ಬೆಂಬಲ ನೀಡಿದ್ದರು. ಹಲವಾರು ಮಂದಿ ನೇರವಾಗಿ, ಪರೋಕ್ಷವಾಗಿ ಬೆಂಬಲ ನೀಡಿದ್ದರು. ರಾಮ್ ಚರಣ್ ಸೇರಿದಂತೆ ಇನ್ನೂ ಕೆಲ ನಟರು, ನಿರ್ದೇಶಕರು, ತಂತ್ರಜ್ಞರು ಪವನ್ ಕಲ್ಯಾಣ್ ಪರವಾಗಿ ಚುನಾವಣೆ ಪ್ರಚಾರವನ್ನೂ ಸಹ ಮಾಡಿದ್ದರು. ಪವನ್ ಕಲ್ಯಾಣ್ ಗೆದ್ದು ಉಪ ಮುಖ್ಯ ಮಂತ್ರಿ ಆದಾಗ ಚಿತ್ರರಂಗದವರು ಬಹಳ ಖುಷಿ ಪಟ್ಟಿದ್ದರು. ಇನ್ನು ಮುಂದೆ ನಮಗೆ ಪ್ರಾಧಾನ್ಯತೆ ಸಿಗಲಿದೆ ಎಂದು ಖುಷಿ ಪಟ್ಟಿದ್ದರು. ಆದರೆ ಇದೀಗ ಅದೇ ಪವನ್ ಕಲ್ಯಾಣ್ ಟಾಲಿವುಡ್ಗೆ ಎದುರಾಗಿ ನಿಂತಿದ್ದಾರೆ. ಚಿತ್ರರಂಗದವರಿಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ನಟ, ಡಿಸಿಎಂ ಪವನ್ ಕಲ್ಯಾಣ್, ಚಿತ್ರರಂಗದವರನ್ನು ನೇರವಾಗಿ ಟೀಕೆ ಮಾಡಿದ್ದಾರೆ. ‘ಚಿತ್ರರಂಗದ ಪ್ರಮುಖರಿಗೆ ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿ ಧನ್ಯವಾದ ಹೇಳುವ ವ್ಯವಧಾನವೂ ಇಲ್ಲವೇ?’ ಎಂದು ಪ್ರಶ್ನೆ ಮಾಡಿದ್ದಾರೆ. ಕಳೆದ ಅವಧಿಯ ಸರ್ಕಾರದಲ್ಲಿ ಸಾಕಷ್ಟು ಹಿಂಸೆಗಳನ್ನು ಅನುಭವಿಸಿದ ಬಳಿಕವೂ ಸಹ ಚಿತ್ರರಂಗದ ದೊಡ್ಡವರಿಗೆ ಕೃತಜ್ಞತೆ ಭಾವ ಇಲ್ಲ’ ಎಂದಿದ್ದಾರೆ.
‘ಈಗಿನ ನಮ್ಮ ಸರ್ಕಾರ ಯಾವುದೇ ಪ್ರತ್ಯೇಕ ವ್ಯಕ್ತಿಗಳ ಮೇಲೆ ಗಮನ ಕೇಂದ್ರೀಕರಿಸಿ ಯಾವುದೇ ಕೆಲಸ ಮಾಡುವುದಿಲ್ಲ. ನಮ್ಮದೇನಿದ್ದರೂ ಇಡೀ ಚಿತ್ರರಂಗದ ಪ್ರಗತಿಯ ಉದ್ದೇಶ ಎಂದಿರುವ ಪವನ್ ಕಲ್ಯಾಣ್, ‘ಆದರೆ ಇತ್ತೀಚೆಗೆ ಚಿತ್ರರಂಗ ನನಗೆ ನೀಡಿರುವ ‘ರಿಟರ್ನ್ ಗಿಫ್ಟ್’ ಅನ್ನು ನಾನು ಸ್ವೀಕರಿಸುತ್ತೇನೆ. ಮತ್ತು ಅದಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ವ್ಯವಹರಿಸುತ್ತೇನೆ’ ಎಂದಿದ್ದಾರೆ. ಪವನ್ ಕಲ್ಯಾಣ್ ಸಿನಿಮಾ ಬಿಡುಗಡೆ ಹತ್ತಿರ ಬರುತ್ತಿದ್ದಂತೆ ಸಿನಿಮಾ ಪ್ರದರ್ಶಕರು ಬಂದ್ ಘೋಷಣೆ ಮಾಡಿದ್ದರು. ಆ ವಿಷಯವಾಗಿ ಪವನ್ ಕಲ್ಯಾಣ್ ಕೋಪಕೊಂಡಿದ್ದಾರೆ ಎನ್ನಲಾಗಿದ್ದು, ಆ ವಿಷಯವನ್ನು ಪರ್ಸನಲ್ ಆಗಿ ತೆಗೆದುಕೊಂಡಿದ್ದಾರಂತೆ.
‘ಸರ್ಕಾರವು ಚಿತ್ರರಂಗದ ಸಾರ್ವತೋಮುಖ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಮಾಡುತ್ತಿದೆ. ಆದರೆ ಚಿತ್ರರಂಗದವರು ಕನಿಷ್ಠ ಕೃತಜ್ಞತೆಯನ್ನು ಸಹ ತೋರಿಲ್ಲ. ಕಳೆದ ಸರ್ಕಾರ ನೀಡಿದ ಹಿಂಸೆಗಳನ್ನೆಲ್ಲ ಮರೆತಿರುವಂತಿದೆ. ನಮ್ಮ ಸರ್ಕಾರ ಪ್ರಾರಂಭವಾಗಿ ವರ್ಷವಾಗುತ್ತಾ ಬಂದಿದ್ದರೂ ಈ ವರೆಗೆ ಒಬ್ಬ ಚಿತ್ರರಂಗದ ಗಣ್ಯರು ಸಹ ಬಂದು ತಮ್ಮ ಅಭಿನಂದನೆ ಸಲ್ಲಿಸಿಲ್ಲ’ ಎಂದಿದ್ದಾರೆ ಪವನ್, ಮಾತ್ರವಲ್ಲದೆ, ಇನ್ನು ಮುಂದೆ ಯಾರೂ ಸಹ ತಮಗೆ ಖಾಸಗಿಯಾಗಿ ಕರೆ ಮಾಡಿ ಯಾವುದೇ ಅನುಕೂಲಗಳನ್ನು ಕೇಳುವಂತಿಲ್ಲ. ಏನೇ ಇದ್ದರು ಅಫಿಷಿಯಲ್ ಆಗಿ ಬರಬೇಕು ಎಂದು ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




