ಸಹನಟನಿಗೆ ಲೀಗಲ್ ನೊಟೀಸ್ ಕಳಿಸಿದ ಅಕ್ಷಯ್ ಕುಮಾರ್, ಪರೇಶ್ ರಾವಲ್ ಪ್ರತಿಕ್ರಿಯೆ ಏನು?
Akshay Kumar: ನಟ ಅಕ್ಷಯ್ ಕುಮಾರ್ ಹಣಕ್ಕೆ ಬಹಳ ಮೌಲ್ಯ ಕೊಡುವ ವ್ಯಕ್ತಿ. ಅವರು ನಟರಾಗಿರುವ ಜೊತೆಗೆ ನಿರ್ಮಾಪಕರೂ ಆಗಿದ್ದು, ಇದೀಗ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ತಮ್ಮ ಬಹು ಸಮಯದ ಗೆಳೆಯರೊಬ್ಬರಿಗೆ ಲೀಗಲ್ ನೊಟೀಸ್ ಕಳಿಸಿದ್ದಾರೆ. ಲೀಗಲ್ ನೊಟೀಸ್ ಪಡೆದಿರುವ ಪರೇಶ್ ರಾವಲ್ ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಅಷ್ಟಕ್ಕೂ ಇವರಿಬ್ಬರ ನಡುವೆ ವಿವಾದಕ್ಕೆ ಕಾರಣವೇನು?

ಅಕ್ಷಯ್ ಕುಮಾರ್ (Akshay Kumar) ಬಾಲಿವುಡ್ನ ಪಕ್ಕಾ ಲೆಕ್ಕದ ಮನುಷ್ಯ ಎನ್ನಲಾಗುತ್ತದೆ. ಸ್ವತಃ ಅಕ್ಷಯ್ ಕುಮಾರ್ ಹೇಳಿರುವಂತೆ ನನಗೆ ಹಣ ಅತ್ಯಂತ ಅಮೂಲ್ಯವಾದುದು. ‘ನಾನು ನಿಯತ್ತಿನಿಂದ ಕೆಲಸ ಮಾಡುತ್ತೇನೆ ಅದಕ್ಕೆ ತಕ್ಕಂತೆ ನಾನು ಅಷ್ಟೆ ಶ್ರದ್ಧೆ ಮತ್ತು ಶಿಸ್ತಿನಿಂದ ಸಂಭಾವನೆ ಪಡೆಯುತ್ತೇನೆ’. ಅಂದಹಾಗೆ ಅಕ್ಷಯ್ ಕುಮಾರ್ ನಟರು ಮಾತ್ರವಲ್ಲ ನಿರ್ಮಾಪಕರೂ ಸಹ ಹೌದು. ಕೆಲ ಸಿನಿಮಾಗಳಿಗೆ ಬಂಡವಾಳ ಸಹ ತೊಡಗಿಸಿದ್ದಾರೆ. ಇದೀಗ ಅವರು ನಟಿಸಿ, ನಿರ್ಮಾಣ ಮಾಡಬೇಕಿದ್ದ ಸಿನಿಮಾ ಒಂದರಿಂದ ತಮ್ಮ ಸಹನಟ, ಗೆಳೆಯರೊಬ್ಬರು ಹಠಾತ್ತನೆ ಹೊರಹೋಗಿದ್ದಕ್ಕೆ ಯಾವುದೇ ಮುಲಾಜಿಲ್ಲದೆ ನೊಟೀಸ್ ನೀಡಿದ್ದಾರೆ.
‘ಹೇರಾ ಪೇರಿ’ ಬಾಲಿವುಡ್ನ ಬಲು ಜನಪ್ರಿಯ ಹಾಸ್ಯ ಸಿನಿಮಾ ಸರಣಿ. ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಅಕ್ಷಯ್ ಕುಮಾರ್, ಪರೇಶ್ ರಾವಲ್ ಮತ್ತು ಸುನಿಲ್ ಶೆಟ್ಟಿ ನಟಿಸುತ್ತಾ ಬಂದಿದ್ದಾರೆ. ಇತ್ತೀಚೆಗಷ್ಟೆ ‘ಹೇರಾ ಪೇರಿ 3’ ಸಿನಿಮಾದ ಘೋಷಣೆ ಆಗಿದ್ದು, ಸಿನಿಮಾಕ್ಕೆ ಅಕ್ಷಯ್ ಕುಮಾರ್ ಬಂಡವಾಳ ತೊಡಗಿಸುವವರಿದ್ದಾರೆ. ಆದರೆ ಇತ್ತೀಚೆಗಷ್ಟೆ ನಟ ಪರೇಶ್ ರಾವಲ್ ‘ಹೇರಾ ಪೇರಿ 3’ ಸಿನಿಮಾದಿಂದ ಅಚಾನಕ್ಕಾಗಿ ಹೊರಗೆ ಹೋಗಿದ್ದಾರೆ. ಖಾಸಗಿ ಕಾರಣಕ್ಕೆ ಸಿನಿಮಾದಿಂದ ಹೊರ ನಡೆಯುತ್ತಿರುವುದಾಗಿ ಪರೇಶ್ ರಾವಲ್ ಘೋಷಣೆ ಮಾಡಿದ್ದಾರೆ.
ಆದರೆ ಇದು ಅಕ್ಷಯ್ ಕುಮಾರ್ಗೆ ಹಿಡಿಸಿಲ್ಲ, ಕೂಡಲೇ ಅವರು ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಪರೇಶ್ ರಾವಲ್ಗೆ ನೊಟೀಸ್ ನೀಡಿದ್ದಾರೆ. ನಟ ಪರೇಶ್ ರಾವಲ್, ನಿರ್ಮಾಣ ಸಂಸ್ಥೆ ತಮಗೆ ನೀಡಿದ್ದ 11 ಲಕ್ಷ ರೂಪಾಯಿ ಅಡ್ವಾನ್ಸ್ ಹಣದ ಜೊತೆಗೆ 15% ಬಡ್ಡಿ ಸೇರಿಸಿ ವಾಪಸ್ ನೀಡಿದ್ದಾರೆ. ಮಾತ್ರವಲ್ಲದೆ ತಮ್ಮ ವಕೀಲರ ಮೂಲಕ ನೊಟೀಸ್ಗೆ ಖಾರವಾಗಿಯೇ ಉತ್ತರ ನೀಡಿದ್ದಾರೆ.
ಇದನ್ನೂ ಓದಿ:ಅಕ್ಷಯ್ ಕುಮಾರ್ಗೆ ಲಾಯರ್ ಉತ್ತರ ಕೊಡ್ತಾರೆ: ಪರೇಶ್ ರಾವಲ್ ಖಡಕ್ ಪ್ರತಿಕ್ರಿಯೆ
ಈ ಬಗ್ಗೆ ಟ್ವೀಟ್ ಸಹ ಮಾಡಿರುವ ಪರೇಶ್ ರಾವಲ್, ‘ನನ್ನ ವಕೀಲ ಅಮಿತ್ ನಾಯಕ್ ಅವರು, ‘ಹೇರಾ ಪೇರಿ 3’ ಸಿನಿಮಾದಿಂದ ನಿಯಮಾನುಸಾರ ನಾನು ನಿರ್ಗಮನ ಪಡೆದಿರುವ ಬಗ್ಗೆ ಸೂಕ್ತ ಪ್ರತಿಕ್ರಿಯೆಯನ್ನು ಸಂಬಂಧಿಸಿದವರಿಗೆ (ಅಕ್ಷಯ್ ಕುಮಾರ್) ಅವರಿಗೆ ನೀಡಿರುತ್ತಾರೆ. ಒಮ್ಮೆ ನನ್ನ ಪ್ರತಿಕ್ರಿಯೆಯನ್ನು ಅವರು ಓದಿದ ಬಳಿಕ ಎಲ್ಲ ಊಹಾಪೋಹ, ಗೊಂದಲಗಳಿಗೆ ತೆರೆ ಬೀಳಲಿದೆ’ ಎಂದಿದ್ದಾರೆ.
ಅಂದಹಾಗೆ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಹಲವು ವರ್ಷಗಳಿಂದಲೂ ಆತ್ಮೀಯ ಗೆಳೆಯರಾಗಿದ್ದರು. ಆದರೆ ಇತ್ತೀಚೆಗೆ ಈ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಕೆಲ ದಿನಗಳ ಹಿಂದೆ ಲಲ್ಲನ್ಟಾಪ್ ಸಂದರ್ಶನಕ್ಕೆ ಬಂದಿದ್ದ ಪರೇಶ್ ರಾವಲ್, ‘ಅಕ್ಷಯ್ ಕುಮಾರ್ ನನ್ನ ಗೆಳೆಯನಲ್ಲ ಕೇವಲ ಸಹನಟ ಅಷ್ಟೆ’ ಎಂದಿದ್ದರು. ಮಾತ್ರವಲ್ಲದೆ, ‘ಹೇರಾ ಪೇರಿ’ ಸಿನಿಮಾದ ಬಾಬು ಭಯ್ಯ ಪಾತ್ರ ಸಹ ಈಗ ನನಗೆ ಕೊರಳ ಉರುಳಿನಂತಾಗಿದೆ’ ಎಂದಿದ್ದರು. ಅದರ ಬೆನ್ನಲ್ಲೆ ಅವರು ಸಿನಿಮಾದಿಂದ ಎಕ್ಸಿಟ್ ಆಗಿದ್ದಾರೆ.
ಇನ್ನು ‘ಹೇರಾ ಪೇರಿ 3’ ಸಿನಿಮಾದ ಚರ್ಚೆ ಪ್ರಾರಂಭವಾದಾಗ ಮೊದಲಿಗೆ ಅಕ್ಷಯ್ ಕುಮಾರ್ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದರು. ಆಗ ಸುನಿಲ್ ಶೆಟ್ಟಿ ಇನ್ನಿತರರು ಸೇರಿ ಅವರನ್ನು ಒಪ್ಪಿಸಿದ್ದರು. ಕೊನೆಗೆ ಅಕ್ಷಯ್ ಕುಮಾರ್, ತಾವೇ ನಿರ್ಮಾಣ ಮಾಡುವ ಷರತ್ತು ವಿಧಿಸಿ ಸಿನಿಮಾಕ್ಕೆ ಒಪ್ಪಿಗೆ ನೀಡಿದ್ದರು. ಆದರೆ ಎಲ್ಲವೂ ಸರಿ ಹೋಯ್ತು ಎಂದುಕೊಳ್ಳುವಾಗ ಪರೇಶ್ ರಾವಲ್ ಹೊರ ಹೋಗಿದ್ದಾರೆ. ಪರೇಶ್ ರಾವಲ್, ಸಮಾನ ವೇತನಕ್ಕೆ ಒತ್ತಾಯ ಮಾಡಿದ್ದರು ಅದನ್ನು ಕೊಡಲು ಅಕ್ಷಯ್ ಒಪ್ಪದ ಕಾರಣಕ್ಕೆ ಸಿನಿಮಾದಿಂದ ಅವರು ಹೊರಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Sun, 25 May 25




