ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್; ಜೂನ್ 20ಕ್ಕೆ ‘ಬುಲೆಟ್’ ಬಿಡುಗಡೆ
ನಟ ಧರ್ಮ ಕೀರ್ತಿರಾಜ್ ಅವರು ಪ್ರತಿ ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಈಗ ಅವರು ನಟಿಸಿರುವ ‘ಬುಲೆಟ್’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಶ್ರೀಯಾ ಶುಕ್ಲಾ ಅಭಿನಯಿಸಿದ್ದಾರೆ. ಸತ್ಯಜಿತ್ ಶಬ್ಬೀರ್ ಅವರು ‘ಬುಲೆಟ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ನಟ ಧರ್ಮ ಕೀರ್ತಿರಾಜ್ (Dharma Keerthiraj) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಅವರು ಅಭಿನಯಿಸಿರುವ ‘ಬುಲೆಟ್’ ಸಿನಿಮಾ (Bullet Movie) ಬಿಡುಗಡೆಗೆ ಸಜ್ಜಾಗಿದೆ. ಸತ್ಯಜಿತ್ ಶಬ್ಬೀರ್ ಅವರು ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಧರ್ಮ ಕೀರ್ತಿರಾಜ್ ಅವರು ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದ ಟೀಸರ್ ಮತ್ತು ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಆರ್.ಎಂ.ಎನ್. ರಮೇಶ್ ಮತ್ತು ನಟಿ ನಿಖಿತಾ ಸ್ವಾಮಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಟೀಸರ್, ಹಾಡು ಬಿಡುಗಡೆ ಮಾಡಿದರು.
ಈ ವೇಳೆ ನಿರ್ದೇಶಕ ಶಬ್ಬೀರ್ ಅವರು ಮಾತನಾಡಿದರು. ‘ನಾನು ಭಾರತಿರಾಜ ಅವರ ನಿರ್ದೇಶನದ ಪದಿನಾರು ವಯದಿನಿಲೆ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದೆ. ಆ ಸಿನಿಮಾ ಸಂಗೀತ ನಿರ್ದೇಶಕ ಇಳಯರಾಜ ಅವರು ಶಬ್ಬೀರ್ ಅಂತ ಇದ್ದ ನನ್ನ ಹೆಸರಿನ ಮುಂದೆ ಸತ್ಯಜಿತ್ ಎಂದು ಸೇರಿಸಿದರು. ಅಂದಿನಿಂದ ನನ್ನ ಹೆಸರು ಸತ್ಯಜಿತ್ ಶಬ್ಬೀರ್ ಎಂದಾಯಿತು. ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ 75 ಸಿನಿಮಾಗಳಲ್ಲಿ ಅಭಿಯಿಸಿದ್ದೇನೆ. ಮೂಲತಃ ಕರ್ನಾಟಕದವನು. ಚೆನ್ನೈ ಮತ್ತು ಮುಂಬೈನಲ್ಲಿ ನೆಲೆಸಿದ್ದೆ’ ಎಂದು ಹೇಳಿದರು.
ಮೊದಲ ಸಿನಿಮಾವನ್ನು ಕನ್ನಡದಲ್ಲೇ ನಿರ್ಮಿಸಿ, ನಿರ್ದೇಶಿಸಬೇಕು ಎಂಬ ಆಸೆ ಸತ್ಯಜಿತ್ ಶಬ್ಬೀರ್ ಅವರಿಗೆ ಇತ್ತು. ಅದು ಈಗ ‘ಬುಲೆಟ್’ ಸಿನಿಮಾ ಮೂಲಕ ಈಡೇರಿದೆ. ಈ ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಇದೆ. ಧರ್ಮ ಕೀರ್ತಿರಾಜ್ ಅವರಿಗೆ ನಾಯಕಿಯಾಗಿ ಶ್ರೀಯಾ ಶುಕ್ಲಾ ನಟಿಸಿದ್ದಾರೆ. ಹಿರಿಯ ನಟಿ ಭವ್ಯಾ, ಶೋಭ್ ರಾಜ್, ಶಿವ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇದನ್ನೂ ಓದಿ: ನಾನು-ರಾಗಿಣಿ ಜೋಡಿ ಅಲ್ಲ: ಎಲ್ಲರ ಎದುರು ಸ್ಪಷ್ಟಪಡಿಸಿದ ಧರ್ಮ ಕೀರ್ತಿರಾಜ್
‘ಬುಲೆಟ್’ ಸಿನಿಮಾಗೆ ಪಿ.ವಿ.ಆರ್. ಸ್ವಾಮಿ ಅವರು ಛಾಯಾಗ್ರಹಣ ಮಾಡಿದ್ದಾರೆ. ರಾಜ್ ಭಾಸ್ಕರ್ ಸಂಗೀತ ನೀಡಿದ್ದಾರೆ. ಗುರುಪ್ರಸಾದ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ‘ಜಯದೇವ ಫಿಲಂಸ್’ ಮೂಲಕ ಮರಿಸ್ವಾಮಿ ಅವರು ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.

Bullet Movie Team
‘ಈ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ. ನನ್ನ ಪಾತ್ರ ಸಹ ಚೆನ್ನಾಗಿದೆ. ಈ ವರ್ಷ ನಾನು ನಾಯಕನಾಗಿ ಅಭಿನಯಿಸಿ ರಿಲೀಸ್ ಆಗುತ್ತಿರುವ 3ನೇ ಸಿನಿಮಾ ಇದು’ ಎಂದು ಧರ್ಮ ಕೀರ್ತಿರಾಜ್ ಅವರು ಹೇಳಿದರು. ಹಿರಿಯ ನಟಿ ಭವ್ಯಾ ಅವರು ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಿ.ವಿ.ಆರ್. ಸ್ವಾಮಿ ಛಾಯಾಗ್ರಹಣ ಮಾಡಿದ 50ನೇ ಸಿನಿಮಾ ಇದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:12 pm, Sun, 1 June 25








