‘ಸಿಂಧೂರಿ’ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್, ರಾಗಿಣಿ; ಇದು ಯಾರ ಜೀವನದ ಕಥೆ?
ಮೇ 10ರಂದು ‘ಸಿಂಧೂರಿ’ ಸಿನಿಮಾಗೆ ಶೂಟಿಂಗ್ ಆರಂಭ ಆಗಲಿದೆ. ಧರ್ಮ ಕೀರ್ತಿರಾಜ್, ರಾಗಿಣಿ ದ್ವಿವೇದಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಕಲೇಶಪುರ ಮುಂತಾದ ಕಡೆಗಳಲ್ಲಿ ಒಂದೇ ಹಂತದಲ್ಲಿ 45 ದಿನಗಳ ಕಾಲ ಶೂಟಿಂಗ್ ಮಾಡಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ‘ಸಿಂಧೂರಿ’ ಸಿನಿಮಾಗೆ ಮುಹೂರ್ತ ಸಮಾರಂಭ ನೆರವೇರಿಸಲಾಗಿದೆ.

ಧರ್ಮ ಕೀರ್ತಿರಾಜ್ ಮತ್ತು ರಾಗಿಣಿ ದ್ವಿವೇದಿ (Ragini Dwivedi) ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹೊಸ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ಈ ಸಿನಿಮಾಗೆ ‘ಸಿಂಧೂರಿ’ ಎಂದು ಶೀರ್ಷಿಕೆ ಇಡಲಾಗಿದೆ. ಎಸ್. ರಮೇಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಶಂಕರ್ ಕೋನಮಾನಹಳ್ಳಿ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಮುಹೂರ್ತ ನೆರವೇರಿಸಲಾಗಿದೆ. ಈ ವೇಳೆ ಚಿತ್ರತಂಡದ ಸದಸ್ಯರು ಭಾಗಿಯಾಗಿದ್ದರು. ಸುದ್ದಿಗೋಷ್ಠಿ ನಡೆಸಿ, ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಸಿಂಧೂರಿ’ (Sindhuri) ಎಂಬ ಶೀರ್ಷಿಕೆ ಕೇಳಿದರೆ ಇದು ಯಾರ ಜೀವನದ ಕಥೆ ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೆ ನಿರ್ದೇಶಕರು ಉತ್ತರ ನೀಡಿದ್ದಾರೆ.
‘ಶೀರ್ಷಿಕೆ ಕೇಳಿದರೆ ಇದು ರೋಹಿಣಿ ಸಿಂಧೂರಿ ಹಾಗೂ ಡಿ.ಕೆ. ರವಿ ಅವರ ಕಥೆಯಿರಬಹುದಾ ಎಂದು ಅನೇಕರು ನಮ್ಮ ಬಳಿ ಕೇಳಿದ್ದಾರೆ. ಆದರೆ ರೋಹಿಣಿ ಸಿಂಧೂರಿ ಅವರಿಗೂ ಈ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ಇದೊಂದು ಕಾಲ್ಪನಿಕ ಕಹಾನಿ. ಮರ್ಡರ್ ಮಿಸ್ಟ್ರಿ ಕಥೆ ಈ ಸಿನಿಮಾದಲ್ಲಿ ಇರಲಿದೆ’ ಎಂದು ನಿರ್ದೇಶಕ ಶಂಕರ್ ಅವರು ತಿಳಿಸಿದರು. ಇದು ಅವರಿಗೆ 4ನೇ ಸಿನಿಮಾ.
ಈ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಹಾಗೂ ಧರ್ಮ ಕೀರ್ತಿರಾಜ್ ಅವರು ಜೋಡಿಯಾಗಿ ಅಭಿನಯಿಸುತ್ತಿಲ್ಲ. ಸಿನಿಮಾದ ಕಥೆಗೆ ತಿರುವು ನೀಡುವಂತಹ ಪಾತ್ರದಲ್ಲಿ ರಾಗಿಣಿ ಅಭಿನಯಿಸುತ್ತಿದ್ದಾರೆ. ‘ನಾನು ಬಿಂಗೋ ಸಿನಿಮಾದ ಶೂಟಿಂಗ್ ಮಾಡುವಾಗ ರಾಗಿಣಿ ಅವರಿಗೆ ಈ ಕಥೆ ಹೇಳಿದ್ದೆ. ಅವರಿಗೆ ಅದು ಇಷ್ಟವಾಗಿ ಗ್ರೀನ್ ಸಿಗ್ನಲ್ ನೀಡಿದ್ದರು. ಈ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ ಅವರು ಭಿನ್ನವಾದ ಪಾತ್ರ ಮಾಡಲಿದ್ದಾರೆ’ ಎಂದು ನಿರ್ದೇಶಕರು ಹೇಳಿದ್ದಾರೆ.

Sindhuri Movie Team
ನಿರ್ಮಾಪಕ ಎಸ್. ರಮೇಶ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಒಂದಷ್ಟು ವರ್ಷಗಳ ಮೊದಲು ವಿಕ್ಕಿ ಎಂಬ ಸಿನಿಮಾ ಮಾಡಿದ್ದೆ. ಆ ಚಿತ್ರದ ನಿರ್ದೇಶಕರು ಮೋಸ ಮಾಡಿದರು. ಮುಂದೆ ಸಿನಿಮಾ ಮಾಡಬಾರದು ಅಂತ ನಿರ್ಧರಿಸಿದ್ದೆ. ಆದರೆ ಶಂಕರ್ ಬಂದು ಸಿಂಧೂರಿ ಕಥೆ ಹೇಳಿದರು. ದೇವರ ಆಶೀರ್ವಾದದಿಂದ ಇಂದು ಸಿನಿಮಾ ಆರಂಭಿಸಿದ್ದೇವೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ಟಾಲಿವುಡ್ಗೆ ಧರ್ಮ ಕೀರ್ತಿರಾಜ್; ಅಪ್ಸರೆಯ ಜೊತೆ ಸಿನಿಮಾ
ನಾರಾಯಣಸ್ವಾಮಿ, ರಮೀಜ್ ರಾಕಿ, ಸಂಗೀತ ನಿರ್ದೇಶಕ ಹಿತನ್ ಹಾಸನ್, ಛಾಯಾಗ್ರಾಹಕ ರಾಕೇಶ್ ಸಿ. ತಿಲಕ್, ಸಂಭಾಷಣಕಾರ ಹರೀಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ರಾಗಿಣಿ ದ್ವಿವೇದಿ ಮತ್ತು ಧರ್ಮ ಕೀರ್ತಿರಾಜ್ ಅವರು ಸಂತಸ ವ್ಯಕ್ತಪಡಿಸಿದರು. ‘ಈ ಸಿನಿಮಾ ಎಲ್ಲ ಪಾತ್ರಗಳಿಗೂ ಮಹತ್ವವಿದೆ. ಪ್ರೇಕ್ಷಕರನ್ನು ಹಿಡಿದಿಡುವ ಎಲ್ಲ ಅಂಶಗಳು ಈ ಸಿನಿಮಾದಲ್ಲಿವೆ’ ಎಂದಿದ್ದಾರೆ ರಾಗಿಣಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








