ತಿರುಪತಿಯಲ್ಲಿ ತೆಲುಗು ನಟ ಮಂಚು ಮನೋಜ್ ಪೊಲೀಸ್ ವಶಕ್ಕೆ; ಕಾರಣ ನಿಗೂಢ
ತಂದೆ ಮತ್ತು ಸಹೋದರನ ಜೊತೆ ಕಿರಿಕ್ ಮಾಡಿಕೊಂಡಿದ್ದ ಟಾಲಿವುಡ್ ನಟ ಮಂಚು ಮನೋಜ್ ಅವರು ಈಗ ಇನ್ನೊಂದು ಕಾರಣಕ್ಕೆ ಸುದ್ದಿ ಆಗಿದ್ದಾರೆ. ತಿರುಪತಿಯಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಫ್ಯಾಮಿಲಿ ಕಿರಿಕ್ ಕಾರಣಕ್ಕೆ ಕೆಲವು ದಿನಗಳ ಹಿಂದೆ ಸುದ್ದಿ ಆಗಿದ್ದ ಟಾಲಿವುಡ್ ನಟ ಮಂಚು ಮನೋಜ್ ಅವರಿಗೆ ಈಗ ಹೊಸ ಸಂಕಷ್ಟ ಶುರುವಾಗಿದೆ. ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಿರುಪತಿಯಲ್ಲಿ ಸೋಮವಾರ (ಫೆಬ್ರವರಿ 17) ರಾತ್ರಿ ಅವರನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಆಗಿದೆ. ಈಗ ಮಂಚು ಮನೋಜ್ ಅವರು ಬಾಕರಪೇಟ್ ಪೊಲೀಸರ ವಶದಲ್ಲಿ ಇದ್ದಾರೆ. ಆದರೆ ಅವರನ್ನು ಪೋಲಿಸರು ಕರೆದುಕೊಂಡು ಹೋಗಲು ಕಾರಣ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಪೊಲೀಸರ ಜೊತೆ ಮಂಚು ಮನೋಜ್ ಮಾತನಾಡುತ್ತಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಂಚು ಮನೋಜ್ ಮತ್ತು ಅವರ ಪತ್ನಿ ಭುಮಾ ಮೌನಿಕಾ ಅವರು ತಿರುಪತಿಗೆ ತೆರಳಿದ್ದರು. ಅಲ್ಲಿನ ಚಂದ್ರಗಿರಿಯಲ್ಲಿ ನಡೆದ ಜಲ್ಲಿಕಟ್ಟು ಆಚರಣೆಯಲ್ಲಿ ಅವರು ಪಾಲ್ಗೊಂಡರು. ಆ ಸಮಾರಂಭಕ್ಕೆ ಮಂಚು ಮನೋಜ್ ಅವರು ಮುಖ್ಯ ಅತಿಥಿ ಆಗಿದ್ದರು. ಟಿಡಿಪಿ ಮತ್ತು ಜನಸೇನಾ ಪಕ್ಷದ ಬೆಂಬಲಿಗರಿಂದ ಮಂಚು ಮನೋಜ್ ಅವರಿಗೆ ಸ್ವಾಗತ ಕೋರಲಾಗಿತ್ತು. ಆದರೆ ನಂತರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಅಚ್ಚರಿ ಮೂಡಿಸಿದೆ.
ತಿರುಪತಿಗೆ ಭೇಟಿ ನೀಡಿದ್ದಾಗ ಮಂಚು ಮನೋಜ್ ಅವರು ಆಂಧ್ರ ಪ್ರದೇಶ ಸಚಿವ ನಾರಾ ಲೋಕೇಶ್ ಅವರನ್ನು ಭೇಟಿ ಆಗಿದ್ದರು ಎನ್ನಲಾಗಿದೆ. ತಂದೆ ಮೋಹನ್ ಬಾಬು ಮತ್ತು ಸಹೋದರ ಮಂಚು ವಿಷ್ಣು ಜೊತೆ ಎದುರಾಗಿರುವ ಬಿಕ್ಕಟ್ಟು ಪರಿಹಾರ ಮಾಡಲು ನಾರಾ ಲೋಕೇಶ್ ಬಳಿ ಮಂಚು ಮನೋಜ್ ಸಹಾಯ ಕೇಳಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: ‘ನನ್ನ ತಂದೆ ದೇವರು’ ಮೋಹನ್ ಬಾಬು ಪರವಾಗಿ ಕ್ಷಮೆ ಕೇಳಿ ಕಣ್ಣೀರು ಹಾಕಿದ ಮಂಚು ಮನೋಜ್
ನಾರಾ ಲೋಕೇಶ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಂಚು ಮನೋಜ್ ಅವರು ಮಾತನಾಡಿದ್ದರು. ‘ಯಾರೊಬ್ಬರ ರಾಜಕೀಯದ ಭವಿಷ್ಯವನ್ನು ಊಹಿಸಲು ಸಾಧ್ಯವಿಲ್ಲ. ಅದು ನಮ್ಮ ಕೈಯಲ್ಲಿ ಇಲ್ಲ. ಅದು ದೇವರ ಕೈಯಲ್ಲಿ ಇದೆ’ ಎಂದು ಮಂಚು ಮನೋಜ್ ಹೇಳಿದ್ದರು. ಪೊಲೀಸರು ವಶಕ್ಕೆ ಪಡೆದ ಬಳಿಕ ಅವರು ಕೆಲವರಿಗೆ ಮೊಬೈಲ್ ಮೂಲಕ ಕರೆಮಾಡಿ ಮಾತನಾಡಿದ್ದಾರೆ ಎನ್ನಲಾಗಿದೆ. ಅವರ ಮೇಲೆ ಯಾವ ಆರೋಪ ಎದುರಾಗಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




