ರಶ್ಮಿಕಾಗೆ ಮತ್ತೆ ಬಂಪರ್ ಆಫರ್, ಸ್ಟಾರ್ ನಟನೊಟ್ಟಿಗೆ ‘ಪುಷ್ಪ’ ನಿರ್ದೇಶಕನ ಸಿನಿಮಾದಲ್ಲಿ ನಟನೆ
Rashmika Mandanna: ನಟಿ ರಶ್ಮಿಕಾ ಮಂದಣ್ಣ ಅದೃಷ್ಟ ನಟಿಯೆಂದು ಹೆಸರಾಗಿದ್ದಾರೆ. ರಶ್ಮಿಕಾ ನಟನೆಯ ಕಳೆದ ಮೂರು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ‘ಅನಿಮಲ್’, ‘ಪುಷ್ಪ 2’ ಇದೀಗ ‘ಛಾವಾ’. ಈಗ ರಶ್ಮಿಕಾ ಮತ್ತೊಮ್ಮೆ ‘ಪುಷ್ಪ 2’ ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸ್ಟಾರ್ ಹೀರೋ ಈ ಸಿನಿಮಾದ ನಾಯಕ.

ರಶ್ಮಿಕಾ ಮಂದಣ್ಣ ಅದೃಷ್ಟದ ನಟಿ. ಕನ್ನಡದ ಸಿನಿಮಾದಿಂದ ನಟನಾ ವೃತ್ತಿ ಆರಂಭಿಸಿದ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಈಗ ತೆಲುಗು ಚಿತ್ರರಂಗ ಹಾಗೂ ಬಾಲಿವುಡ್ನಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಅದೃಷ್ಟದ ನಟಿ ಎಂದೇ ಹೆಸರುಪಡೆದುಕೊಂಡಿದ್ದಾರೆ ರಶ್ಮಿಕಾ ಮಂದಣ್ಣ. ಇತ್ತೀಚೆಗಂತೂ ರಶ್ಮಿಕಾ ಮಂದಣ್ಣ ನಟಿಸಿದ ಎಲ್ಲ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗುತ್ತಿವೆ. ‘ಅನಿಮಲ್’, ‘ಪುಷ್ಪ 2’ ಈಗ ‘ಛಾವಾ’ ಸಿನಿಮಾಗಳು ಭಾರಿ ದೊಡ್ಡ ಕಲೆಕ್ಷನ್ ಮಾಡಿವೆ. ಇದರ ನಡುವೆ ರಶ್ಮಿಕಾ ಮಂದಣ್ಣಗೆ ಮತ್ತೊಂದು ಬಂಪರ್ ಆಫರ್ ಅರಸಿ ಬಂದಿದೆ.
‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾ ನಿರ್ದೇಶನ ಮಾಡಿರುವ ಸುಕುಮಾರ್ ಅವರ ಹೊಸ ಸಿನಿಮಾದಲ್ಲಿ ನಟಿಸುವ ಅವಕಾಶ ರಶ್ಮಿಕಾ ಮಂದಣ್ಣಗೆ ದೊರೆತಿದೆ. ಅದೂ ಪ್ಯಾನ್ ಇಂಡಿಯಾ ಸ್ಟಾರ್ ನಟ ಈ ಸಿನಿಮಾಕ್ಕೆ ನಾಯಕ ಆಗಿದ್ದಾರೆ. ‘ಪುಷ್ಪ 2’ ಸಿನಿಮಾ ಚಿತ್ರೀಕರಣದ ಸಮಯದಲ್ಲಿಯೇ ಸುಕುಮಾರ್, ತಮ್ಮ ಮುಂದಿನ ಸಿನಿಮಾವನ್ನು ರಾಮ್ ಚರಣ್ಗಾಗಿ ಮಾಡುವುದಾಗಿ ಘೋಷಣೆ ಮಾಡಿದ್ದರು. ಅಂತೆಯೇ ಇದೀಗ ರಾಮ್ ಚರಣ್ ಹಾಗೂ ಸುಕುಮಾರ್ ಸಿನಿಮಾಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ಈ ಸಿನಿಮಾದ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅನ್ನು ಆಯ್ಕೆ ಮಾಡಲಾಗಿದೆ.
‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾದ ಮೂಲಕ ಸುಕುಮಾರ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ರಶ್ಮಿಕಾ ಮಂದಣ್ಣ, ಸುಕುಮಾರ್ ಅವರ ಬಗ್ಗೆ ಪ್ರತ್ಯೇಕ ಇನ್ಸ್ಟಾಗ್ರಾಂ ಪೋಸ್ಟ್ ಒಂದನ್ನು ‘ಪುಷ್ಪ 2’ ಸಿನಿಮಾ ಬಿಡುಗಡೆ ಸಮಯದಲ್ಲಿ ಹಂಚಿಕೊಂಡಿದ್ದರು. ಇದೀಗ ಸುಕುಮಾರ್ ಅವರ ಹೊಸ ಸಿನಿಮಾಕ್ಕೆ ಮತ್ತೊಮ್ಮೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಆ ಮೂಲಕ ಸುಕುಮಾರ್ ನಿರ್ದೇಶನದ ಮೂರು ಸಿನಿಮಾದಲ್ಲಿ ಸಹ ನಾಯಕಿಯಾಗಿ ನಟಿಸಿದ ಶ್ರೇಯವನ್ನು ರಶ್ಮಿಕಾ ಪಡೆದುಕೊಳ್ಳಲಿದ್ದಾರೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಗುಲಾಬಿ ಹೂವು ನೀಡಿದ ಪ್ರೇಮಿ: ಆ ವ್ಯಕ್ತಿ ಮೇಲೆ ಎಲ್ಲರ ಅನುಮಾನ
ಸುಕುಮಾರ್ ಹಾಗೂ ರಾಮ್ ಚರಣ್ ಈ ಹಿಂದೆ ‘ರಂಗಸ್ಥಳಂ’ ಸಿನಿಮಾಕ್ಕಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ಸೋತು ಬವಳಿದ್ದ ರಾಮ್ ಚರಣ್ಗೆ ‘ರಂಗಸ್ಥಲಂ’ ಸಿನಿಮಾ ಬ್ಲಾಕ್ ಬಸ್ಟರ್ ತಂದು ಕೊಟ್ಟಿತ್ತು. ಆ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸಿದ್ದರು. ಇದೀಗ ಮತ್ತೊಮ್ಮೆ ಸುಕುಮಾರ್ ಮತ್ತು ರಾಮ್ ಚರಣ್ ಒಂದಾಗುತ್ತಿದ್ದಾರೆ. ಆದರೆ ಈ ಸಿನಿಮಾ ಹಳ್ಳಿ ಹಿನ್ನೆಲೆಯ ಸಿನಿಮಾ ಅಲ್ಲವಂತೆ ಬದಲಿಗೆ ಭವಿಷ್ಯದ ಕತೆಯನ್ನು ಸಿನಿಮಾ ಒಳಗೊಂಡಿರಲಿದೆ ಎನ್ನಲಾಗುತ್ತಿದೆ.
ರಾಮ್ ಚರಣ್ ಪ್ರಸ್ತುತ ಸುಕುಮಾರ್ ಅವರ ಸಹಾಯಕನಾಗಿದ್ದ ಬುಚ್ಚಿಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಪ್ರಸ್ತುತ ಐದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಸಿಖಂಧರ್’, ಧನುಶ್ ನಟನೆಯ ‘ಕುಬೇರ’, ತೆಲುಗಿನ ‘ಗರ್ಲ್ಫ್ರೆಂಡ್’, ಹಿಂದಿಯಲ್ಲಿ ನವಾಜುದ್ದೀನ್ ಸಿದ್ಧಿಖಿ, ಆಯುಷ್ಮಾನ್ ಖುರಾನಾ ನಟನೆಯ ‘ತಮ’, ವಿಜಯ್ ದೇವರಕೊಂಡ ನಟನೆಯ ‘ಗೀತ ಗೋವಿಂದಂ 2’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಇದೀಗ ರಾಮ್ ಚರಣ್ ನಟನೆಯ ಸಿನಿಮಾ ಸಹ ದೊರೆತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




