
ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ. ತೆಲುಗು ಚಿತ್ರರಂಗದ ಲಿಜೆಂಡ್ಗಳಲ್ಲಿ ಒಬ್ಬರು. ರಾಜಕೀಯಕ್ಕೆ ಹೋಗಿ ಚಿತ್ರರಂಗದಿಂದ ದೂರಾಗಿದ್ದ ಚಿರಂಜೀವಿ ಬಳಿಕ ರಾಜಕೀಯ ತೊರೆದು ಸಂಪೂರ್ಣವಾಗಿ ಮತ್ತೆ ಚಿತ್ರರಂಗಕ್ಕೆ ತೊಡಗಿಸಿಕೊಂಡರು. ಆದರೆ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. 2019ರ ಬಳಿಕ ಚಿರಂಜೀವಿ ನಟಿಸಿದ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದರು. ನಾಲ್ಕೂ ಸಿನಿಮಾಗಳು ಸೋತಿದ್ದವು. ಇದೀಗ ಕೊನೆಗೂ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಮೂಲಕ ಗೆಲುವು ಸಾಧಿಸಿದ್ದಾರೆ ನಟ ಚಿರಂಜೀವಿ.
ಅನಿಲ್ ರವಿಪುಡಿ ನಿರ್ದೇಶನದ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಜನವರಿ 12 ರಂದು ಬಿಡುಗಡೆ ಆಗಿದ್ದು, ಮೊದಲ ದಿನ ಭರ್ಜರಿ ಗಳಿಕೆ ಮಾಡಿದೆ. ಸಿನಿಮಾ ನೋಡಿದ ಬಹುತೇಕ ಮಂದಿ ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ಸಂಕ್ರಾಂತಿಗೆ ಬಿಡುಗಡೆ ಆದ ಪಕ್ಕಾ ಎಂಟರ್ಟೈನರ್’ ಎಂದು ವಿಮರ್ಶಕರು ಸಹ ಕೊಂಡಾಡಿದ್ದಾರೆ. ಆ ಮೂಲಕ ಈ ಸಂಕ್ರಾಂತಿಗೆ ತೆಲುಗು ಚಿತ್ರರಂಗದಲ್ಲಿ ಹಿಟ್ ಸಿನಿಮಾ ಆಗುವ ಎಲ್ಲ ಲಕ್ಷಣಗಳನ್ನು ಚಿರಂಜೀವಿ ನಟನೆಯ ‘ಮನ ಶಂಕರ ವರ ಪ್ರಸಾದ್’ ಸಿನಿಮಾ ತೋರಿಸಿದೆ.
‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ಸುಮಾರು 38 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಭಾರತದ ಬಾಕ್ಸ್ ಆಫೀಸ್ ಲೆಕ್ಕಾಚಾರವಾಗಿದೆ. ಸಿನಿಮಾ ಅಡ್ವಾನ್ಸ್ ಬುಕಿಂಗ್ನಿಂದಲೇ ಸುಮಾರು 10-12 ಕೋಟಿ ಗಳಿಕೆ ಮಾಡಿತ್ತು. ಬಳಿಕ ಸಿನಿಮಾ ಬಿಡುಗಡೆ ಆದ ದಿನ ಅಂದರೆ ಸೋಮವಾರದಂದು 28.7 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಸಿದೆ. ಆ ಮೂಲಕ ಭಾರತದ ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನ ಸುಮಾರು 40 ಕೋಟಿ ವರೆಗೂ ಆಗಿದೆ. ವಿದೇಶಗಳಲ್ಲಿ ವಿಶೇಷವಾಗಿ ಉತ್ತರ ಅಮೆರಿಕದಲ್ಲಿ ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡಿದ್ದು, ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸುಮಾರು 15 ಕೋಟಿ ಗಳಿಕೆ ಆಗಿದೆ ಎನ್ನಲಾಗುತ್ತಿದೆ. ಆ ಮೂಲಕ ಸಿನಿಮಾದ ಒಟ್ಟು ಕಲೆಕ್ಷನ್ 55 ಕೋಟಿ ದಾಟಿದೆ.
ಇದನ್ನೂ ಓದಿ:ಈ ವರ್ಷವೂ ಬಿಡುಗಡೆ ಆಗಲ್ಲ ಮೆಗಾಸ್ಟಾರ್ ಚಿರಂಜೀವಿ ಸಿನಿಮಾ
ಚಿರಂಜೀವಿಯ ಈ ಹಿಂದಿನ ಸಿನಿಮಾ ‘ಭೋಲಾ ಶಂಕರ್’ ಗಳಿಸಿದ್ದ ಒಟ್ಟು ಮೊತ್ತವೇ 45 ಕೋಟಿ ಆಗಿತ್ತು. ಆದರೆ ಈ ಮೊತ್ತವನ್ನು ಮೊದಲ ದಿನವೇ ಹಿಂದಿಕ್ಕಿದೆ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ. ಚಿರಂಜೀವಿಯ ಈ ಹಿಂದಿನ ಕೆಲ ಸಿನಿಮಾಗಳಿಗೆ ಹೋಲಿಸಿದರೆ ಯಾವುದೇ ಅತಿಯಾದ ಆಕ್ಷನ್ ಇಲ್ಲದೆ, ಅತಿಯಾದ ಸಾಮಾಜಿಕ ಸಂದೇಶ, ಒಣ ಭಾಷಣಗಳು ಇಲ್ಲದೆ, ಕೇವಲ ಮನೊರಂಜನೆಗಾಗಿ ಮಾಡಿದ ಸಿನಿಮಾ ಇದಾಗಿದ್ದು, ಇದೇ ಕಾರಣಕ್ಕೆ ಜನರಿಗೆ ಸಿನಿಮಾ ಬಹಳ ಇಷ್ಟವಾಗಿದೆ. ಭರಪೂರ ಹಾಸ್ಯ, ಅದರಲ್ಲೂ ಸ್ವತಃ ಚಿರಂಜೀವಿಯೇ ಹಾಸ್ಯ ದೃಶ್ಯಗಳಲ್ಲಿ ನಟಿಸಿರುವುದು ಪ್ರೇಕ್ಷಕರಿಗೆ ಬಹುವಾಗಿ ಹಿಡಿಸಿದೆ.
ಸಿನಿಮಾನಲ್ಲಿ ಚಿರಂಜೀವಿ ಜೊತೆಗೆ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಸಹ ನಟಿಸಿದ್ದು ಸಿನಿಮಾಕ್ಕೆ ಪಾಸಿಟಿವ್ ಆಗಿ ಪರಿಣಮಿಸಿದೆ. ಸಿನಿಮಾನಲ್ಲಿ ನಯನತಾರಾ ಮತ್ತು ಕ್ಯಾತರೀನ್ ಥೆರೆಸಾ ನಾಯಕಿ. ಸಿನಿಮಾ ನಿರ್ದೇಶನ ಮಾಡಿರುವುದು ಅನಿಲ್ ರವಿಪುಡಿ. ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆದ ಅನಿಲ್ ರವಿಪೂಡಿ ನಿರ್ದೇಶನದ ಎಲ್ಲ ಸಿನಿಮಾಗಳು ಹಿಟ್ ಆಗಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Tue, 13 January 26