ಈ ವರ್ಷವೂ ಬಿಡುಗಡೆ ಆಗಲ್ಲ ಮೆಗಾಸ್ಟಾರ್ ಚಿರಂಜೀವಿ ಸಿನಿಮಾ
Megastar Chiranjeevi: 2017 ರಲ್ಲಿ ರಾಜಕೀಯ ಬಿಟ್ಟು ಮತ್ತೆ ಸಿನಿಮಾಗಳೆಡೆಗೆ ಚಿರಂಜೀವಿ ಬಂದರಾದರೂ ದೊಡ್ಡ ಹಿಟ್ ಒಂದು ಅವರಿಗೆ ಸಿಗಲಿಲ್ಲ. ಹಾಗೆಂದು ಅವರ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ. ಆದರೆ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡುತ್ತಿಲ್ಲ ಚಿರಂಜೀವಿ. ಈಗಾಗಲೇ ಎರಡು ವರ್ಷವಾಗಿದೆ ಚಿರು ಸಿನಿಮಾ ಬಿಡುಗಡೆ ಆಗಿದೆ. ಆದರೆ ಇನ್ನೂ ಹಲವು ತಿಂಗಳು ಚಿರು ಸಿನಿಮಾಕ್ಕಾಗಿ ಅಭಿಮಾನಿಗಳು ಕಾಯಬೇಕಿದೆ.

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಭಾರತದ ಸ್ಟಾರ್ ನಟರುಗಳಲ್ಲಿ ಒಬ್ಬರು. ಒಂದು ಸಮಯದಲ್ಲಿ ಅಮಿತಾಬ್ ಬಚ್ಚನ್ಗಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ನಟರಾಗಿದ್ದರು ಚಿರಂಜೀವಿ. ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿ ಸಂಘಗಳನ್ನು ಹೊಂದಿದ್ದ ನಟರಾಗಿದ್ದರು. ರಾಜಕೀಯಕ್ಕೆ ಹೋದ ಬಳಿಕ ಸಿನಿಮಾಗಳಿಂದ ದೂರವಾಗಿದ್ದ ಚಿರು, 2017 ರಲ್ಲಿ ರಾಜಕೀಯ ಬಿಟ್ಟು ಮತ್ತೆ ಸಿನಿಮಾಗಳೆಡೆಗೆ ಬಂದರಾದರೂ ದೊಡ್ಡ ಹಿಟ್ ಒಂದು ಅವರಿಗೆ ಸಿಗಲಿಲ್ಲ. ಹಾಗೆಂದು ಅವರ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ. ಆದರೆ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡುತ್ತಿಲ್ಲ ಚಿರಂಜೀವಿ.
ಚಿರಂಜೀವಿ ನಟನೆಯ ಸಿನಿಮಾ ಒಂದು ಬಿಡುಗಡೆ ಆಗಿ ಈಗಾಗಲೇ ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಚಿರಂಜೀವಿ ನಟಿಸಿದ್ದ ‘ಭೋಲಾ ಶಂಕರ್’ ಸಿನಿಮಾ 2023ರ ಆಗಸ್ಟ್ನಲ್ಲಿ ಬಿಡುಗಡೆ ಆಗಿತ್ತು. 2024ರಲ್ಲಿ ಚಿರಂಜೀವಿ ನಟನೆಯ ಯಾವ ಸಿನಿಮಾಗಳೂ ಸಹ ಬಿಡುಗಡೆ ಆಗಲಿಲ್ಲ. ಈ ವರ್ಷವಾದರೂ ಸಿನಿಮಾ ಬಿಡುಗಡೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ.
ಚಿರಂಜೀವಿ ನಟಿಸುತ್ತಿರುವ ‘ವಿಶ್ವಂಭರ’ ಸಿನಿಮಾ ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗುವುದಕ್ಕಿತ್ತು, ಆದರೆ ಅನಿವಾರ್ಯ ಕಾರಣಗಳಿಂದಾಗಿ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿತು. ಇದೀಗ ಹೊರಬಿದ್ದಿರುವ ಮಾಹಿತಿಯಂತೆ ‘ವಿಶ್ವಂಭರ’ ಸಿನಿಮಾ ಈ ವರ್ಷ ಬಿಡುಗಡೆ ಆಗುವುದಿಲ್ಲವಂತೆ. ಸಿನಿಮಾ ಮುಂದಿನ ವರ್ಷ ಅಂದರೆ 2026 ರ ಬೇಸಿಗೆ ಸಮಯಕ್ಕೆ ಬಿಡುಗಡೆ ಆಗಲಿದೆಯಂತೆ.
ಇದನ್ನೂ ಓದಿ:ಒಂದು ಲಕ್ಷ ರೂಪಾಯಿ ಸಹಾಯ ನಿರೀಕ್ಷೆಯಲ್ಲಿದ್ದವನಿಗೆ 1 ಕೋಟಿ ಕೊಟ್ಟ ಚಿರಂಜೀವಿ
ನಾಳೆ (ಆಗಸ್ಟ್ 22) ಚಿರಂಜೀವಿ ಹುಟ್ಟುಹಬ್ಬವಿದ್ದು, ಅದೇ ದಿನ ಸಿನಿಮಾದ ಸಣ್ಣ ಟೀಸರ್ ಒಂದು ಬಿಡುಗಡೆ ಆಗಲಿದೆ. ಈ ಬಗ್ಗೆ ವಿಡಿಯೋನಲ್ಲಿ ಮಾತನಾಡಿರುವ ಚಿರಂಜೀವಿ, ‘ವಿಶ್ವಂಭರ’ ಸಿನಿಮಾ ಸಂಪೂರ್ಣವಾಗಿ ಗ್ರಾಫಿಕ್ಸ್ ಮತ್ತು ವಿಎಫ್ಎಕ್ಸ್ ಹೊಂದಿರುವ ಸಿನಿಮಾ. ಅವುಗಳೇ ಸಿನಿಮಾದ ಪ್ರಧಾನ ಅಂಶ ಹಾಗಾಗಿ ಸಿನಿಮಾದ ನಿರ್ಮಾಣ ಪ್ರಕ್ರಿಯೆ ತಡವಾಗುತ್ತಿದೆ. ಆ ಸಿನಿಮಾವನ್ನು ಪ್ಯಾಷನ್ ಮತ್ತು ಅತ್ಯಂತ ಕಾಳಜಿಯಿಂದ ನಿರ್ಮಾಣ ಮಾಡುತ್ತಿದ್ದೇವೆ’ ಎಂದು ಚಿರಂಜೀವಿ ಹೇಳಿದ್ದಾರೆ.
‘ವಿಶ್ವಂಭರ’ ಸಿನಿಮಾ ಪೌರಾಣಿಕ ಹಿನ್ನೆಲೆಯುಳ್ಳ ಕಾಲ್ಪನಿಕ ಕತೆಯಾಗಿದ್ದು, ಚಿರಂಜೀವಿ ನಟನೆಯ ಈ ಹಿಂದಿನ ‘ಅಂಜಿ’ ಸಿನಿಮಾದ ಮಾದರಿಯ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ತ್ರಿಷಾ ಕೃಷ್ಣನ್ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಆಶಿಕಾ ರಂಗನಾಥ್, ಇಶಾ ಚಾವ್ಲಾ ಸಹ ಇದ್ದಾರೆ. ಮಲ್ಲಿಡಿ ವಸಿಷ್ಠ ಈ ಸಿನಿಮಾದ ನಿರ್ದೇಶನ ಮಾಡಿದ್ದು, ಪ್ರಭಾಸ್ ಸಹಭಾಗಿತ್ವ ಹೊಂದಿರುವ ಯುವಿ ಕ್ರಿಯೇಷನ್ಸ್ ಈ ಸಿನಿಮಾದ ನಿರ್ಮಾಣ ಮಾಡುತ್ತಿದೆ. ಸಿನಿಮಾಕ್ಕೆ ಆಸ್ಕರ್ ವಿಜೇತ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ.
‘ವಿಶ್ವಂಭರ’ ಹೊರತುಪಡಿಸಿ ಚಿರಂಜೀವಿ ಕೈಯಲ್ಲಿ ಇನ್ನೂ ಎರಡು ಸಿನಿಮಾಗಳಿವೆ. ಅನಿಲ್ ರವಿಪುಡಿ ನಿರ್ದೇಶನ ಮಾಡಿ, ನಯನತಾರಾ ನಾಯಕಿಯಾಗಿ ನಟಿಸುತ್ತಿರುವ ಆಕ್ಷನ್ ಕಾಮಿಡಿ ಸಿನಿಮಾನಲ್ಲಿ ಚಿರಂಜೀವಿ ನಾಯಕ. ಅದರ ಹೊರತಾಗಿ ನಟ ನಾನಿ ನಿರ್ಮಾಣ ಮಾಡುತ್ತಿರುವ ವೈಯಲೆಂಟ್ ಸಿನಿಮಾ ಒಂದರಲ್ಲಿ ಚಿರಂಜೀವಿ ನಾಯಕರಾಗಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:48 am, Thu, 21 August 25




