‘ನಮ್ಮ ಮಧ್ಯೆ ಎಲ್ಲವೂ ಸರಿ ಇದೆ’; ವದಂತಿಗಳಿಗೆ ಪಾರ್ವತಿ ಮೆನನ್ ಸ್ಪಷ್ಟನೆ

|

Updated on: Aug 23, 2024 | 7:34 AM

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿ ಗತಿ ಬಗ್ಗೆ ಅಧ್ಯಯನ ನಡೆಸಿರುವ ಹೇಮಾ ವರದಿಯನ್ನು ಇತ್ತೀಚೆಗಷ್ಟೆ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಲ್ಲಿಸಲಾಯ್ತು. ಇದರಲ್ಲಿ ಸಾಕಷ್ಟು ವಿಚಾರಗಳನ್ನು ಹೇಳಲಾಗಿದೆ. ಈ ಬಗ್ಗೆ ಪಾರ್ವತಿ ಮೆನನ್ ಮಾತನಾಡಿದ್ದಾರೆ.

‘ನಮ್ಮ ಮಧ್ಯೆ ಎಲ್ಲವೂ ಸರಿ ಇದೆ’; ವದಂತಿಗಳಿಗೆ ಪಾರ್ವತಿ ಮೆನನ್ ಸ್ಪಷ್ಟನೆ
ಪಾರ್ವತಿ ಮೆನನ್
Follow us on

2017ರಲ್ಲಿ ಮಲಯಾಳಂ ನಟಿಯ ಮೇಲೆ ನಡೆದ ಅತ್ಯಾಚಾರ ಯತ್ನ ಪ್ರಕರಣದ ಬಳಿಕ ಹೇಮಾ ಸಮಿತಿಯನ್ನು ಸ್ಥಾಪಿಸಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಹೇಮಾ, ನಿವೃತ್ತ ಐಎಎಸ್ ಅಧಿಕಾರಿ, ಹಿರಿಯ ನಟಿ ಶಾರದಾ ಇನ್ನಿತರರನ್ನು ಈ ಸಮಿತಿ ಒಳಗೊಂಡಿತ್ತು. 2019ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿತ್ತು. ಇದರಲ್ಲಿ ಸಾಕಷ್ಟು ಆಘಾತಕಾರಿ ವಿಚಾರಗಳನ್ನು ಹೇಳಲಾಗಿದೆ ಎಂಬ ವಿಚಾರ ಈಗ ರಿವೀಲ್ ಆಗಿದೆ. ಮಲಯಾಳಂ ಕಲಾವಿದರ ಮೇಲೆ ನಿರಂತರವಾಗಿ ಕಿರುಕುಳ ನಡೆಯುತ್ತಲೇ ಇದೆ ಎಂದು ಸಮಿತಿಯಲ್ಲಿ ಹೇಳಲಾಗಿತ್ತು. ಆದರೆ, ಇದನ್ನು ಪಾರ್ವತಿ ಮೆನನ್ ಅವರು ತಳ್ಳಿ ಹಾಕಿದ್ದಾರೆ.

‘ಜನರು ಹೇಳುವುದಕ್ಕೆ ನನ್ನ ಸಮ್ಮತಿ ಇಲ್ಲ. ಮಲಯಾಳಂ ಇಂಡಸ್ಟ್ರಿ ಒಳಗೆ ತುಂಬಾ ಕೊಳೆತು ಹೋಗಿದೆ ಎಂದು ವರದಿಯಲ್ಲಿ ಇದೆ. ನಾವು ಒಳಗಿನಿಂದ ಚೆನ್ನಾಗಿಯೇ ಇದ್ದೇವೆ. ಹೀಗಾಗಿಯೇ ನಾವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಿದ್ದೇವೆ. ಯಾವುದಾದರೂ ಜಾಗದಿಂದ ಯಾವುದೇ ವಿಚಾರವೂ ಕೇಳುತ್ತಿಲ್ಲ ಎಂದರೆ ಆಗ ನೀವು ಚಿಂತಿಸಬೇಕು’ ಎಂದಿದ್ದಾರೆ ಅವರು.

‘2019ರಲ್ಲಿ ವರದಿ ಸಲ್ಲಿಕೆ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ ನಾವು ಸಾಕಷ್ಟು ಹೋರಾಟ ಮಾಡಿದ್ದೇವೆ. ಈಗ ಸರ್ಕಾರ ವರದಿಯಲ್ಲಿ ಏನಿದೆ ಎಂಬುದನ್ನು ರಿವೀಲ್ ಮಾಡಿದೆ’ ಎಂದು ಅವರು ಹೇಳಿದ್ದಾರೆ. ಪಾರ್ವತಿ ಮೆನನ್ ಅವರು ‘ಮಿಲನ’ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟರು. ಆ ಬಳಿಕ ‘ಪೃಥ್ವಿ’, ‘ಅಂದರ್ ಬಾಹರ್’ ಸಿನಿಮಾಗಳಲ್ಲಿ ನಟಿಸಿದರು.

ಇದನ್ನೂ ಓದಿ: ಮಲಯಾಳಂ ಚಿತ್ರರಂಗದ ಕರಾಳ ಮುಖ ತೆರೆದಿಟ್ಟ ಹೇಮಾ ಸಮಿತಿ ವರದಿ

ವರದಿಯಲ್ಲಿ ಸಾಕಷ್ಟು ವಿಚಾರಗಳನ್ನು ರಿವೀಲ್ ಮಾಡಲಾಗಿದೆ. ಮಲಯಾಳಂ ನಟಿಯರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಅನವಶ್ಯಕವಾಗಿ ಅಡ್ವಾನ್ಸ್ ಹಣ ನೀಡಿ, ಪರೋಕ್ಷವಾಗಿ ಅಡ್ಜಸ್ಟ್​ಮೆಂಟ್ ಕೇಳುವುದೂ ಆಗುತ್ತಿದೆಯಂತೆ. ಇನ್ನೂ ಹಲವು ಅಂಶಗಳು ಈ ವರದಿಯಲ್ಲಿವೆ. ಹೇಮಾ ವರದಿ ಪ್ರಕಟವಾದ ಬಳಿಕ ಇದೀಗ ಭಾರತದ ಎಲ್ಲ ಚಿತ್ರರಂಗಗಳಲ್ಲಿಯೂ ಇಂಥಹಾ ಒಂದು ಸಮಿತಿ ರಚನೆಯಾಗಿ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನ ಆಗಬೇಕೆಂಬ ಕೂಗು ಕೇಳಿ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.